Advertisement

Paris Olympics: ಗುರಿ ತಪ್ಪಿದ ದೀಪಿಕಾ ಕುಮಾರಿ

09:54 PM Aug 03, 2024 | Team Udayavani |

ಪ್ಯಾರಿಸ್‌: ಒಲಿಂಪಿಕ್ಸ್‌ ಬಿಲ್ಗಾರಿಕೆಯ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ಗೆ ಏರಿದ್ದ ದೀಪಿಕಾ ಕುಮಾರಿ ಸೋಲನುಭವಿಸಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ದೀಪಿಕಾ, ದಕ್ಷಿಣ ಕೊರಿಯಾದ ನಾಮ್‌ ಸುಹ್ಯೆನ್ ವಿರುದ್ಧ 6-4 ಅಂತರದಿಂದ ಪರಾಭವಗೊಂಡರು.

Advertisement

ಇದಕ್ಕೂ ಮುನ್ನ ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಜನ್‌ ಕೌರ್‌ ಕೂಡ ಸೋತರು. ಅವರು ಇಂಡೋನೇಷ್ಯಾದ ದಿಯಾನಂದ ಚಾಯಿರುನಿಸಾ ವಿರುದ್ಧ ನಿರಾಸೆಗೀಡಾದರು. ಇಲ್ಲಿಗೆ ಬಿಲ್ಗಾರಿಕೆಯಲ್ಲಿ ಭಾರತದ ಒಲಿಂಪಿಕ್ಸ್‌ ಸವಾಲು ಅಂತ್ಯಗೊಂಡಿತು.

ಆರಂಭಿಕ ಹಂತದಲ್ಲಿ ಸುಹ್ಯೆನ್ ವಿರುದ್ಧ 3 ಸೆಟ್‌ಗಳಲ್ಲಿ ಎರಡರಲ್ಲಿ ಗೆದ್ದು ದೀಪಿಕಾ ಭಾರೀ ನಿರೀಕ್ಷೆ ಮೂಡಿಸಿದ್ದರು. ಆದರೆ 4ನೇ ಸೆಟ್‌ನಲ್ಲಿ ಬರೀ 7ಕ್ಕೆ ಗುರಿಯಿಡುವ ಮೂಲಕ ಮುಂದಿನ ಹಂತಕ್ಕೇರಲಿದ್ದ ಅವಕಾಶವನ್ನು ಕೈಚೆಲ್ಲಿದರು.

ನಾಲ್ಕನೇ ಒಲಿಂಪಿಕ್ಸ್‌:

2010ರ ಹೊಸದಿಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬಂಗಾರ ಗೆದ್ದಿದ್ದ ದೀಪಿಕಾ, ಈ ಬಾರಿ 4ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ ಈ ಬಾರಿಯೂ ಅವರು ಬರಿಗೈಯಲ್ಲಿ ತವರಿಗೆ ವಾಪಸಾಗಲಿದ್ದಾರೆ. ಇದಕ್ಕೂ ಹಿಂದಿನ ಲಂಡನ್‌, ರಿಯೋ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲೂ ದೀಪಿಕಾ ನಿರಾಸೆ ಮೂಡಿಸಿದ್ದರು.

Advertisement

ಬಿಲ್ಗಾರಿಕೆ ಮಿಶ್ರ ತಂಡ ವಿಭಾಗದಲ್ಲಿ ಅಂಕಿತಾ ಭಕತ್‌ ಮತ್ತು ಧೀರಜ್‌ ಬೊಮ್ಮದೇವರ ಅವರನ್ನೊಳಗೊಂಡ ತಂಡ 4ನೇ ಸ್ಥಾನ ಪಡೆದದ್ದೇ ಪ್ಯಾರಿಸ್‌ನಲ್ಲಿ ಬಿಲ್ಗಾರಿಕೆ ವಿಭಾಗದಲ್ಲಿ ಭಾರತದ ಉತ್ತಮ ಸಾಧನೆಯಾಗಿದೆ. ಉಳಿದಂತೆ ಮತ್ತೆಲ್ಲ ವಿಭಾಗಗಳಲ್ಲೂ ಭಾರತೀಯ ಬಿಲ್ಗಾರರು ನೀರಸ ಪ್ರದರ್ಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next