ಮಡಿಕೇರಿ: ಬಂಡೀಪುರ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೇಟೆಯಾಡಿ ಮೂರು ಜಿಂಕೆ ಹಾಗೂ ಮೊಲವೊಂದನ್ನು ಹತ್ಯೆಗೈದ ಪ್ರಕರಣವನ್ನು ಅರಣ್ಯ ಇಲಾಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಕೃತ್ಯಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ತಾಲೂಕಿನ ವಿವಿಧ ಗ್ರಾಮಕ್ಕೆ ಸೇರಿದ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ ಬೇಟೆಯಾಡಿದ ಮಾಂಸ, ಎರಡು ಒಂಟಿ ನಳಿಗೆಯ ಬಂದೂಕು, ಒಂದು ಮಾರುತಿ ಸುಜುಕಿ ಓಮ್ನಿ ವಾಹನವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬಂಡೀಪುರದ ಓಂಕಾರ ವನ್ಯಜೀವಿ ವಲಯದ ನಾಗಣಾಪುರ ಬ್ಲಾಕ್ -2ರ ಕಲ್ಲರಕಿಂಡಿ ಎಂಬಲ್ಲಿ ಈ ಕೃತ್ಯ ನಡೆಸಲಾಗಿದೆ. ಸೋಮವಾರ ಪೇಟೆಯ ಚೌಡ್ಲು ಗ್ರಾಮದ ವಿದ್ಯಾಸಾಗರ್ (29), ಗೌಡಳ್ಳಿಯ ರವೀಂದ್ರ ಅಲಿಯಾಸ್ ಪೂವಯ್ಯ (41) ಬೆಟ್ಟದಳ್ಳಿಯ ಯಶೋಧರ (34) ತಲ್ತರೆಶೆಟ್ಟಳ್ಳಿಯ ವರಾದ ಪ್ರಸನ್ನ ಜಾನ್ (38) ಸುಜಿತ್ ಅಲಿಯಾಸ್ ತಿಮ್ಮಯ್ಯ (28) ಹಾಗೂ ಶಾಂತಳ್ಳಿಯ ಕುಶಾಲಪ್ಪ (47) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ನಂಜನಗೂಡಿನ ಮಹೇಶ್ (35) ಎಂಬಾತ ತಲೆಮರೆಸಿ ಕೊಂಡಿದ್ದಾನೆ.
ಇದನ್ನೂ ಓದಿ:ಹಾರ್ಲೆ ಡೇವಿಡ್‌ಸನ್ ಬೈಕ್ ಬಳಸಿ ಹಣ ದೋಚಿದ್ದ ಕಳ್ಳನ ಸೆರೆ
ಆರೋಪಿಗಳು ಮೂರು ಜಿಂಕೆಗಳನ್ನು ಗುಂಡಿಕ್ಕಿ ಮತ್ತು ಉರುಳು ಹಾಕಿ ಮೊಲವೊಂದನ್ನು ಕೂಡ ಹತ್ಯೆಗೈದಿದ್ದಾರೆ. ಒಂದು ಜಿಂಕೆಯ ಚರ್ಮವನ್ನು ಸುಲಿದು ಮಾಂಸವಾಗಿ ಬೇರ್ಪಡಿಸಿ ಅಡುಗೆಗೂ ಈ ತಂಡ ಸಿದ್ಧತೆ ನಡೆಸಿದ್ದು, ಈ ಸಂದರ್ಭ ಅರಣ್ಯ ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಇವರುಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಎರಡು ಬಂದೂಕು ಹಾಗೂ ಓಮ್ನಿ ಕಾರು) ಅನ್ನು ಮುಟ್ಟಗೋಲು ಹಾಕಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು ನಟೇಶ್ ಎಸ್.ಆರ್. ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ನಿರ್ದೇಶಕರು, ಬಂಡೀಪುರ ವಿಭಾಗ, ಪರಮೇಶ್ ಕೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಗುಂಡ್ಲುಪೇಟೆ ಉಪವಿಭಾಗ, ಇವರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ.