ಹೊಸಪೇಟೆ: ದೀಪಾವಳಿ ಹಬ್ಬದ ಸರಣಿ ರಜೆಯ ಹಿನ್ನೆಲೆಯಲ್ಲಿ ವಿಶ್ಬವಿಖ್ಯಾತ ಹಂಪಿಗೆ ಶುಕ್ರವಾರ (ನ1ರಂದು) ದೇಶ-ವಿದೇಶಿ ಪ್ರವಾಸಿಗರು, ಭೇಟಿ ನೀಡಿ, ಪ್ರಸಿದ್ದ ಸ್ಮಾರಕಗಳನ್ನು ಕಣ್ತುಂಬಿಕೊಂಡರು.
ಮೊದಲಿಗೆ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರು, ಸಾಸುವೆ ಗಣಪತಿ, ಕಡಲೆಕಾಳು ಗಣಪತಿ, ಬಡವಿಲಿಂಗ, ಉಗ್ರನರಸಿಂಹ, ಕೃಷ್ಣ ದೇವಾಲಯ ವೀಕ್ಷಣೆ ಮಾಡಿದರು.
ಹೇಮಕೂಟದಲ್ಲಿ ಸೂರ್ಯಾಸ್ತ ವೀಕ್ಷಣೆ ಮಾಡಿದರು. ಮೊಬೈಲ್ ಪೋನ್ ನಲ್ಲಿ ಪರಸ್ಪರ ಫೋಟೋ ಕ್ಲಿಕ್ಕಿಸಿಕೊಂಡು, ಖುಷಿ ಪಟ್ಟರು. ಬಳಿಕ ಭೂಮಿ ಮಟ್ಟದ ಶಿವಾಲಯ, ಹಜಾರ ರಾಮದೇವಾಲಯ, ಕಮಲ ಮಹಲ್, ಗಜಶಾಲೆ, ಮಹಾನವಮಿ ದಿಬ್ಬ, ರಾಣಿ ಸ್ನಾನ ಗೃಹ ಹಾಗೂ ವಿಜಯವಿಠಲ ದೇವಾಲಯದ ಅವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದರು.
ರಾಜ್ಯ ಸೇರಿದಂತೆ ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ, ಪ್ರಮುಖ ಸ್ಮಾರಕ ವೀಕ್ಷಣೆ ಮಾಡಿ, ಹಂಪಿ ಶಿಲ್ಪಾಕಲಾ ವೈಭವವನ್ನು ಹಾಡಿ ಹೊಗಳಿದರು.
ಪ್ರವಾಸಿಗರ ಪರದಾಟ
ಸರಣಿ ರಜೆಯ ಹಿನ್ನೆಲೆಯಲ್ಲಿ ಹಂಪಿಯ ಪ್ರಸಿದ್ಧ ವಿಜಯವಿಠಲ ದೇವಾಲಯ ವೀಕ್ಷಣೆಗೆ ತೆರಳುವ ಪ್ರವಾಸಿಗರು ಬ್ಯಾಟರಿ ಚಾಲಿತ ವಾಹನಗಳ ಕೊರತೆಯಿಂದ ಪರದಾಡಿದರು.
ಬ್ಯಾಟರಿ ಚಾಲಿತ ವಾಹನ ಕಾದು ಸುಸ್ತಾದ ಕೆಲ ಪ್ರವಾಸಿಗರು, ಅನಿವಾರ್ಯವಾಗಿ ಕಾಲ್ನಡಿಗೆಯ ಮೂಲಕ ವಿಠಲ ದೇವಾಲಯದ ಕಡೆ ಹೆಜ್ಜೆ ಹಾಕಿದ ದೃಶ್ಯ ಕಂಡು ಬಂದಿತು. ಪ್ರವಾಸಿಗರ ಸಂಖ್ಯೆಯ ಅನುಗುಣವಾಗಿ ಬ್ಯಾಟರಿ ಚಾಲಿತ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜತೆಗೆ ಗೆಜ್ಜಲ ಮಂಟಪದಿಂದ ಪುರಂದರ ದಾಸರ ಮಂಟಪದ ವರೆಗೆ ಬ್ಯಾಟರಿ ಚಾಲಿತ ವಾಹನಗಳನ್ನು ಓಡಿಸಲು ಕ್ರಮ ವಹಿಸಬೇಕು ಪ್ರವಾಸಿಗರ ಒತ್ತಾಸೆಯಾಗಿದೆ.