ದೀಪಗಳನ್ನು ಹಚ್ಚಿ ಕತ್ತಲೆಯನ್ನು ಹೋಗಲಾಡಿಸಿ ಮನೆ ಮನವನ್ನು ಬೆಳಗುವ ದಿನವೇ ದೀಪಾವಳಿ. ಕಾರ್ತಿಕ ಮಾಸ ದೀಪಗಳ ಮಾಸ ಈ ತಿಂಗಳು ಪೂರ್ಣವಾಗಿ ಮನೆಯ ಹೊರಗೆ ರಾತ್ರಿಯ ಹೊತ್ತು ದೀಪಗಳನ್ನು ಹಚ್ಚಬೇಕು.
ಶ್ರೀ ರಾಮನು ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಆಚರಿಸುತ್ತಾರೆ. ಅಮವಾಸ್ಯೆಯ ಹಿಂದಿನ ದಿನ ನರಕಚತುರ್ದಶಿ ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಅಶ್ವಿನಿ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯ ಅಮಾವಾಸ್ಯೆ ಮತ್ತು ಕಾರ್ತಿಕ ಶುಕ್ಲ ಪಕ್ಷದ ಪ್ರತಿಪಾದಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಮಹಾವಿಷ್ಣುವಿನ ಪತ್ನಿಯಾದ ಮಹಾಲಕ್ಷ್ಮಿಯನ್ನು ಆರಾಧಿಸುವ ಹಬ್ಬವೇ ಧನಲಕ್ಷ್ಮಿ ಪೂಜೆ. ಸಮುದ್ರ ಮಥನದಿಂದ ಲಕ್ಷ್ಮಿ ಉದಯಿಸಿದ ದಿನವೂ ಹೌದು. ಹೀಗಾಗಿ ಉತ್ತರ ಭಾರತೀಯರಿಗೆ ಹೆಚ್ಚಿನ ಸಂಭ್ರಮ ಅದರಲ್ಲೂ ವ್ಯಾಪಾರಿಗಳಿಗೆ ದೀಪಲಕ್ಷ್ಮಿ ಬೆಳಗಿ ಧನಲಕ್ಷ್ಮಿ ಬರುವ ಭಾಗ್ಯದ ದಿನವಾಗಿದೆ. ಅವರಿಗೆ ವ್ಯಾಪಾರ-ವಾಣಿಜ್ಯ ನೂತನ ವರ್ಷ ಉದಯಿಸುವುದು ಇದೇ ದಿನ.
ವೈಷ್ಣವಿ ಸಂಗಪ್ಪ
ಔರಾದ