Advertisement

Deepawali 2023; ಗೋಪೂಜೆಯ ಖುಷಿ ಮಾತ್ರ ವರ್ಣಿಸಲು ಅಸಾಧ್ಯ

05:30 PM Nov 11, 2023 | Team Udayavani |

ದೀಪಾವಳಿ ದೀಪಗಳ ಹಬ್ಬ. ಈ ಹಬ್ಬವನ್ನು ಹಲವು ಸಂಪ್ರದಾಯ, ಸಂಸ್ಕೃತಿ ಮತ್ತು ಇತಿಹಾಸ ಸಮ್ಮಿಲನದ ದ್ಯೋತಕವಾಗಿ ಆಚರಿಸಲಾಗುತ್ತದೆ. ಹಾಗಾಗಿ ಪ್ರತಿ ದಿನಕ್ಕೂ ಅದರದ್ದೇ ಆದ ಮಹತ್ವವಿದೆ. ಅದರಲ್ಲಿಯೂ ಬಲಿಪಾಡ್ಯಮಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದು ಹಿಂದೂ ತಿಂಗಳ ಕಾರ್ತಿಕ ಮಾಸದ ಮೊದಲ ದಿನವಾಗಿದೆ. ರಾಕ್ಷಸ ರಾಜ ಬಲಿಯ ಮೇಲೆ ವಿಷ್ಣುವಿನ ವಿಜಯವನ್ನು ಸಂಕೇತಿಸಲು ಇದನ್ನು ಆಚರಿಸಲಾಗುತ್ತದೆ. ಜೊತೆಗೆ ಗೋಪೂಜೆಯನ್ನು ಆಚರಿಸುವ ಕ್ರಮ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

Advertisement

ಅದರಂತೆಯೇ ನಮ್ಮ ಮನೆಯಲ್ಲಿಯೂ ಗೋವಿನ ಪೂಜೆ ನಡೆಸಲಾಗುತ್ತದೆ. ನನ್ನ ತಂದೆ ತಾಯಿ ಮಾಡುವ ಆಚಾರ ವಿಚಾರ ಎಲ್ಲವೂ ನನ್ನನ್ನು ಬಾಲ್ಯದಿಂದ ಸೆಳೆದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಗೋ ಪೂಜೆಯಂದು ಬೆಳಿಗ್ಗೆ ಬೇಗ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಹೊಸ ಉಡುಪು ತೊಟ್ಟು, ಕೊಟ್ಟಿಗೆ ಸುತ್ತಲೂ ರಂಗೋಲಿ ಹಾಕಿ, ಗೋವಿನ ಹೆಜ್ಜೆಯನ್ನು ಮನೆಯ ಎಲ್ಲ ಭಾಗದಲ್ಲಿಯೂ ಬಿಡಿಸಿ, ಹೂವು ತೋರಣಗಳಿಂದ ಅಲಂಕಾರ ಮಾಡುತ್ತಿದ್ದೆವು. ಅಕ್ಕ ಮತ್ತು ನಾನು ಅಮ್ಮ ಹೇಳಿದ ಕೆಲಸ ಮುಗಿಸಿ ಗೋವುಗಳಿಗೂ ಸಿಂಗಾರ ಮಾಡುತ್ತಿದ್ದೆವು. ಅವುಗಳ ಮೈ ತೊಳೆದು ಕುಂಕುಮ ಮತ್ತು ಶೇಡಿಯನ್ನು ಅವುಗಳಿಗೆ ಬಡಿದು, ಸಿಂಗಾರ, ಅಡಿಕೆ, ಕಾಯಿಯನ್ನು ಕುತ್ತಿಗೆಗೆ ಕಟ್ಟಿ ಮದುವಣಗಿತ್ತಿಯ ಹಾಗೆ ತಯಾರಿ ಮಾಡುತ್ತಿದ್ದೆವು. ಬಳಿಕ ಅಪ್ಪ ಅವುಗಳಿಗೆ ಆರತಿ ಮಾಡಿ, ನೈವೇದ್ಯ ಇರಿಸಿ ಪೂಜೆ ಮಾಡುತ್ತಾರೆ. ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ನೈವೇದ್ಯಕ್ಕೆ, ಸಿಹಿ ಅನ್ನ ಉಪ್ಪು ಹಾಕದಿರುವ ದೋಸೆ, ಅಪ್ಪಮ್ ಗಳನ್ನು ತಯಾರಿಸಲಾಗುತ್ತದೆ. ಗೋಪೂಜೆ ಮಾಡುವಾಗ ಸಿಗುವ ಖುಷಿ ಮಾತ್ರ ವರ್ಣಿಸಲು ಅಸಾಧ್ಯ. ಈಗಲೂ ನಮಗೆ ಅದೇ ಖುಷಿಯಿದೆ. ಯಾವುದೇ ಭಾಗದಲ್ಲಿದ್ದರೂ ದೀಪಾವಳಿಗೆ ಮನೆಗೆ ಹೋಗುವುದನ್ನು ತಪ್ಪಿಸುವುದಿಲ್ಲ.

ಆದಷ್ಟು ಗೋವುಗಳನ್ನು ಸಾಕಿ, ಸಲಹಿರಿ. ಕಣ್ಣಿಗೆ ಕಾಣುವ ದೇವರಲ್ಲಿ ಗೋವುಗಳು ಅಗ್ರಸ್ಥಾನದಲ್ಲಿರುತ್ತವೆ. ಮನೆ ನಂದಗೋಕುಲವಾಗಲು ಒಂದು ಗೋವಾದರೂ ಇರಲೇ ಬೇಕು ಎಂಬುದನ್ನು ಎಂದಿಗೂ ಮರೆಯಬೇಡಿ. ಎಲ್ಲರಿಗೂ ದೀಪಾವಳಿ, ಗೋಪೂಜೆ ಹಬ್ಬದ ಶುಭಾಶಯಗಳು.

ರಮ್ಯಾ ಭಟ್ ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next