Advertisement

ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ಸಂಚಲನ

11:32 PM Jan 30, 2022 | Team Udayavani |

ರಾಜ್ಯ ರಾಜಕಾರಣದಲ್ಲಿ ಕಾಲಕ್ಕೆ ತಕ್ಕಂತೆ ಲೆಕ್ಕಾಚಾರ ಬದಲಾಗುತ್ತಲೇ ಇರುತ್ತದೆ. ಸ್ವ ಸಾಮರ್ಥ್ಯದಿಂದ ಗೆಲ್ಲುವ ಕುದುರೆಗಳು ಎಂದು ಬಿಂಬಿತರಾಗಿರುವವರು ಇಲ್ಲಿರುವುದು ಸುಮ್ಮನೆ ಎಂದು ಬೇರೆಲ್ಲೋ ಗುರಿ ನೆಟ್ಟಿರುತ್ತಾರೆ. ತಮಗೆ ಅದಕ್ಕೆ ತಕ್ಕಂತೆ ಪ್ರಮುಖ ನಾಯಕರ ಸಂಪರ್ಕದಲ್ಲೂ ಇರುತ್ತಾರೆ. ಇದು ಕೇವಲ ಟಿಕೆಟ್‌ ಪಡೆಯುವುದಕ್ಕಷ್ಟೇ ಅಲ್ಲ, ತಮ್ಮ ಎದುರಾಳಿ ಪಕ್ಷದಿಂದ ಚುನಾವಣೆಯಲ್ಲಿ “ಡೀಲಾ’ ಅಭ್ಯರ್ಥಿ ಹಾಕಲು ಸಂ”ಬಂಧ’ ಸಹಕಾರಿಯಾಗಬಹುದು ಎಂಬ ದೂರಾಲೋಚನೆ ಇದರ ಹಿಂದೆ ಇರುತ್ತದೆ. ಆದರೆ ಒಂದು ಪಕ್ಷದಲ್ಲಿರುವಾಗ ಮತ್ತೂಂದು ಪಕ್ಷದ ನಾಯಕರ ಜತೆಗಿನ ಆತ್ಮೀಯ ಸಂಬಂಧದಿಂದ ರಾಜಕಾರಣದಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದು ಆಗುವುದೇ ಹೆಚ್ಚು.

Advertisement

ರಾಜ್ಯ ವಿಧಾನಸಭೆ ಚುನಾವಣೆಗೆ 15 ತಿಂಗಳು ಬಾಕಿ ಇರುವಾಗಲೇ ಪಕ್ಷಾಂತರ ವಿಚಾರ ರಾಜಕೀಯವಾಗಿ ಕೋಲಾಹಲ ಎಬ್ಬಿಸಿದ್ದಂತೂ ಹೌದು. ಇದ್ದಕ್ಕಿದ್ದಂತೆ ಇಂಥ‌ದ್ದೊಂದು ವಿಷಯ ಮುನ್ನೆಲೆಗೆ ಬರಲು ಕಾರಣ ವಾದರೂ ಏನಿರಬಹುದು ಎಂದು ನೋಡಿದರೆ ಇದರ ಹಿಂದಿರುವುದು “ರಾಜಕೀಯ ತಂತ್ರ’.

ಬಿಜೆಪಿಯ ಸಚಿವರು-ಶಾಸಕರು ಕಾಂಗ್ರೆಸ್‌ಗೆ ಬರಲು ತುದಿಗಾಲ ಮೇಲೆ ನಿಂತಿದ್ದು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರ ಮಾತುಗಳು ಈ ಹಂತದಲ್ಲಿ “ಜೋಕ್‌’ ಅಂತೂ ಅಲ್ಲವೇ ಅಲ್ಲ.

ಆಪರೇಷನ್‌ ಕಮಲ ಕಾರ್ಯಾಚರಣೆಗೆ ಒಳಗಾದವರು ಹೊರುತಪಡಿಸಿ ಮೂಲ ಬಿಜೆಪಿ ನಾಯಕರೂ ಸಂಪರ್ಕಿಸಿರಲೂಬಹುದು. ಏಕೆಂದರೆ ರಾಜಕಾರಣ ನಿಂತ ನೀರಲ್ಲ. ಆದರೂ ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಲಿದ್ದಾರೆ ಎಂದಾಕ್ಷಣ ತತ್‌ಕ್ಷಣಕ್ಕೆ ಕಾಣುವುದು ಆಪರೇಷನ್‌ ಕಮಲ ಕಾರ್ಯಾಚರಣೆಯಲ್ಲಿ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋದವರೇ. ಹೀಗಾಗಿ ಇದೀಗ ಎಲ್ಲರೂ ಅವರತ್ತಲೇ ಅನುಮಾನದಿಂದ ನೋಡುವಂತಾಗಿದೆ. ನಿಜಕ್ಕೂ ಕಾಂಗ್ರೆಸ್‌ನಿಂದ ಹೋದವರು ಪೂರ್ವಾಶ್ರಮಕ್ಕೆ ಬರಲು ಯಾರನ್ನಾದರೂ ಸಂಪರ್ಕಿಸಿದ್ದಾರೋ ಇಲ್ಲವೋ, ಸಿದ್ದ ರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್‌ ಇಲಾಖಾ ಸಂಬಂಧಿತ ಕೆಲಸಕ್ಕೆ ಸಚಿವರನ್ನು ಮಾತನಾಡಿದಾಗ ರಾಜಕೀಯ ವಿಚಾರವೂ ಪ್ರಸ್ತಾವವಾಯಿತೋ ಇಲ್ಲವೋ ಅವರವರ ಆತ್ಮಸಾಕ್ಷಿಗಷ್ಟೇ ಗೊತ್ತು.

ಮತ್ತೊಂದು ರೀತಿ ಯೋಚಿಸುವುದಾದರೆ ರಾಜ ಕೀಯ ಬದಿಗಿಟ್ಟು ಪೂರ್ವಾಶ್ರಮದ ಸ್ನೇಹಿತರು ಮಾತಿಗೆ ಕುಳಿತಾಗ “ಆಯ್ಯೋ ಅಲ್ಲೇ ಚೆನ್ನಾಗಿದ್ದೆವು, ಇಲ್ಲಿ ನಮ್ಮದೇನೂ ನಡೆಯುತ್ತಿಲ್ಲ, ಯಡಿಯೂರಪ್ಪ -ವಿಜಯೇಂದ್ರ ನಂಬಿ ಬಂದೆವು, ಈಗ ಅವರದೂ ನಡೆಯುವಂತೆ ಕಾಣುತ್ತಿಲ್ಲ, ಮುಂದೆ ಹೇಗೋ’ ಎಂಬ ಮಾತುಗಳು ಆಡಿರಬಹುದು. ಇದಕ್ಕೆ ರೆಕ್ಕೆ ಪುಕ್ಕ ಕಟ್ಟಿ ಬೇರೆ ರೀತಿಯ ಸುದ್ದಿಯೂ ಹರಡಿರಬಹುದು.

Advertisement

ಸಂಚಲನ: ಅದು ವದಂತಿಯೋ, ಊಹಾ- ಪೋಹವೋ. ಇಂಥದ್ದೊಂದು ಅನುಮಾನ ಆಡಳಿತ ಪಕ್ಷದಲ್ಲಿ ಶುರುವಾದರೆ ಅದು ಅಂತಿಮವಾಗಿ ಯಾವ ತಿರುವು ಅಥವಾ ಸ್ವರೂಪವಾದರೂ ಪಡೆಯಬಲ್ಲದು. ಈ ಸತ್ಯ ರಾಜಕಾರಣಿಗಳಿಗೆ ಗೊತ್ತಿಲ್ಲದೇನಲ್ಲ. ಇದೇ ಕಾರಣಕ್ಕೆ ವಿಪಕ್ಷ ಕಾಂಗ್ರೆಸ್‌ ನಾಯಕರು ಯಾವು  ದಕ್ಕೂ ಇರಲಿ ಎಂದು ಒಂದು “ಬಾಣ’ಬಿಟ್ಟರು. ನಾವೇನೂ ಕಡಿಮೆ ಎಂಬಂತೆ ರಮೇಶ್‌ ಜಾರಕಿಹೊಳಿ ನನ್ನ ಜತೆ ಹದಿನಾರು ಕಾಂಗ್ರೆಸ್‌ ಶಾಸಕರು ಸಂಪರ್ಕದಲ್ಲಿದ್ದು ದಿಲ್ಲಿ ವರಿಷ್ಠರು ಹೇಳಿದರೆ ಕರೆತರಲು ಸಿದ್ಧ ಎಂಬ “ಬಾಂಬ್‌’ ಸಿಡಿಸಿದರು. ಮತ್ತೂಂದೆಡೆ, ಎಚ್‌.ಡಿ. ಕುಮಾರಸ್ವಾಮಿ ನಮಗೂ ಡಿಮ್ಯಾಂಡ್‌ ಇದೆ ಎಂದು ನಮ್ಮ ಜತೆಯೂ ಹಲವು ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಒಂದು ಕಲ್ಲು ಎಸೆದಿದ್ದಾರೆ. ಇದು ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

ಮಾಜಿ ಪ್ರಧಾನಿಗಳಾದ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್‌.ಡಿ. ಕುಮಾರ ಸ್ವಾಮಿ ಕೈಗೊಳ್ಳುವ ಪ್ರತೀ ರಾಜಕೀಯ ತೀರ್ಮಾನ ಅಥವಾ ತಂತ್ರಗಾರಿಕೆ ರಾಜ್ಯದ ರಾಜಕೀಯ ಚಿತ್ರಣ ಬದಲಿಸಬಹುದು. ಜತೆಗೆ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೂ ತಮ್ಮದೇ ಲೆಕ್ಕಾಚಾರದಲ್ಲಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ ಪಕ್ಷಾಂತರ ವಿಚಾರ ಟೂ ಅರ್ಲಿ. ಇನ್ನೂ ಹದಿನೈದು ತಿಂಗಳ ಸಮಯವಿದೆ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಏನೆಲ್ಲ ಬದ ಲಾವಣೆಯಾಗುತ್ತದೆಯೋ ಗೊತ್ತಿಲ್ಲ. ಚುನಾವಣೆ ಸಂದರ್ಭದ ಇಶ್ಯೂಗಳು ಬೇರೆಯೇ ಇರುತ್ತದೆ. ಚುನಾವಣೆಗೆ ಮೂರು ತಿಂಗಳು ಇದೆ ಎನ್ನುವಾಗ ಇಂಥದ್ದೆಲ್ಲಾ ಶುರುವಾಗುವುದು ಸಹಜ. ಅವತ್ತಿನ ಸಂದ ರ್ಭದಲ್ಲಿ ಟಿಕೆಟ್‌ ಪಡೆದವರು, ಟಿಕೆಟ್‌ ವಂಚಿತರು, ಟಿಕೆಟ್‌ ಆಕಾಂಕ್ಷಿಗಳು ಕೈಗೊಳ್ಳುವ ತೀರ್ಮಾನವೂ ಚುನಾವಣೆ ಮೇಲೆ ಸಾಕಷ್ಟು ಪರಿಣಾಮ ಬೀರಬಲ್ಲದು.ಹಾಗಂತ ಈಗ ನಾವು ಸುಮ್ಮನೆ ಕುಳಿತಿಲ್ಲ. ನಮ್ಮದೇ ಆದ ತಂತ್ರಗಾರಿಕೆಯಲ್ಲಿ ತೊಡಗಿರುತ್ತೇವೆ. ವಿದ್ಯಮಾನ ಗಮನಿಸಿ ಕಲ್ಲು ಎಸೆಯುತ್ತೇವೆ. ಒಂದು ರಾಜಕೀಯ ಬೆಳವಣಿಗೆ ನಡೆದರೆ ಪ್ಲಸ್‌ ಆರ್‌ ಮೈನಸ್‌ ಒಂದು ಪಕ್ಷಕ್ಕೆ ಸೀಮಿತವಾಗಿರುವುದಿಲ್ಲ. ಪ್ರತ್ಯಕ್ಷ ಪರೋಕ್ಷವಾಗಿ ಇತರ ಪಕ್ಷಗಳಿಗೂ ಅದರ ಪರಿಣಾಮ ಬೀರುತ್ತದೆ ಎಂದು ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳುತ್ತಾರೆ.

ಇದು ನಿಜ ಸಹ. ಪಕ್ಷಾಂತರ ಸದ್ದು ನಡುವೆಯೇ ವಿಧಾನಪರಿಷತ್‌ ವಿಪಕ್ಷ ಸ್ಥಾನ ಸಿಗಲಿಲ್ಲ ಎಂದು ಮುನಿಸಿಕೊಂಡು ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್‌ ತ್ಯಜಿಸುವುದಾಗಿ ಹೇಳಿದ್ದಾರೆ. ಅವರು ಕಾಂಗ್ರೆಸ್‌ ಬಿಟ್ಟು ಬೇರೊಂದು ಪಕ್ಷಕ್ಕೆ ಹೋದರೆ ಅಥವಾ ಸ್ವಂತ ಪಕ್ಷ ಕಟ್ಟಿದರೆ ಕಾಂಗ್ರೆಸ್‌ ಪಕ್ಷದ ಮೇಲೆ ಪರಿಣಾಮ ಬೀರಲಿದೆ. ಅಲ್ಪವೋ-ಸ್ವಲ್ಪವೋ ಆ ಮಾತು ಬೇರೆ “ಡ್ಯಾಮೇಜ್‌’ ಆಗಬಹದು. ಇಬ್ರಾಹಿಂ ಜೆಡಿಎಸ್‌ ಸೇರಿದರೆ ನಾಯಕರ ನಿರ್ಗಮನದಿಂದ ಸ್ವಲ್ಪ ಮಟ್ಟಿಗೆ ಆತಂಕಗೊಂಡಿರುವ ಆ ಪಕ್ಷಕ್ಕೆ ಟಾನಿಕ್‌ ಸಿಕ್ಕಂತಾಗಬಹುದು.

ಆಂತರಿಕ ಲೆಕ್ಕಾಚಾರ: ರಾಜ್ಯದಲ್ಲಿ ಸಂಪುಟ ಪುನಾರಚನೆಯಾದರೆ ಹಿರಿಯ ಸಚಿವರನ್ನು ಕೈ ಬಿಟ್ಟು ಪಕ್ಷದ ಕೆಲಸಕ್ಕೆ ಹಚ್ಚಿದರೆ ಬಂಡಾಯ ಭುಗಿಲೆದ್ದು ರಾಷ್ಟ್ರಪತಿ ಆಳ್ವಿಕೆ ಬರಬಹುದು ಅಥವಾ ಅವಧಿಗೆ ಮುನ್ನ ಚುನಾವಣೆ ಎದುರಾಗಬಹುದು ಎಂಬ ಮಾತುಗಳೂ ಇವೆ. ಒಂದೊಮ್ಮೆ ಸಂಪುಟ ಪುನಾರಚನೆ ಮಾಡದಿದ್ದರೂ ಬಿಜೆಪಿ  ಯಲ್ಲಿನ ಆಂತರಿಕ ಸಂಘರ್ಷ ಸ್ಫೋಟವಾಗಬಹುದು ಎಂಬ ಆತಂಕ ವೂ ಇದೆ. ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆಯೂ ಇದೆ. ಒಂದೊಮ್ಮೆ ಆ ರೀತಿ ಆಗಿದ್ದೇ ಆದರೆ ರಾಜ್ಯ ರಾಜಕಾರಣದ ಸ್ವರೂಪ ಅಥವಾ ದಿಕ್ಕು ಬದಲಾಗಲಿದೆ. ಪಂಚರಾಜ್ಯಗಳ ಚುನಾವಣೆ ಅದರಲ್ಲೂ ಉತ್ತರಪ್ರದೇಶ, ಗೋವಾ, ಪಂಜಾಬ್‌ ಚುನಾವಣೆಯತ್ತ ರಾಜ್ಯದ ಮೂರೂ ಪಕ್ಷಗಳ ನಾಯಕರು ಚಿತ್ತ ಹರಿಸಿ ಅಲ್ಲಿನ ಫ‌ಲಿತಾಂಶ ಏನಾಗಬಹುದು ಎಂದು ಕಾಯುತ್ತಿದ್ದಾರೆ. ಐದು ರಾಜ್ಯಗಳ ಫ‌ಲಿತಾಂಶ ಕರ್ನಾಟಕಕ್ಕಷ್ಟೇ ಅಲ್ಲದೆ ರಾಷ್ಟ್ರ ರಾಜಕಾರಣದಲ್ಲೂ ಬೇರೆ ಬೇರೆ ರೀತಿಯ ಧ್ರುವೀಕರಣಗಳಿಗೆ ಕಾರಣವಾಗಬಹುದು ಎಂಬ ವ್ಯಾಖ್ಯಾನಗಳೂ ಇವೆ.

ಮೂರು ಪಕ್ಷಗಳ ನಾಯಕರಿಗೆ ಈಗಿನ ತಮ್ಮ ಸಾಮರ್ಥ್ಯ, ಮುಂದಿನ ಬೆಳವಣಿಗೆಗಳ ಬಗ್ಗೆ ಸ್ವಲ್ಪ ಮಟ್ಟಿನ ಅಂದಾಜಂತೂ ಇದ್ದೇ ಇದೆ. ಈಗಾಗಲೇ ಆಂತರಿಕವಾಗಿ ಸಮೀಕ್ಷೆಗಳನ್ನೂ ಮಾಡಿಸಿ ವರದಿ ಪಡೆದಿದ್ದಾರೆ. ಹೀಗಾಗಿ ವಿಧಾನಸಭೆ ಚುನಾವಣೆಗೆ ಹದಿನೈದು ತಿಂಗಳು ಇರುವಾಗಲೇ ಪ್ರಾರಂಭವಾಗಿರುವ ಪಕ್ಷಾಂತರ ಸದ್ದು ಅಂತಿಮವಾಗಿ ಎಲ್ಲಿಗೆ ಹೋಗಿ ಮುಟ್ಟಲಿದೆ. ಯಾವ ರೀತಿಯ ತಾರ್ಕಿಕ ಅಂತ್ಯ ಕಾಣಲಿದೆ ಕಾದು ನೋಡಬೇಕಾಗಿದೆ.

– ಎಸ್‌.ಲಕ್ಷ್ಮೀ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next