Advertisement

ಸೋಲು-ಗೆಲುವು ಮುಖ್ಯವಲ್ಲ, ಕ್ರೀಡಾಭಿಮಾನ ಮುಖ್ಯ: ರೋಹನ್‌ ಶೆಟ್ಟಿ

06:06 PM Dec 29, 2019 | Suhan S |

ಪುಣೆ, ಡಿ. 28: ಕ್ರೀಡಾ ಕ್ಷೇತ್ರ ಎಂಬುವುದು ಸ್ಪರ್ಧಾತ್ಮಕ ಕಣವಾಗಿದೆ. ಈ ಸ್ಪರ್ಧಾತ್ಮಕ ಕಣದಲ್ಲಿ ಗೆಲ್ಲುವ ಪಣವನ್ನು ತೊಟ್ಟೇ ಭಾಗವಹಿಸುವ ಮನೋಸ್ಥೈರ್ಯ ಎಲ್ಲರಲ್ಲಿಯೂ ಇರಬೇಕು. ತಮ್ಮಲ್ಲಿರುವ ದೈಹಿಕ ಶಕ್ತಿಯಿಂದ, ಛಲದಿಂದ ಮನೋಬಲದಿಂದ ಆಯ್ದುಕೊಂಡಂತಹ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತೇನೆ ಎಂಬ ದೃಢವಾದ ಸಂಕಲ್ಪ ಇರಬೇಕು. ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ.ಅಭಿಮಾನ ಮುಖ್ಯವಾಗಬೇಕು.  ಸೋಲೇ ಗೆಲುವಿಗೆ ಮೂಲವಾಗಿದ್ದು, ಭಾಗವಹಿಸುವಿಕೆ ಬಹಳ ಮುಖ್ಯ. ಕ್ರೀಡೆಯಲ್ಲಿ ಕೂಡಾ ನಿರಂತರ ಭಾಗ ವಹಿಸುವುದರಿಂದ ದೈಹಿಕ ಶಕ್ತಿಯನ್ನು ಉತ್ತಮ ಮಟ್ಟದಲ್ಲಿ ನಾವು ಪಡೆಯಬಹುದು. ಯಾವುದೇ ಸಮಾಜ ಅಥವಾ ಸಂಘಟನೆ ತಮ್ಮಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದ್ದೇವೆ. ದೇವಾಡಿಗ ಸಂಘವು ಕೂಡಾ ಅದೇ ಉದ್ದೇಶವನ್ನು ಇಟ್ಟುಕೊಂಡು ವರ್ಷಂಪ್ರತಿ ಇಂತಹ ಕ್ರೀಡಾಕೋಟವನ್ನು ಆಯೋಜಿಸುತ್ತಿದ್ದೇವೆ. ಸಮಾಜ ಬಾಂಧವರು ಇಚ್ಛಾಸ್ಫೂರ್ತಿಯಿಂದ ಭಾಗವಹಿಸುವುದು ಮುಖ್ಯ. ಇಲ್ಲಿ ಮನಸ್ಸುಗಳು ಹತ್ತಿರವಾಗಿ ಸ್ನೇಹ ಸಂಬಂಧ ಬೆಳೆಯುತ್ತದೆ ಎಂದು ಪುಣೆ ತುಳು ಕೂಟದ ಯುವ ವಿಭಾಗದ ಅಧ್ಯಕ್ಷರಾದ ನ್ಯಾಯವಾದಿ ರೋಹನ್‌ ಪಿ. ಶೆಟ್ಟಿ ನುಡಿದರು.

Advertisement

ಡಿ. 22ರಂದು ಬೆಳಗ್ಗೆ ಪುಣೆಯ ಯೆರವಾಡ ಮೋಜೆ ಹೈಸ್ಕೂಲ್‌ ಮೈದಾನದಲ್ಲಿ ಪುಣೆ ದೇವಾಡಿಗ ಸಂಘದ ವತಿಯಿಂದ ಸಮಾಜ ಬಾಂಧವರಿಗಾಗಿ ಆಯೋಜಿಸಿರುವ 8ನೇ ವಾರ್ಷಿಕ ಕ್ರೀಡೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ದೀಪ ಬೆಳಗಿಸಿ ಬಲೂನ್‌ ಹಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಸಮಾಜದ ಮಕ್ಕಳು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ವ್ಯಾಯಾಮ ಮತ್ತು ಕ್ರೀಡೆಗೆ ಮಹತ್ವವನ್ನು ಕೊಡಬೇಕು. ಮಕ್ಕಳಿಗೆ ಹಿರಿಯರ ಪ್ರೋತ್ಸಾಹ ಕೂಡ ಸಿಗಬೇಕು. ಇದರಿಂದ ಕ್ರೀಡಾ ಕೂಟಗಳಲ್ಲಿ ಭಾಗವಹಿಸುವ ಮನಸ್ಸು ಮೂಡಿಬರುತ್ತದೆ. ಪುಣೆ ದೇವಾಡಿಗ ಸಂಘದ ಕಾರ್ಯ ಯೋಜನೆಗಳಲ್ಲಿ ಕ್ರೀಡೆಗೆ ಕೂಡ ಮಹತ್ವ ನೀಡಿ ಪ್ರತಿಭೆಗಳಿಗೆ ಅವಕಾಶವನ್ನು ಒದಗಿಸಿಕೊಟ್ಟಿದೆ. ಇದು ನಿರಂತರ ನಡೆಯುತ್ತಿರಲಿ ಎಂದರು.

ಪುಣೆ ದೇವಾಡಿಗ ಸಂಘದ ಅಧ್ಯಕ್ಷ ನಾರಾಯಣ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಸಲಹೆಗಾರ ನರ ಸಿಂಹ ದೇವಾಡಿಗ, ಉಪಾಧ್ಯಕ್ಷ ಸುಧಾಕರ ಜಿ. ದೇವಾಡಿಗ, ಪ್ರಧಾನ ಕಾರ್ಯದರ್ಶಿ ನವೀನ್‌ ದೇವಾಡಿಗ, ಕೋಶಾಧಿಕಾರಿ ಸುರೇಶ್‌ ಶ್ರೀಯಾನ್‌, ಕ್ರೀಡಾ ಕಾರ್ಯದರ್ಶಿ ಯಶವಂತ್‌ ದೇವಾಡಿಗ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುನಿತಾ ವಿ. ದೇವಾಡಿಗ ಪ್ರಾರ್ಥನೆಗೈದರು. ಶಶಿಕಾಂತಿ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಸಮಾಜದ ಕ್ರೀಡಾಪಟುಗಳು ಕ್ರೀಡಾ ಜ್ಯೋತಿಯೊಂದಿಗೆ ಸೇರಿದ ಸಮಾಜ ಬಾಂಧವರು ಪಥ ಸಂಚಲನದೊಂದಿಗೆ ಗಣ್ಯರಿಗೆ ಗೌರವ ಸಲ್ಲಿಸಿದರು. ವಿವಿಧ ವಯೋಮಿತಿಗೆ ಅನುಗುಣವಾಗಿ ನಡೆದ, ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು, ಯುವಕ, ಯುವತಿಯರು, ಮಹಿಳೆಯರು, ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾ ಸ್ಫೂರ್ತಿ ಮೆರೆದರು. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಶ್ರಾಂತ್‌ವಾಡಿಯ ಭಾವನ ಡಾನ್ಸ್‌ ಸ್ಟುಡಿಯೋದ ನಿರ್ದೇಶಕಿ ಭಾವನಾ ರಾಮ್‌ ದೇವಾಡಿಗ ಉಪಸ್ಥಿತರಿದ್ದು ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು.

ಸಂಘದ ಪ್ರಮುಖರಾದ ಪ್ರಕಾಶ್‌ ದೇವಾಡಿಗ, ಜನಾರ್ದನ ದೇವಾಡಿಗ, ಸಂತೋಷ್‌ ದೇವಾಡಿಗ, ವಾಮನ ದೇವಾಡಿಗ, ಜಗದೀಶ್‌ ದೇವಾಡಿಗ, ವಿಟಲ್‌ ದೇವಾಡಿಗ, ಪುರಂದರ ದೇವಾಡಿಗ, ಸತೀಶ್‌ ದೇವಾಡಿಗ, ಉದಯ ದೇವಾಡಿಗ, ಗೀತಾ ಎಂ. ದೇವಾಡಿಗ, ಅಮಿತಾ ಎಸ್‌. ದೇವಾಡಿಗ ಮತ್ತು ಸದಸ್ಯರು, ಸಮಾಜ ಬಾಂಧವರು ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸಿದರು. ಸಂಘದ ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ವಿನೋದಾ ಎಸ್‌. ದೇವಾಡಿಗ ವಂದಿಸಿದರು.

Advertisement

 

ಚಿತ್ರ-ವರದಿ: ಹರೀಶ್‌ ಮೂಡಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next