Advertisement

ಹೊಸ ಕ್ಷೇತ್ರ ರಚನೆಗೆ ಹಾಲಿ ಕ್ಷೇತ್ರ ವಿಭಜನೆ ಶೀಘ್ರ

09:42 AM Jan 30, 2020 | mahesh |

ಮಂಗಳೂರು: ಕರಾವಳಿಯ 6 ಹೊಸ ತಾಲೂಕುಗಳ ತಾ.ಪಂ. ಸದಸ್ಯರ ಕ್ಷೇತ್ರ ವಿಭಜನೆಯ ಅಧಿಸೂಚನೆ ಶೀಘ್ರವೇ ಪ್ರಕಟಗೊಳ್ಳಲಿದೆ. ಹೊಸ ಮತ್ತು ಹಳೆ ತಾ.ಪಂ. ಮಧ್ಯೆ ಸದಸ್ಯರ ಕ್ಷೇತ್ರವನ್ನು ಭೌಗೋಳಿಕವಾಗಿ ವಿಭಜಿಸಿ ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸುವರು. ಜಿ.ಪಂ. ಸಿಇಒ ಮತ್ತು ತಾ.ಪಂ. ಇಒ ಪೂರಕ ಕ್ರಮಗಳನ್ನು ಕೈಗೊಳ್ಳುವರು.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ, ಕಡಬ ಮತ್ತು ಉಡುಪಿ ಜಿಲ್ಲೆಯ ಬ್ರಹ್ಮಾವರ, ಕಾಪು, ಬೈಂದೂರು, ಹೆಬ್ರಿಗಳನ್ನು ತಾಲೂಕುಗಳಾಗಿ ಸರಕಾರ ಘೋಷಿಸಿತ್ತು. ಈಗಿರುವ ಕ್ಷೇತ್ರಗಳ ಕೆಲವು ಭಾಗಗಳು ಬದಲಾಗಲಿದ್ದು, ಹೊಸ ತಾ.ಪಂ. ಕ್ಷೇತ್ರ ರಚನೆಗೊಳ್ಳಲಿದೆ. ಈ ವಿವರಗಳನ್ನು ಪ್ರಾದೇಶಿಕ ಆಯುಕ್ತರಿಗೆ ನೀಡಲಾಗಿದೆ. ಇದರ ಪ್ರಕಾರ ಅಧಿಸೂಚನೆ ಸದ್ಯವೇ ಪ್ರಕಟವಾಗುವ ನಿರೀಕ್ಷೆಯಿದೆ.

ಹೊಸ ತಾ.ಪಂ.ಗೆ ಹೊಸ ಮೀಸಲಾತಿ!
ತಾ.ಪಂ. ಸದಸ್ಯರನ್ನು ವಿಭಜಿಸಿ ಅಧಿಸೂಚನೆ ಪ್ರಕಟಗೊಂಡ ಬಳಿಕ, ಆಯ್ದ ಹಾಲಿ ಸದಸ್ಯರು ಅವರ ಅವಧಿ ಮುಗಿಯುವವರೆಗೆ ಹೊಸ ತಾ.ಪಂ. ಸದಸ್ಯರಾಗುವರು. ಅದೇ ವೇಳೆಗೆ ಹೊಸ ತಾ.ಪಂ.ಅಧ್ಯಕ್ಷ/ ಉಪಾಧ್ಯಕ್ಷರ ಮೀಸಲು ಪ್ರಕಟವಾಗಿ ಹೊಸ ತಾ.ಪಂ. ಅಧಿಕಾರಕ್ಕೆ ಬರಲಿದೆ. 2021 ಫೆಬ್ರವರಿಯಲ್ಲಿ ಎಲ್ಲ ತಾ.ಪಂ.ಗಳಿಗೂ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಹಳೆಯ ತಾ.ಪಂ.ನಲ್ಲಿ ಈಗಿ ರುವ ಅಧ್ಯಕ್ಷ/ಉಪಾಧ್ಯಕ್ಷರ ಕ್ಷೇತ್ರಗಳು ಹೊಸ ತಾ.ಪಂ. ವ್ಯಾಪ್ತಿಗೆ ಒಳಪಟ್ಟರೆ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಅವರ ಸ್ಥಾನವೂ ತೆರವುಗೊಳ್ಳಲಿದೆ.

ಹೊಸ ತಾ.ಪಂ.ಗಳ ಕಾ.ನಿ. ಅಧಿಕಾರಿಯ ಹುದ್ದೆಗೆ ಸಮನಾಂತರ ಹುದ್ದೆಗಳನ್ನು ಹೊಂದಿರುವ ಅಧಿಕಾರಿಯನ್ನು ಹೆಚ್ಚುವರಿಯಾಗಿ, ಪ್ರಭಾರವಾಗಿ, ಸಹಾಯಕ ನಿರ್ದೇಶಕರು ಮತ್ತು ಇತರ ಸಿಬಂದಿಯ ಹುದ್ದೆಗಳಿಗೆ ಮೂಲ ತಾ.ಪಂ. ಅಥವಾ ಜಿ.ಪಂ.ನ ಸಮನಾಂತರ ಅಧಿಕಾರಿಗಳನ್ನು ನೇಮಿಸಬೇಕಿದೆ. ಜಿ.ಪಂ.ನ ಉಪ ಕಾರ್ಯದರ್ಶಿಯನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ತಾಲೂಕು ಕಚೇರಿ ರಚನೆಗೆ ಸೂಚನೆ
ಹೊಸ ತಾ.ಪಂ. ಕೇಂದ್ರ ಸ್ಥಾನವು ಗ್ರಾ.ಪಂ. ಆಗಿದ್ದರೆ ಅಲ್ಲಿ ತಾ.ಪಂ. ಕಚೇರಿ ತೆರೆಯಬೇಕಿದೆ. ಪಟ್ಟಣ ಪ್ರದೇಶವಾಗಿದ್ದರೆ ಇತರ ಸರಕಾರಿ ಕಚೇರಿಯಲ್ಲಿ ಸ್ಥಳವಿದೆಯೇ ಎಂದು ಗುರುತಿಸಬೇಕು. ಇಲ್ಲದಿದ್ದರೆ ಬಾಡಿಗೆ ಕಟ್ಟಡದಲ್ಲಿ ತಾ.ಪಂ. ಕಚೇರಿ ತೆರೆಯಬೇಕು. ತಾತ್ಕಾಲಿಕ ಕಚೇರಿಗೆ ಬಳಸುವ ಸರಕಾರಿ ಕಟ್ಟಡಗಳಿಗೆ ದುರಸ್ತಿ ಅಥವಾ ಪೀಠೊಪಕರಣಕ್ಕೆ ಬೇಕಾಗುವ ಅನುದಾನದ ಪ್ರಸ್ತಾವನೆ ಕಳುಹಿಸಲು ಸರಕಾರ ಸೂಚಿಸಿದೆ.

Advertisement

ಹೊಸ ತಾಲೂಕುಗಳ ತಾ.ಪಂ. ಸದಸ್ಯರ ಕ್ಷೇತ್ರ ವಿಭಜನೆಯ ಅಧಿಸೂಚನೆ ಶೀಘ್ರದಲ್ಲಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಗ್ರಾಮಗಳ ಹಂಚಿಕೆ ನಡೆದಿದ್ದು, ಕೆಲವೇ ದಿನದಲ್ಲಿ ಹೊಸ ತಾಲೂಕಿನ ಕಚೇರಿ ಕಾರ್ಯವೂ ಆರಂಭಗೊಳ್ಳಲಿದೆ.
– ಡಾ| ಸೆಲ್ವಮಣಿ ಆರ್‌., ಸಿಇಒ, ದ.ಕ. ಜಿ.ಪಂ

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next