Advertisement

ಮೇಳದ ಯಜಮಾನರ ವಿರುದ್ಧ ಮಾನಹಾನಿ ದಾವೆ

11:03 PM Nov 25, 2019 | Lakshmi GovindaRaj |

ಮಂಗಳೂರು: “ಕಟೀಲು ಮೇಳದ ಸೇವೆಯಾಟದಲ್ಲಿ ಭಾಗವತಿಕೆಗೆ ಅವಕಾಶ ನೀಡದೆ ರಂಗಸ್ಥಳದಿಂದ ಕೆಳಗಿಳಿಸುವ ಮೂಲಕ ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ ಅವರು ಸಾವಿರಾರು ಜನರ ಮುಂದೆ ನನ್ನನ್ನು ಅವಮಾನಿಸಿದ್ದು ಅವರ ವಿರುದ್ಧ ನ್ಯಾಯಾಲಯದಲ್ಲಿ ಮಾನಹಾನಿ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ಪಟ್ಲ ಸತೀಶ್‌ ಶೆಟ್ಟಿ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಟೀಲು ಮೇಳಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶದಲ್ಲಿ ಮೇಳದ ಆಡಳಿತ ವ್ಯವಸ್ಥೆ ಉಸ್ತುವಾರಿ ನಡೆಸುವಂತೆ ಈಗಾಗಲೇ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಆದರೆ, ಮೇಳದ ಆಡಳಿತಗಾರರು ಅವರ ಗಮನಕ್ಕೆ ತಾರದೆ ನ.22ರಂದು ಮೇಳದಲ್ಲಿ ತನಗೆ ಭಾಗವತಿಕೆ ಮಾಡಲು ಅವಕಾಶ ನೀಡದಿರುವುದು ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆ. ಇನ್ನು ಈಗಾಗಲೇ ಘಟನೆ ಬಗ್ಗೆ ಜಿಲ್ಲಾಧಿಕಾರಿಗೆ, ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದೇನೆ ಎಂದರು.

ಅಶಿಸ್ತು ತೋರಿಲ್ಲ: ನಾನು ಒಂದು ವರ್ಷದಿಂದ ಮೇಳದ ಸಂಪ್ರದಾಯ, ನಿಯಮಗಳನ್ನು ಧಿಕ್ಕರಿಸಿದ್ದೇನೆ ಎಂಬುದಾಗಿ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಆಪಾದನೆ ಮಾಡಿದ್ದಾರೆ. ಇದು, ನನ್ನ ಹೆಸರಿಗೆ ಕಳಂಕ ತರುವ ಷಡ್ಯಂತ್ರ. 19 ವರ್ಷಗಳ ತನ್ನ ಸೇವೆಯಲ್ಲಿ ಎಂದೂ ಅಶಿಸ್ತು ತೋರಿಲ್ಲ ಎಂದರು.

ಪ್ರಮಾಣಕ್ಕೆ ಸಿದ್ಧ: ಮೇಳದಲ್ಲಿ ಭಾಗವತಿಕೆ ಮಾಡ ಬಾರದು ಎಂದು ಲಿಖೀತವಾಗಿ ಅಥವಾ ಮೌಖೀಕವಾಗಿ ತಾನು ರಂಗಸ್ಥಳಕ್ಕೆ ಬರುವ ಮೊದಲು ತನಗೆ ತಿಳಿಸಿರಲಿಲ್ಲ ಎಂದು ಯಾವ ಕ್ಷೇತ್ರದಲ್ಲೂ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಅಂದು ನಿಯಮದಂತೆ ನಾನು ಆ ದಿನ ಅಲ್ಲಿಂದ ತೆರಳಬೇಕಾಗಿರಲಿಲ್ಲ. ಆದರೆ, ಅನಪೇಕ್ಷಿತ ಘಟನೆಗಳಿಗೆ ಅವಕಾಶ ಆಗಬಾರದು ಎಂದು ಇಳಿದು ಬಂದೆ ಎಂದು ಪಟ್ಲ ಸತೀಶ್‌ ಶೆಟ್ಟಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next