ಬೆಂಗಳೂರು: ಮಾರುಕಟ್ಟೆಯಲ್ಲಿ ಈಗ ದೀಪಾವಳಿ ಹಬ್ಬದ ಕಳೆ ಹೆಚ್ಚುತ್ತಿದೆ. ಹಾಗೆಯೇ ಮಣ್ಣಿನಿಂದ ಮಾಡಿದ ಭಿನ್ನ ಭಿನ್ನ ಶೈಲಿಯ ಹಣತೆಗಳು ಮಾರುಕಟ್ಟೆ ಪ್ರವೇಶ ಮಾಡಿದ್ದು ಜನರನ್ನು ಆಕರ್ಷಿಸುತ್ತಿವೆ. ಈಗಾಗಲೇ ಕೇಂದ್ರ ಸರ್ಕಾರ ಚೀನಾ ಉತ್ಪನ್ನಗಳ ಮೇಲೆ ನಿರ್ಬಂಧ ಹೇರಿದ್ದು, ಖರೀದಿದಾರರೂ ಮಣ್ಣಿನ ದೀಪದತ್ತ ಮುಖ ಮಾಡಿದ್ದಾರೆ.
ಕುಬೇರ ದೀಪ, ಸೆಟ್ ದೀಪ, ಅಯ್ಯಪ್ಪ ದೀಪ, ಪಂಚಮುಖೀ ದೀಪ, ಲಕ್ಷ್ಮೀ ದೇವಿ ಮತ್ತು ಗೌರಿ-ಗಣೇಶ ದೀಪ ಸೇರಿ ಹಲವು ವಿನ್ಯಾಸಗಳಿಂದ ಕೂಡಿರುವ ಮಣ್ಣಿನಿಂದ ಮಾಡಿದ ಹಣತೆಗಳು ಕೆ.ಆರ್.ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು ಶುಕ್ರವಾರ ಮಹಿಳೆಯರು ತಮಗಿಷ್ಟವಾದ ಹಣತೆ ಖರೀದಿಯಲ್ಲಿ ತೊಡಗಿದ್ದ ದೃಶ್ಯಕಂಡು ಬಂತು.
ಇವುಗಳ ಜತೆಗೆ 4, 5 ಹಾಗೂ 9 ಮುಖದ ದೀಪಗಳೂ ಗ್ರಾಹಕರಿಗೆ ದೊರೆಯಲಿವೆ. ಕೋವಿಡ್ ಅನ್ ಲಾಕ್ ನಂತರ ಇತ್ತೀಚೆಗಷ್ಟೇ ವ್ಯಾಪಾರ ಆರಂಭವಾಗಿದೆ. ಆದರೆ ಕಳೆದ ಬಾರಿಯಷ್ಟು ವ್ಯಾಪಾರವನ್ನು ನಾವು ನಿರೀಕ್ಷೆ ಮಾಡುವ ಹಾಗೆಯೇ ಇಲ್ಲ ಎಂದು ಹಣತೆ ವ್ಯಾಪಾರಿಗಳು ಹೇಳಿದರು.
ಇದನ್ನೂ ಓದಿ:ಭಾರತದಲ್ಲಿ ಕೋವಿಡ್ 19 ಸೋಂಕು ಪ್ರಕರಣ 8.77 ಲಕ್ಷಕ್ಕೆ ಏರಿಕೆ: ಶೇ.92ರಷ್ಟು ಚೇತರಿಕೆ
ಕೋಲ್ಕತ್ತಾ, ಗುಜರಾತ್ ನಿಂದ ಹಣತೆ: ಕೆ.ಆರ್.ಮಾರುಕಟ್ಟೆ ಭಿನ್ನ ಶೈಲಿಯ ಮಣ್ಣಿನ ಹಣತೆ ದೀಪಗಳನ್ನು ಮಾರಾಟ ಮಾಡುವಲ್ಲಿ ದಕ್ಷಿಣ ಭಾರತದಲ್ಲಿ ಖ್ಯಾತಿ ಗಳಿಸಿದೆ. ಕೋಲ್ಕತ್ತಾ, ಗುಜರಾತ್ ಮತ್ತು ತಮಿಳನಾಡಿನಿಂದಲೂ ಹಲವು ಶೈಲಿಯ ಸಣ್ಣ ಮತ್ತು ದೊಡ್ಡ ಶೈಲಿಯ ಮಣ್ಣಿನಿಂದ ಮಾಡಿದ ಹಣತೆಗಳು ಮಾರುಕಟ್ಟೆ ಪ್ರವೇಶಿಸಿವೆ. ಹೀಗಾಗಿ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದಿಂದಲೂ ಗ್ರಾಹಕರು ಹೋಲ್ ಸೇಲ್‌ನಲ್ಲಿ ಹಣತೆಗಳನ್ನು ಖರೀದಿ ಮಾಡಲು ಕೆ.ಆರ್.ಮಾರುಕಟ್ಟೆಗೆ ಆಗಮಿಸುತ್ತಾರೆ.
ಆ ಬಾರಿ ಸುಮಾರು 15 ರಿಂದ 20 ಲೋಡ್ ಹಣತೆ ಉತ್ಪನ್ನಗಳು ಕೆ.ಆರ್. ಮಾರುಕಟ್ಟೆ ಪ್ರವೇಶ ಮಾಡಿದ್ದು ಹೊರ ಜಿಲ್ಲೆಯ ಹೋಲ್ ಸೇಲ್ ಗ್ರಾಹಕರು ಈಗಾಗಲೇ ಹಣತೆಗಳನ್ನು ಖರೀದಿಸಿದ್ದಾರೆ ಎಂದು ಕೆ.ಆರ್.ಮಾರುಕಟ್ಟೆಯ ಹೋಲ್ ಸೇಲ್ ವ್ಯಾಪಾರಿ ಕುಮಾರಸ್ವಾಮಿ ಹೇಳಿದರು
ಜೋಡಿ ಹಣತೆಗೆ ಬೆಲೆ ಎಷ್ಟು?
ಗೌರಿ-ಗಣೇಶ ದೀಪ ಜೋಡಿಗೆ 60 ರಿಂದ 80 ರೂ. ವರೆಗೆ ದೊರೆಯುತ್ತದೆ. ಹಾಗೆಯೇ ಲಕ್ಷ್ಮೀ ದೇವಿ ದೀಪ 100 ರಿಂದ 160 ರೂ.ವರೆಗೆ ಸಿಗಲಿದೆ. ಅಯ್ಯಪ್ಪ ದೀಪ 120 ರೂ. ಕುಬೇರ ದೀಪ ರೂ.160 ಪಂಚಮುಖೀ ದೀಪ 20ರೂ. ದಿಂದ 50 ರೂ. ವರೆಗೂ ದೊರೆಯಲಿದೆ. ಸಣ್ಣ, ಸಣ್ಣ ದೀಪಗಳ ಜೋಡಿ 4 ರಿಂದ5 ರೂ. ವರೆಗೂ ದೊರೆಯಲಿವೆ. ಹಾಗೆಯೇ ನಾಲ್ಕು, ಐದು ಮುಖಗಳ್ಳುಳ್ಳ ಹಣತೆಗಳು ವಿನ್ಯಾಸಕ್ಕೆ ತಕ್ಕ ಬೆಲೆಯಲ್ಲಿ ಖರೀದಿಸಬಹುದಾಗಿದೆ.