ಮುಂಬೈ: ಇತ್ತೀಚಿನ ದಿನಗಳಲ್ಲಿ ಎಐ (AI) ತಂತ್ರಜ್ಞಾನವು ಮಾನವ ಜೀವನದ ಮೇಲೆ ಬಹು ಪರಿಣಾಮ ಬೀರುತ್ತಿದೆ. ಆದರೆ ಎಐ ಕ್ಷೇತ್ರದ ದುಷ್ಪರಿಣಾಮಗಳಲ್ಲಿ ಒಂದು ಡೀಪ್‌ಫೇಕ್ ತಂತ್ರಜ್ಞಾನ. ಸೈಬರ್ ಕ್ರಿಮಿನಲ್ ಗಳಿಗೆ ಬೇರೆಯವರನ್ನು ಅನುಕರಿಸಲು ಅವರ ಧ್ವನಿಯನ್ನು ಬದಲಾಯಿಸಲು ಮಾತ್ರವಲ್ಲದೆ ಅವರು ನೈಜವಾಗಿ ಕಾಣುವಂತೆ ವೀಡಿಯೊಗಳನ್ನು ಮಾಡಲು ಇದನ್ನು ಉಪಯೋಗಿಸಲಾಗುತ್ತಿದೆ. ಈ ಡೀಪ್ ಫೇಕ್ ನ ಇತ್ತೀಚಿನ ಬಲಿಪಶು ಪ್ರಸಿದ್ದ ನಟಿ ನಟಿ ರಶ್ಮಿಕಾ ಮಂದನಾ.
ರಶ್ಮಿಕಾ ಮಂದನಾ ಅವರು ಎಲಿವೇಟರ್ ಗೆ ಬರುವ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಆದರೆ ಬಳಿಕ ಇದು ಡೀಪ್ ಫೇಕ್ ತಂತ್ರಜ್ಞಾನ ಬಳಸಿ ವಿಡಿಯೋ ಮಾಡಲಾಗಿದೆ ಎಂದು ತಿಳಿದುಬಂದಿತ್ತು. ಆದರೆ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಈ ವಿಡಿಯೋ ಎಷ್ಟು ವೈರಲ್ ಆಗಿತ್ತೆಂದರೆ 2.4 ಮಿಲಿಯನ್ ಗಿಂತ ಹೆಚ್ಚು ವೀಕ್ಷಣೆ ಪಡೆದಿತ್ತು.
ಅಭಿಷೇಕ್ ಕುಮಾರ್ ಎಂಬ ಪತ್ರಕರ್ತರು ಎಕ್ಸ್ ನಲ್ಲಿ ವೀಡಿಯೊವನ್ನು ಹಂಚಿಕೊಂಡು, ಅಂತರ್ಜಾಲದಲ್ಲಿ ನಕಲಿ ವಿಷಯದ ಹರಡುವಿಕೆಯನ್ನು ಎದುರಿಸಲು ಹೊಸ ಕಾನೂನು ಮತ್ತು ನಿಯಂತ್ರಣ ಕ್ರಮಗಳ ಅಗತ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಮೂಲ ವಿಡಿಯೋವನ್ನು ಅಕ್ಟೋಬರ್ 8 ರಂದು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಜರಾ ಪಟೇಲ್ ಎಂಬ ಮಹಿಳೆ ಕಾಣಿಸಿಕೊಂಡಿದ್ದಾರೆ. ಆದರೆ ಜರಾ ಪಟೇಲ್ ಬದಲು ರಶ್ಮಿಕಾ ಮಂದನಾ ಅವರ ಮುಖವನ್ನು ಡೀಪ್‌ಫೇಕ್ ತಂತ್ರಜ್ಞಾನದ ಮೂಲಕ ತಿರುಚಲಾಗಿದೆ. ಈ ಡೀಪ್ ಫೇಕ್ ವೀಡಿಯೋ ಮಾಡುವಲ್ಲಿ ಪಟೇಲ್ ಭಾಗಿಯಾಗಿದ್ದಾರೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ನಕಲಿ ವೀಡಿಯೋವನ್ನು ಯಾರು ಸೃಷ್ಟಿಸಿದ್ದಾರೆ ಎಂಬುದು ನಿಗೂಢವಾಗಿಯೇ ಉಳಿದಿದೆ. ಗಮನಿಸಬೇಕಾದ ವಿಚಾರವೆಂದರೆ, ಇದು ಒಂದೇ ಘಟನೆಯಲ್ಲ, ಇತ್ತೀಚಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳ ವಿವಿಧ ಸೆಲೆಬ್ರಿಟಿಗಳು ಇದೇ ರೀತಿಯ ನಕಲಿ ವೀಡಿಯೊಗಳಿಗೆ ಬಲಿಯಾಗುತ್ತಿದ್ದಾರೆ.
ಈ ವಿಡಿಯೋವನ್ನು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಸಹ ಹಂಚಿಕೊಂಡಿದ್ದಾರೆ, ಅವರು ಡೀಪ್ ಫೇಕ್‌ಗಳು “ಕಾನೂನಿಗೆ ಬಲವಾದ ಪ್ರಕರಣ” ಎಂದು ಟ್ವೀಟ್ ಮಾಡಿದ್ದಾರೆ.
ಡೀಪ್ ಫೇಕ್ ಎನ್ನುವುದು ಒಂದು ರೀತಿಯ ಸಂಶ್ಲೇಷಿತ ಮಾಧ್ಯಮವಾಗಿದ್ದು, ಇದರಲ್ಲಿ ಅಸ್ತಿತ್ವದಲ್ಲಿರುವ ಚಿತ್ರ ಅಥವಾ ವೀಡಿಯೊದಲ್ಲಿರುವ ವ್ಯಕ್ತಿಯನ್ನು ಎಐ ಬಳಸಿಕೊಂಡು ಬೇರೊಬ್ಬರ ಹೋಲಿಕೆಯೊಂದಿಗೆ ಬದಲಾಯಿಸಲಾಗುತ್ತದೆ.