Advertisement

ಪಟಾಕಿ ಸುಡುವಾಗ ಎಚ್ಚರವಿರಲಿ !

05:25 PM Oct 24, 2022 | ದಿನೇಶ ಎಂ |

ದೀಪಾವಳಿ ಬೆಳಕಿನ ಹಬ್ಬ, ಎಲ್ಲೆಡೆ ಸಡಗರ ಸಂಭ್ರಮ. ದೀಪಾವಳಿ ಹಬ್ಬ ಆಚರಿಸುವುದು ಎಂದರೆ ಪಟಾಕಿಗೆ ವಿಶೇಷ ಸ್ಥಾನ. ಪಟಾಕಿ ಸಿಡಿಸಿದರೆ ಮಾತ್ರ ದೀಪಾವಳಿ ಹಬ್ಬ ಹಬ್ಬ ಎಂದೆನಿಸುವುದು ಎಂಬುದು ಎಲ್ಲರ ಭಾವನೆ.
ಪಟಾಕಿ ಎಂದರೆ ಸಂತೋಷದೊಂದಿಗೆ ಆತಂಕವೂ ಸಾಮಾನ್ಯ. ಅದರಲ್ಲೂ ಮುಖ್ಯವಾಗಿ ಚಿಕ್ಕ ಮಕ್ಕಳ ಪೋಷಕರಲ್ಲಿ ಆತಂಕ ಮೂಡುವುದು ಸಹಜ. ಪ್ರತಿ ವರ್ಷ ದೀಪಾವಳಿ ಸಂದರ್ಭ ಹಲವಾರು ಅಪಾಯ ಸಂಭವಿಸಿ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಅದ್ದರಿಂದ ಅಪಾಯ ಬರದೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
ಆರೋಗ್ಯದ ಬಗ್ಗೆ ಯೋಚಿಸಿದರೆ ಪಟಾಕಿಯಿಂದ ದೂರ ಉಳಿಯುವುದೇ ಒಳಿತು ಎಂದರೆ ತಪ್ಪಿಲ್ಲ. ಉಸಿರಾಟದ ತೊಂದರೆ, ಹೃದಯದ ತೊಂದರೆ ಇರುವವರು, ಸಣ್ಣ ಮಕ್ಕಳು ಮುಖ್ಯವಾಗಿ ಜಾಗ್ರತೆ ವಹಿಸುವುದು ಅಗತ್ಯ. ಪಟಾಕಿ ಹೊಡೆಯುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 1-3 ದಿನದ ಸಂಭ್ರಮಕ್ಕಾಗಿ ಆರೋಗ್ಯ ಹಾಳು ಮಾಡಿಕೊಳ್ಳುವುದು ಸೂಕ್ತವಲ್ಲ.
ಪಟಾಕಿ ವಿಷಯದಲ್ಲಿ ಪ್ರತಿ ವರ್ಷ ಎಷ್ಟೇ ಜಾಗೃತಿ ಮೂಡಿಸಿದರೂ ಅನಾಹುತ ಸಾಮಾನ್ಯ ಎಂಬತಾಗಿದೆ. ಪಟಾಕಿ ಹೊಡೆತದಿಂದ ಬರುವ ಶಬ್ದ ಕಿವಿಯ ತಮಟೆಯ ಶಕ್ತಿ ಕಡಿಮೆಯಾಗುತ್ತದೆ. ಪಟಾಕಿ ತಯಾರಿಸಲು ಉಪಯೋಗಿಸುವ ಮದ್ದಿನಿಂದ ಕಣ್ಣಿಗೆ ತೊಂದರೆ. ಪಟಾಕಿ ಸಿಡಿಸುವವರು ಎಚ್ಚರ ವಹಿಸುವುದು ಅಗತ್ಯ.
ಪಟಾಕಿ ಹೊಡೆಯುವಾಗ ಬರುವ ಹೊಗೆಯಿಂದ ಕಣ್ಣುರಿ ಬರುತ್ತದೆ. ಇದು ಪಟಾಕಿ ಹೊಡೆಯುವವರಿಗೆ ಮಾತ್ರವಲ್ಲದೇ ಸುತ್ತ-ಮುತ್ತ ಇರುವ ಎಲ್ಲರ ಆರೋಗ್ಯ ಮೇಲೂ ಪರಿಣಾಮ ಬೀರುತ್ತದೆ.
ಪಟಾಕಿ ಹೊಗೆಯಿಂದ ಶ್ವಾಸಕೋಶದ ತೊಂದರೆ ಉಂಟಾಗಿ ಕೆಮ್ಮುವುದು, ಸೀನುವುದು ಹೆಚ್ಚಾಗುತ್ತದೆ. ಅಸ್ತಮಾ ರೋಗಿಗಳು ಪಟಾಕಿ ಹೊಡೆಯುವ ಸ್ಥಳದಿಂದ ದೂರವಿದ್ದರೆ ಉತ್ತಮ. ಇಲ್ಲದಿದ್ದರೆ ಅನಾರೋಗ್ಯ ತೊಂದರೆ ಹೆಚ್ಚಾಗುವ ಸಂಭವವಿರುತ್ತದೆ.
ಅಧಿಕ ರಕ್ತದೊತ್ತಡದಿಂದ ಬಳಲುವವರು ತಲೆ ನೋವು, ತಲೆ ಸುತ್ತು, ರಕ್ತದೊತ್ತಡ, ತಲೆ ತಿರುಗುವ ಸಮಸ್ಯೆಗೆ ಒಳಗಾಗಬಹುದು. ಪಟಾಕಿ ಹೊಗೆ ಗರ್ಭಿಣಿಯರು ಸೇವಿಸಿದರೆ ತಾಯಿ-ಮಗು ಇಬ್ಬರಿಗೂ ಅಪಾಯವಿದೆ. ಮಗು ಹುಟ್ಟುತ್ತಲೇ ಉಸಿರಾಟದ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಗರ್ಭಿಣಿಯರು ಎಚ್ಚರ ವಹಿಸುವುದು ಅಗತ್ಯ.
ದೀಪಾವಳಿ ಸಂದರ್ಭ ವಾಯು ಮಾಲಿನ್ಯದ ಮಟ್ಟ ಶೇ. 10-15 ರಷ್ಟು ಹಾಗೂ ಶಬ್ದ ಮಾಲಿನ್ಯದ ಮಟ್ಟ ಶೇ.60 ರಷ್ಟು ಹೆಚ್ಚಾಗುತ್ತದೆ.

Advertisement

ಪಟಾಕಿ ಸಿಡಿಸುವಾಗ ಈ ಬಗ್ಗೆ ಜಾಗೃತೆ ವಹಿಸಿ:

ಮೊದಲನೆಯದಾಗಿ ಪಟಾಕಿ ಹೊಡೆಯಲು ಉತ್ತಮ ಸ್ಥಳ ಆರಿಸಿ. ವಿಶಾಲವಾದ ಪ್ರದೇಶ ಅಥವಾ ಮೈದಾನದಲ್ಲಿ ಪಟಾಕಿ ಹೊಡೆಯುವುದು ಒಳ್ಳೆಯದು. ಸ್ಥಳ ಕಡಿಮೆ ಇರುವವರು ಸಣ್ಣ-ಪುಟ್ಟ ಪಟಾಕಿಗಳನ್ನು ಮಾತ್ರ ಉಪಯೋಗಿಸಿ. ಇತರರಿಗೆ ತೊಂದರೆ ಆಗದಂತೆ ಜಾಗೃತೆ ವಹಿಸಿ.
*  ಪಟಾಕಿ ಸಿಡಿಸುವಾಗ ಮಕ್ಕಳ ಕಡೆಗೂ ಗಮನ ಹರಿಸಿ, ಚಿಕ್ಕ ಮಕ್ಕಳು ಆ ಸ್ಥಳದಿಂದ ದೂರ ಇರುವುದೇ ಉತ್ತಮ.
*  ಪಟಾಕಿ ಸಿಡಿಸುವಾಗ ಕಣ್ಣಿನ ಆರೋಗ್ಯದ ಬಗ್ಗೆಯೂ ಗಮನವಿರಲಿ. ಸಾಧ್ಯವಾದರೆ ನೇತ್ರ ಸುರಕ್ಷತಾ ಸಾಧನಗಳನ್ನು ಬಳಸಿ.
*  ಪಟಾಕಿ ಹೊಡೆಯುವಾಗ ಆದಷ್ಟು ಕಾಟನ್ ಬಟ್ಟೆಗಳನ್ನೇ ಧರಿಸಿ. ಇದು ಬಟ್ಟೆಗೆ ಬೇಗನೆ ಬೆಂಕಿ ಹತ್ತಿಕೊಳ್ಳುವುದನ್ನು ತಪ್ಪಿಸುತ್ತದೆ.
*  ಕಡಿಮೆ ಶಬ್ದ ಮತ್ತು ಕಡಿಮೆ ಹೊಗೆ ಬರುವ ಪಟಾಕಿಗಳಿಗೆ ಮೊದಲ ಆದ್ಯತೆ ನೀಡಿ. ಹಸಿರು ಪಟಾಕಿಗಳನ್ನು ಹೆಚ್ಚಾಗಿ ಬಳಸಿ.
*  ಪಟಾಕಿ, ನಕ್ಷತ್ರ ಕಡ್ಡಿ ಉಪಯೋಗಿಸುವಾಗ ಎಚ್ಚರವಿರಲಿ. ಬೆಂಕಿಯ ಕಿಡಿ ಮುಖ, ಕಣ್ಣು, ಕೂದಲಿಗೆ ಬರದಂತೆ ಎಚ್ಚರ ವಹಿಸಿ.
*  ಪಟಾಕಿ ಹೊಡೆಯುವಾಗ ಕಣ್ಣು ಮಾತ್ರವಲ್ಲದೇ ಕೈ-ಕಾಲು ಗಳಿಗೂ ತಗಲುವ ಅಪಾಯವಿರುವುದರಿಂದ ಆದಾಷ್ಟು ಎಚ್ಚರಿಕೆ ವಹಿಸುವುದು ಸೂಕ್ತ.
*  ಅರ್ಧ ಸುಟ್ಟ ಅಥವಾ ಸಿಡಿಯದೇ ಬಾಕಿ ಉಳಿದಿರುವ ಪಟಾಕಿಗಳನ್ನು ಬಳಸುವುದು ಬೇಡ. ಕತ್ತಲಲ್ಲಿ ಪಟಾಕಿ ಹೊಡೆಯುವ ಸಹಾಯ ಬೇಡ.
*  ಪಟಾಕಿ ಬಾಕ್ಸ್ ಪಕ್ಕದಲ್ಲಿ ಇಟ್ಟು ಪಟಾಕಿ ಹೊಡೆಯುವುದನ್ನು ತಪ್ಪಿಸಿ.
*  ಪ್ರಥಮ ಚಿಕಿತ್ಸೆಯ ಕಿಟ್ ಜೊತೆಗಿರಲಿ.
ಸುಪ್ರೀಂ ಕೋರ್ಟ್ ಪರಿಸರಕ್ಕೆ ಹಾನಿಯಾಗುವ ಪಟಾಕಿಗಳನ್ನು ಹೊಡೆಯಬಾರದು ಎಂದು ಆದೇಶ ನೀಡಿದೆ. ಕಳೆದ ವರ್ಷದಿಂದ ಸರ್ಕಾರ ಹಸಿರು ಪಟಾಕಿಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಹಾಗಾಗಿ ಎಲ್ಲರೂ ಆದಷ್ಟು ಹಸಿರು ಪಟಾಕಿಗಳನ್ನೇ ಬಳಸಿ. ಪಟಾಕಿ ಹೊಡೆಯಲು ರಾತ್ರಿ 8-10 ಗಂಟೆಯವರೆಗೆ ಮಾತ್ರ ಅವಕಾಶವಿದ್ದು, ಆ ಸಮಯದಲ್ಲೇ ಪಟಾಕಿ ಹೊಡೆಯುವುದು ಉತ್ತಮ. ಸಂಭ್ರಮ, ಸಡಗರದ ಜೊತೆಗೆ ಸುರಕ್ಷತೆ ಕಡೆಗೂ ಗಮನ ಹರಿಸುವುದು ಅಗತ್ಯ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು.

Advertisement

Udayavani is now on Telegram. Click here to join our channel and stay updated with the latest news.

Next