Advertisement

ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ

03:04 PM Oct 13, 2021 | Shwetha M |

ವಿಜಯಪುರ: ಸಿಂದಗಿ ವಿಧಾನಸಭೆ ಉಪಚುನಾವಣೆ ಪ್ರಕ್ರಿಯೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ವಹಿಸಿ, ಒಂದು ವೇಳೆ ಯಾರಾದರೂ ನೀತಿ ಸಂಹಿತೆ ಉಲ್ಲಂಘಿಸಿರುವುದು ಕಂಡು ಬಂದರೆ ಅಂತಹವರ ವಿರುದ್ಧ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ಸಿಂದಗಿ ಚುನಾವಣಾಧಿಕಾರಿಗಳು, ಎಂಸಿಸಿ ಮುಖ್ಯಸ್ಥ ಜಿಪಂ ಸಿಇಒ ಸೇರಿದಂತೆ ಚುನಾವಣೆಗೆ ನೇಮಿಸಲಾದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿದ ಅವರು, ಚುನಾವಣಾ ಆಯೋಗವು ಜಾರಿಗೊಳಿಸಿರುವ ಮಾದರಿ ನೀತಿ ಸಂಹಿತೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.

ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ತಕ್ಷಣ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ತಿಳಿಸಿದ ಅವರು, ನೀತಿ ಸಂಹಿತೆ ಉಲ್ಲಂಘನೆಗಳ ಬಗ್ಗೆ ದೂರು ನಿರ್ವಹಣಾ ಘಟಕ ಹಾಗೂ ಮಾಧ್ಯಮ ನಿರ್ವಹಣಾ ಘಟಕಗಳು ಪರಸ್ಪರ ಸಮನ್ವಯತೆಯಿಂದ ಮಾಹಿತಿ ವಿನಿಮಯ ಮಾಡಿಕೊಂಡು ನೀತಿ ಸಂಹಿತೆ ಉಲ್ಲಂಘನಾ ಪ್ರಕರಣಗಳನ್ನು ಗುರುತಿಸುವಂತೆ ತಿಳಿಸಿದರು.

ಚುನಾವಣೆಗೆ ನೇಮಿಸಿದ ಅಧಿಕಾರಿಗಳು ತಮ್ಮ ಕೆಳ ಹಂತದ ಅಧಿಕಾರಿಗಳಿಗೆ ಆಗಾಗ ಸರಿಯಾದ ಮಾರ್ಗದರ್ಶನ, ಸಲಹೆ ನೀಡಬೇಕು. ಚುನಾವಣೆಗೆ ನೇಮಿಸಿದ ಅಧಿಕಾರಿಗಳು ಯೋಜನಾ ಬದ್ಧವಾಗಿ ಹಾಗೂ ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸಬೇಕು. ಅದರಂತೆ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆಯ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಚುನಾವಣಾ ಸಂದರ್ಭದಲ್ಲಿ ಯಾವುದೇ ರೀತಿಯ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳಬೇಕು. ಮತದಾನ ಕೇಂದ್ರಗಳ ಒಳಗೆ ಯಾವುದೇ ರೀತಿಯ ಛಾಯಾಚಿತ್ರ ತೆಗೆಯುವ ಹಾಗೂ ಮೊಬೈಲ್‌ ಬಳಸುವಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಚುನಾವಣಾಧಿಕಾರಿಗಳಿಗೆ ಸೂಚಿಸಿದ ಅವರು, ಯಾವುದೇ ರೀತಿಯ ಲೋಪಗಳಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.

Advertisement

ಚುನಾವಣೆಗೂ ಪೂರ್ವದಲ್ಲಿ ಪಿಆರ್‌ ಒ-ಎಪಿಆರ್‌ಒಗಳಿಗೆ ಮತ್ತು ಪೊಲೀಸ್‌ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನಗಳ ಮೂಲಕ ಚುನಾವಣಾ ನಿಯಮಾವಳಿಗಳನ್ನು ಪಾಲಿಸುವ ಬಗ್ಗೆ ತಿಳಿ ಹೇಳಬೇಕು. ಪಿಆರ್‌ಒ ಮತ್ತು ಎಪಿಆರ್‌ಗಳಿಗೆ ಪ್ರಥಮ ಮತ್ತು ದ್ವಿತೀಯ ತರಬೇತಿಗಳ ಮೂಲಕ ಸಮರ್ಪಕ ತರಬೇತಿ ನೀಡಬೇಕು. ಇವಿಎಂ, ವಿವಿಪ್ಯಾಟ್‌ ಯಂತ್ರದ ಸಮರ್ಪಕ ನಿರ್ವಹಣೆ ಸೇರಿದಂತೆ ಅವಶ್ಯಕ ತರಬೇತಿ ವ್ಯವಸ್ಥಿತವಾಗಿ ನೀಡಬೇಕು.

ಚುನಾವಣೆ ಶಿಸ್ತುಬದ್ಧವಾಗಿ ನಡೆಯಲು ಅನುಕೂಲವಾಗುವಂತೆ ಮಸ್ಟರಿಂಗ್‌ ಮತ್ತು ಡಿ-ಮಸ್ಟರಿಂಗ್‌ ಕಾರ್ಯ ಅತ್ಯುತ್ತಮವಾಗಿ ನಿರ್ವಹಿಸಬೇಕು. ಯಾವುದೇ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ಚುನಾವಣೆ ದಿನದಂದು ಚುನಾವಣಾ ಕಾರ್ಯಕ್ಕೆ ನೇಮಿಸಿದ ಅಧಿಕಾರಿ, ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ ಸೇರಿದಂತೆ ಇನ್ನೀತರ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಅದರಂತೆ ಚುನಾವಣೆಗೆ ಸಂಬಂಧಿಸಿದ ಆ್ಯಪ್‌ಗಳು ಅಪ್‌ಡೇಟ್‌ ಆಗಿರುವಂತೆ ನೋಡಿಕೊಳ್ಳಿ, ಚುನಾವಣೆಯ ವಿವಿಧ ಕೆಲಸಗಳಿಗೆ ಬೇಕಾದ ಖರ್ಚುಗಳ ಅನುದಾನವನ್ನು ಬೇಗನೆ ಬಿಡುಗಡೆ ಮಾಡಲಾಗುವುದು ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ, ಅಬಕಾರಿ ಇಲಾಖೆ ತಂಡ, ಎಂಸಿಸಿ ತಂಡಗಳು, ಎಫ್‌ಎಸ್‌ಟಿ, ಎಸ್‌ ಎಸ್‌ಟಿ, ವಿಎಸ್‌ಟಿ ತಂಡಗಳು ಚುರುಕಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಚುನಾವಣೆ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಪಂ ಸಿಇಒ ಗೋವಿಂದರೆಡ್ಡಿ ಮಾತನಾಡಿ, ಇವಿಎಂ ಮತ್ತು ವಿವಿ ಪ್ಯಾಟ್‌ ಯಂತ್ರಗಳ ಬಗ್ಗೆ ಸಮಗ್ರ ಮತ್ತು ಸಮರ್ಪಕ ತರಬೇತಿ ನೀಡಬೇಕು. ಆಡಿಯೋ, ವಿಡಿಯೋ ಮತ್ತು ನುರಿತ ತರಬೇತಿದಾರರು ಹಾಗೂ ಮಾಹಿತಿ ಕೈಪಿಡಿ ಒದಗಿಸುವ ಮೂಲಕ ಅತ್ಯುತ್ತಮವಾಗಿ ತರಬೇತಿ ನೀಡಬೇಕು. ಎಂಸಿಸಿ ತಂಡಗಳು ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ತೀವ್ರ ನಿಗಾ ಇಡಲಿವೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮ ಅರಿಸಿದ್ಧಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next