Advertisement
ಕಠೋರ, ನಿರ್ದಯ, ನಿರ್ಭರ, ಮಮಕಾರದ ಕರುಳು ಈ ಉರುಳು.
Related Articles
Advertisement
ಯುಗದಗಲದ ತಮಕೆ
ಅಮರತ್ವದಷ್ಟೇ ಆಯು
ಅನಂತತೆಯ ಗಣಿಯೊಳಗೆ
ಮಲಗಿದವಳು ಸರ್ಪಿಣಿ.
ಜಡ ಸುರುಳಿಯಾಕಾರದ ಪುಂಜ.
ಎಬ್ಬಿಸುವುದು ಸುಲಭ
ಹಣತೆಯ ಹಚ್ಚಿ
ಎಬ್ಬಿಸಲಿಲ್ಲ ಯಾರೂ
ಇಳಿಸಬೇಕು ಇಲ್ಲಿ ಒಳಗೆ
ಸಹಸ್ರಾರದ ಬುರುಡೆ ಸೀಳಿ
ಕಿರಣವೇಕದ ಸೂಜಿಮೊನೆ ಚುಚ್ಚಬೇಕು…
ಮೊದಲನೆಯದು ಆಜ್ಞಾ ಮೂಲಕೆ ಮೂಲ
ಭವ್ಯ ಭವಾವಳಿಯ ಬ್ರಹ್ಮದ ಬೆಳಕ ಇಳಿಸಬೇಕೆನೆ
ಸೀಳಬೇಕು ವೇಗ
ಬಲಪಡೆಯಬೇಕು….
ಮುಂದೆ ವಿಶುದ್ಧದಲಿ
ಪ್ರೇಮ ಮಾತಾಗಿ ಹರಿದು
ಪಕ್ವ -ಪರಿಪಕ್ವ
ಆರ್ದ್ರ ಮಾರ್ದನಿ
‘ಸಹಸ್ರಮಾನದ ತೃಷೆ ಇಂಗಿಸಬೇಕು…’
ಹಾಗೆ ಇಳಿದಿಳಿದು ಅನಾಹತಕೆ ಬಿದ್ದು
ಅನಾಹುತವ ನುಂಗಿ ಬೆಂದು
ಪರಿಪಕ್ವವಾಗಿ ಶುದ್ಧ ಪ್ರೀತಿಯ ಪ್ರಣತಿಗೆ ಮೆಚ್ಚಿ.
ಸೂರ್ಯನಿದ್ದರೂ ಕೂಡ
ಅರಿಯಲಾರದ ಘಳಿಗೆ
ಕಡೆದಿಟ್ಟ ತಮಕೆ ಸತ್ವದ ಮೊಳೆ ಬಡಿದು
ಏರಿ ಮೇಲೇರಿ
ಇಳಿದು ಕೆಳಗಿಳಿದು
ಅನೇಕ ಬಾರಿ ಎಳೆದಾಡಿ
ನುಡಿದಾಗ ಹಾದಿ ಸುಗಮ..|
ಹರಿವ ದಾರಿ ಓರೆಕೋರೆ
ನದಿಯ ಹರವು ಮಗದಷ್ಟು ವಿಸ್ತರ.
ಭ್ರಮೆಯಳಿಸಿ ಕಾಮಕೋಟಲೆಗೆ ಬೇಲಿ,
ಬೆಳಕ ಕಾಲುವೆ
ಕೆಳಗಿಳಿದು ಅರಳುವುದು ರಾಜ ಮಾರ್ಗ.
ಮುಂದಿನದು ಗಮ್ಯ:
ಸುರುಳಿಬಿದ್ದ ಸರ್ಪದ
ಹೆಡೆ ತುಳಿದರೂ ಆದೀತು
ಬಾಲ ಚುಚ್ಚಿದರೂ ಕೂಡ…
ಬೆಳಕ ಸೂಜಿಯ ಮೊನೆಗೆ
ಎದ್ದು ಭುಸುಗುಡಬೇಕು
ಹೆಡೆ ಎತ್ತಿಬೇಗ ..
ಮತ್ತೆ ವಿಸ್ತಾರಕೆ ಬಹುದೂರ
ಅನಂತತೆಯ ಪ್ರಶಾಂತತೆಗೆ,
ಬ್ರಹ್ಮಕೆ ಮಿಗಿಲಾದ ಭೋರ್ಗರೆವ
ಬೆಳಕಿಗೆ ಹೆಡೆಯಿಟ್ಟು
ಬದಲಾಗಿ ಕೊಳವೆಯಾಗಿ
ಪೂರ್ಣಗಂಗೆ ಆ ಜಗದಾಕಾರಣ
ಕಾರ್ಯದ ಮಹಾಮೇಘದ
ಸುಧಾರಸವನು ಕೆಳಗಿಳಿಸಬೇಕು…
ಮರ್ತ್ಯದಾ ಮೃತ ಘಟಿಸುವ ಮುನ್ನ
ದೀಪ ಹಚ್ಚಬೇಕು..
ಏಳು ಬೇಗ ಏಳು.
ದೀಪ ಸಾಲು ಬೆಳಗಿ ತಮ ಕಳೆಯಬೇಕು…
ಸ್ವರ್ಗದಾ ಮಳೆ ಮರ್ತ್ಯದಲಿ ಬೆಳೆಯಬೇಕು..
ಈ ಪೀಠಿಕೆ ಪೀಯೂಷಕೆ
ದೀಪಾವಳಿ ನಾಳೆ…..
–ಸಂದೀಪ್ .ಕೆ ವಿದ್ಯಾನಗರ ಮಂಗಳೂರು