Advertisement

ಅಕ್ರಮ ಚಟುವಟಿಕೆ ನಿರತರ ಮೇಲೆ ನಿರ್ದಾಕ್ಷಿಣ್ಯ ಕ್ರಮ

09:33 AM Aug 21, 2019 | Suhan S |

ಹುಬ್ಬಳ್ಳಿ: ಅವಳಿ ನಗರದಲ್ಲಿ ಮಟ್ಕಾ, ಜೂಜಾಟ, ಗಾಂಜಾ ಸೇರಿದಂತೆ ಎಲ್ಲ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಗೂ ರೌಡಿಸಂ, ಗೂಂಡಾಗಿರಿ ಮಟ್ಟ ಹಾಕಲಾಗುವುದು. ದರೋಡೆಕೋರರ ಮೇಲೆ ತೀವ್ರ ನಿಗಾ ವಹಿಸಲಾಗುವುದು ಎಂದು ನೂತನ ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ಹೇಳಿದರು.

Advertisement

ಮಂಗಳವಾರ ಅಧಿಕಾರ ವಹಿಸಿಕೊಂಡ ನಂತರ ನಗರದ ಉಪನಗರ ಠಾಣೆ ಹಾಗೂ ಮಹಿಳಾ ಠಾಣೆಗೆ ಭೇಟಿ ನೀಡಿದ ನಂತರ ‘ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಅಕ್ರಮ ಹಾಗೂ ಅಪರಾಧ ಚಟುವಟಿಕೆಗಳಲ್ಲಿ ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಡ್ಡಿ ವ್ಯವಹಾರ, ಹಫ್ತಾ ವಸೂಲಿ ಸೇರಿದಂತೆ ಇನ್ನಿತರೆ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಿಕ್ಕರೆ ಸಾರ್ವಜನಿಕರು ಕೂಡಲೇ ನನಗೆ ತಿಳಿಸಿದರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಾಹಿತಿ ಕೊಟ್ಟವರ ಬಗ್ಗೆ ಗೌಪ್ಯತೆ ಕಾಪಾಡಲಾಗುವುದು. ಮಾಹಿತಿದಾರರು ಮೌಖೀಕ ಅರ್ಜಿ ಜೊತೆ ಸಮಗ್ರತೆಯುಳ್ಳ ಮಾಹಿತಿ ಕೊಟ್ಟರೆ, ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದರೆ ನಿರ್ದಿಷ್ಟ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಪೊಲೀಸ್‌ ಇಲಾಖೆಯು ಸಹ ಸಿಬಿಐ ರೀತಿ ಮಾಹಿತಿದಾರರ ಗೌಪ್ಯತೆ ಕಾಪಾಡುತ್ತದೆ. ಸೈಬರ್‌ ಕ್ರೈಂಗಳ ಬಗ್ಗೆಯೂ ಜನರು ಜಾಗೃತರಾಗಬೇಕು ಎಂದು ಹೇಳಿದರು.

ಅವಳಿ ನಗರದಲ್ಲಿ ಅಪರಾಧ ಮತ್ತು ಅಕ್ರಮ ಚಟುವಟಿಕೆ ತಡೆಗಟ್ಟಲು, ರೌಡಿಸಂ ಮಟ್ಟಹಾಕಲು ಎಲ್ಲರನ್ನು ಒಗ್ಗೂಡಿಸಿಕೊಂಡು ಕಾರ್ಯನಿರ್ವಹಿಸುವೆ. ತಂಡದ ಕಾರ್ಯಕ್ಕೆ ಒತ್ತು ಕೊಡಲಾಗುವುದು. ಇಲಾಖೆಯು ಒಂದು ತಂಡವಾಗಿ ಕಾರ್ಯನಿರ್ವಹಿಸಲಿದೆ. ಅವಳಿ ನಗರದಲ್ಲಿ ಸಂಚಾರ ಸಮಸ್ಯೆ ಸಾಕಷ್ಟಿರುವ ಬಗ್ಗೆ ಬಹಳಷ್ಟು ಜನರು ತಿಳಿಸಿದ್ದಾರೆ. ಸುಗಮ ಸಂಚಾರಕ್ಕೆ ಹೆಚ್ಚಿನ ಒತ್ತು ಕೊಡಲಾಗುವುದು ಎಂದರು.

ಗಣೇಶ ಹಾಗೂ ಮೊಹರಂ ಹಬ್ಬವನ್ನು ಸಾಮರಸ್ಯ, ಸೌಹಾರ್ದತೆಯಿಂದ ಆಚರಿಸಬೇಕು. ಈ ಸಂದರ್ಭದಲ್ಲಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗುವುದು. ಅಹಿತಕರ ಘಟನೆ ನಡೆಯದಂತೆ ಸಹಕಾರ ನೀಡಬೇಕು. ಪೊಲೀಸ್‌ ಕಾರ್ಯವೈಖರಿಗೆ ಸಾರ್ವಜನಿಕರು ಸ್ಪಂದಿಸಬೇಕು ಎಂದು ಮನವಿ ಮಾಡಿದರು.

Advertisement

ಪೊಲೀಸ್‌ ಕುಟುಂಬ ಕಲ್ಯಾಣಕ್ಕೆ ಒತ್ತು ಕೊಡಲಾಗುವುದು. ಸಿಬ್ಬಂದಿಯ ಕುಟುಂಬದವರ ಆರೋಗ್ಯಕ್ಕೆ ಒತ್ತು ಕೊಡಲಾಗುವುದು. ಅವರು ಕಾಯಿಲೆಗೆ ಬಿದ್ದಾಗ ಆದ್ಯತೆ ಮೇರೆಗೆ ಚಿಕಿತ್ಸೆ ಕೊಡಿಸಲಾಗುವುದು. ಸರಕಾರದಿಂದ ಸಿಗಬೇಕಾದ ಸೌಲಭ್ಯ ಒದಗಿಸಲಾಗುವುದು ಎಂದರು.

ನೂತನ ಕಮಿಷನರ್‌ ಆರ್‌. ದಿಲೀಪ್‌ ಅಧಿಕಾರ ಸ್ವೀಕಾರ:

 ಹು-ಧಾ ಪೊಲೀಸ್‌ ಕಮಿಷನರೇಟ್‌ನ ನೂತನ ಆಯುಕ್ತರಾಗಿ ಆರ್‌. ದಿಲೀಪ್‌ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಪೊಲೀಸ್‌ ಆಯುಕ್ತರಾಗಿದ್ದ ಎಂ.ಎನ್‌. ನಾಗರಾಜ ಅವರು ನೂತನ ಆಯುಕ್ತರಿಗೆ ಅಧಿಕಾರ ಹಸ್ತಾಂತರಿಸಿದರು. ಇದೇ ವೇಳೆ ಅಧಿಕಾರ ಸ್ವೀಕರಿಸಿದ ಆರ್‌. ದಿಲೀಪ್‌ ಅವರು ಡೆಪ್ಯೂಟಿ ಐಜಿಪಿಯಾಗಿ ಬಡ್ತಿ ಹೊಂದಿದ ಎಂ.ಎನ್‌. ನಾಗರಾಜ ಅವರಿಗೆ ಶುಭಾಶಯ ಕೋರಿದರು. ಆರ್‌. ದಿಲೀಪ್‌ ಅವರು ಈ ಹಿಂದೆ ಹು-ಧಾ ಪೊಲೀಸ್‌ ಕಮಿಷನರೇಟ್‌ನ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯಾಗಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next