Advertisement

ಖರ್ಗೆದ್ವಯರ ವಿರುದ್ಧ ಮಾನನಷ್ಟ ಮೊಕದ್ದಮೆ: ಜಾಧವ್‌ ಎಚ್ಚರಿಕೆ

12:14 PM Apr 30, 2019 | pallavi |

ಕಲಬುರಗಿ: ತಾವು 50 ಕೋಟಿಗೆ ಬಿಜೆಪಿಗೆ ಮಾರಾಟವಾಗಿದ್ದೇನೆ ಎಂದು ಪದೇ-ಪದೇ ಆರೋಪ ಮಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆಯವರು ಆರೋಪ ಸಾಬೀತು ಮಾಡಬೇಕು. ಇಲ್ಲವೇ ಆರೋಪ ಮಾಡುವುದನ್ನು ಕೈಬಿಡಬೇಕು. ಆರೋಪ ಪುನರಾವರ್ತಿಸಿದರೇ ಅಪ್ಪ-ಮಗನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಡಾ| ಉಮೇಶ ಜಾಧವ ಎಚ್ಚರಿಸಿದ್ದಾರೆ.

Advertisement

ಅವರು ‘ಉದಯವಾಣಿ’ಯೊಂದಿಗೆ ಮಾತ ನಾಡಿ, ಚಿಂಚೋಳಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಅಪ್ಪ-ಮಗ ಸಹಕಾರ ನೀಡದ ಕಾರಣದಿಂದ ಶಾಸಕ ಸ್ಥಾನಕ್ಕೆ ಹಾಗೂ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವೆ. ಬಿಜೆಪಿಗೆ ಸೇರಲು ತಮಗೆ ಯಾರು 50 ಕೋಟಿ ಹಣ ನೀಡಿಲ್ಲ. ತಮ್ಮ ಸ್ವಂತ ಇಚ್ಛೆಯಿಂದ ಅಭಿವೃದ್ಧಿಯ ಉದ್ದೇಶದಿಂದ ಪಕ್ಷ ಬಿಟ್ಟಿರುವೆ ಎಂದು ಸ್ಪಷ್ಟಪಡಿಸಿದರು.

ತಾವು ಕಾಂಗ್ರೆಸ್‌ ತ್ಯಜಿಸಿದ ದಿನದಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್‌ ಖರ್ಗೆಯವರು ತಾವು 50 ಕೋಟಿಗೆ ಚಿಂಚೋಳಿ ಮಾರಿಕೊಂಡಿದ್ದಾಗಿ ಹೇಳುತ್ತಾ ಬರುತ್ತಿದ್ದಾರೆ. ಅವರ ಬಳಿ ಈ ಬಗ್ಗೆ ಏನು ಸಾಕ್ಷಿ ಇದೆ ಎಂಬುದನ್ನು ಅವರು ಹೊರಗೆ ಹಾಕಲಿ ಎಂದು ಸವಾಲು ಹಾಕಿದರು.

ಮಲ್ಲಿಕಾರ್ಜುನ ಖರ್ಗೆಯವರು 50 ಕೋಟಿ ರೂ. ಅಕ್ರಮ ಆಸ್ತಿ ಮಾಡಿದ್ದಾರೆಂದು ಅವರ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು, ಅದರ ಬಗ್ಗೆ ನಾನೇನಾದರೂ ಮಾತನಾಡಿದ್ದೇನಾ? ಎಂದ ಅವರು, ತಮ್ಮ ಬಗ್ಗೆ ಇಲ್ಲ-ಸಲ್ಲದ ಸುಳ್ಳು ಹೇಳುವುದನ್ನು ಬಿಡದಿದ್ದರೇ ಅವರ ಬಗ್ಗೆಯೂ ನಾನು ಮಾತನಾಡಬೇಕಾಗುತ್ತದೆ ಹಾಗೂ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಗುಡುಗಿದರು.

ಮಲ್ಲಿಕಾರ್ಜುನ ಖರ್ಗೆ ಅಭಿವೃದ್ದಿಯ ಹರಿಕಾರ ಎಂದು ಹೇಳುತ್ತಾರೆ. ಆದರೆ ಗುರಮಿಠಕಲ್ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ. ಅಲ್ಲಿನ ಶೇ.80 ರಷ್ಟು ಜನರು ಗುಳೆ ಹೋಗುತ್ತಿದ್ದಾರೆ.ಆದರೆ ಅವರು ಚಿಂಚೋಳಿ ತಾಲೂಕಿನಲ್ಲಿ ಗುಳೆ ಹೋಗುತ್ತಿದ್ದಾರೆ ಎಂದು ಪದೇ-ಪದೇ ಹೇಳುತ್ತಾರೆ. ಚಿಂಚೋಳಿಯಲ್ಲಿರುವವರು ಗುಳೆ ಹೋಗಲು ತಾವು ಕಾರಣರಲ್ಲ. 50 ವರ್ಷ ಅಧಿಕಾರದಲ್ಲಿದ್ದ ಖರ್ಗೆಯವರು ಕಾರಣ ಎಂದು ಟೀಕಿಸಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡು 9 ತಿಂಗಳಾದರೂ ಪ್ರಿಯಾಂಕ್‌ ಖರ್ಗೆ ಒಮ್ಮೆಯೂ ಚಿಂಚೋಳಿಗೆ ಬಂದಿಲ್ಲ. ಅಲ್ಲಿನ ಜನರ ಕಷ್ಟ ಸುಖಕ್ಕೆ ಸ್ಪಂದಿಸಿಲ್ಲ. ಕೊಂಚಾವರಂನಲ್ಲಿ ಮಕ್ಕಳ ಮಾರಾಟ ಪ್ರಕರಣ ನಡೆದಾಗ ಅಲ್ಲಿಗೆ ಭೇಟಿ ನೀಡಿ ಅವರು ವಿವರ ಪಡೆದಿಲ್ಲ. ತಾವು ಚಿಂಚೋಳಿಗೆ ತೆರಳಿ ವರದಿ ಪಡೆದು ಈ ಬಗ್ಗೆ ಚರ್ಚೆ ನಡೆಸಲು ಸಭೆ ಕರೆಯುವಂತೆ ಎಷ್ಟು ಬಾರಿ ಮನವಿ ಮಾಡಿದರೂ ಅವರು ಸ್ಪಂದಿಸಿಲ್ಲ. ಇದು ಅವರ ಕಾಳಜಿ ಎಂದು ವ್ಯಂಗ್ಯವಾಡಿದರು.

ಸುಭಾಷ ರಾಠೊಡ ಹೊರಗಿನವರು
ಕಾಂಗ್ರೆಸ್‌ ಅಭ್ಯರ್ಥಿ ಸುಭಾಷ ರಾಠೊಡರು ಚಿಂಚೋಳಿ ಕ್ಷೇತ್ರದವರಲ್ಲ, ಆಳಂದನವರು. ಆದರೆ ತಮ್ಮನ್ನು ಹೊರಗಿನವರು ಎನ್ನುತ್ತಾರೆ. ಸುಭಾಷ ರಾಠೊಡ ಖರ್ಗೆಯವರ ಕಾಲಿಗೆ ಬಿದ್ದು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಿ, ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಖರ್ಗೆಯವರು ಯಾರು ತಮ್ಮ ಕಾಲಿಗೆ ಬಿಳುತ್ತಾರೆ ಅವರಿಗೆ ಟಿಕೆಟ್ ನೀಡುತ್ತಾರೆ ಎಂಬುದಕ್ಕೆ ನಿದರ್ಶನವಾಗಿದೆ. ಚಿಂಚೋಳಿಯ ಜನತೆ ಯಾರು ತಮ್ಮ ಹಿತ ಬಯಸುವವರು ಹಾಗೂ ಯಾರು ಅಲ್ಲ ಎಂಬುದರ ಬಗ್ಗೆ ಚಿಂತಿಸಿ ಮತ ನೀಡಲಿದ್ದಾರೆ ಎಂಬ ಉಮೇಶ ಜಾಧವ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next