ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ನನಗೆ ಎಲ್ಲಿಲ್ಲದ ಸಂಭ್ರಮ. ಬಾಲ್ಯದಿಂದ ಅದೆಷ್ಟೋ ಆಚರಣೆಯಲ್ಲಿ ವಿಶೇಷವಾಗಿ ದೀಪಾವಳಿ ನನ್ನ ಮೆಚ್ಚಿನ ಹಬ್ಬ ಎಂದರೆ ತಪ್ಪಾಗಲಾರದು. ಕಳೆದ 12 ವರ್ಷದಿಂದ ಬೆಂಗಳೂರಲ್ಲಿ ನೆಲೆಸಿದರು ದೀಪಾವಳಿಗೆ ನನ್ನ ಊರು ಕಾಸರಗೋಡಿಗೆ ತಲಪುತ್ತೇನೆ. ಇದಕ್ಕೆಲ್ಲ ಕಾರಣ ಬಾಲ್ಯದಲ್ಲಿ ದೀಪಾವಳಿ ಆಚರಣೆಯ ಹಿನ್ನೆಲ್ಲೆ ಮತ್ತು ಅದನ್ನು ಆಚರಣೆ ಮಾಡಿ ಬಂದಂತಹ ರೀತಿ.
ಬೆಂಗಳೂರಿನಿಂದ ದೀಪಾವಳಿಗೆ ಊರಿಗೆ ಹೋಗುವುದೆಂದರೆ ಇತ್ತೀಚೆಗೆ ಹರಸಾಹಸ ಪಡಬೇಕು. ಕೆಲಸದ ಒತ್ತಡದ ನಡುವೆ ದೀಪಾವಳಿಗೋಸ್ಕರ ಎಲ್ಲ ಕೆಲಸವನ್ನು ಆದಷ್ಟು ಮುಂಚಿತವಾಗಿ ಮುಗಿಸುವ ಕಾರ್ಯ ಒಂದೆಡೆ ಆದರೆ ಅಲಂಕಾರಿಕ ವಸ್ತುಗಳು, ಸಿಹಿತಿಂಡಿ ಮತ್ತು ಪಟಾಕಿ ಮುಂತಾದವುಗಳನ್ನು ಮೊದಲಿಗೆ ಖರೀದಿಸಿ ಅದನ್ನೆಲ್ಲ ನಮ್ಮ ಬಟ್ಟೆ ಜೊತೆ ಬ್ಯಾಗ್ ನಲ್ಲಿ ಸೇರಿಸುದು ನಮಗೆ ಮಹಾಸಾಧನೆಯೇ ಸರಿ.
ಯಾಕೆಂದರೆ ಸಾಧಾರಣವಾಗಿ ಎಲ್ಲ ಬಸ್ ಟಿಕೆಟ್ ಬೆಲೆ ಗಗನಕ್ಕೆ ಏರಿರುತ್ತದೆ. ಅದಕ್ಕೆ ನಮ್ಮ ಪ್ರಯಾಣ ಕರ್ನಾಟಕ ಸಾರಿಗೆಯ ಕೆಂಪು ಬಸ್ಸು ಈ ಸಮಯದಲ್ಲಿ ಫೇಮಸ್ ನಮಗೆಲ್ಲ. ಎಲ್ಲರೂ ಊರಿಗೆ ತೆರಳುವುದರಿಂದ ನಮ್ಮ ಲಗೇಜ್ ಜಾಸ್ತಿ ಆದರೆ ಕಿರಿಕಿರಿ ಬೇರೆ. ಇದೆಲ್ಲದರ ನಡುವೆ ಟ್ರಾಫಿಕ್ ಕಿರಿಕಿರಿ ಬೇರೆ.. ಯಾವಾಗ ಊರಿಗೆ ತಲುಪಿ ದೀಪಾವಳಿಯ ತಯಾರಿ ಮಾಡುವುದು ಎನ್ನುವ ಚಿಂತೆ ಬಿಟ್ಟರೆ ಬೇರೆ ಯಾವುದೇ ಕಷ್ಟಗಳಿದ್ದರು ನೆನಪಿಗೆ ಬಾರದಂತೆ ಮಾಡುವ ಹಬ್ಬವೆಂದರೆ ತಪ್ಪಾಗಲಾರದು.
ಜೀವನದ ಬೆಳಕಿನ ಈ ಹಬ್ಬ ಬಾಲ್ಯದ ಚೇಷ್ಟೆಗಳನ್ನು ನೆನಪಿಸಿದೆ. ಚಿಕ್ಕವನಿದ್ದಾಗ ಪಟಾಕಿಗಾಗಿ ಹೊಡೆದಾಡಿದ ಚಿತ್ರಣ ಮನಸಿನಲ್ಲಿ ಮೂಡುತ್ತದೆ. ದೀಪಾವಳಿಗೆ ತೆಂಗಿನ ಎಣ್ಣೆ ದೇಹದ ಎಲ್ಲ ಭಾಗಗಳಿಗೆ ಹಚ್ಚಿ, ಬಿಸಿ ನೀರಿನಿಂದ ದೇಹದ ಕೊಳೆಯನ್ನು ತೆಗೆಯುವುದು ಒಂದು ವಿಶೇಷವಾದ ಸಂಪ್ರದಾಯ. ಈ ಸಂಪ್ರದಾಯಗಳು ಇಂದಿಗೂ ನಮ್ಮಲ್ಲಿರುವುದು ಮುಖ್ಯವಾಗಿ ಅನ್ಯೋನ್ಯತೆಯಿಂದ ಸಂತೋಷವನ್ನು ಹಂಚಿ ಸಿಹಿ ತಿಂದು ಕಳೆದ ಎಲ್ಲ ಕಷ್ಟಗಳನ್ನು ದೂರಮಾಡಿ ಉಲ್ಲಾಸಭರಿತವಾಗಿಸುವಲ್ಲಿ ದೀಪಾವಳಿ ಹಬ್ಬ ಬಹುಮುಖ್ಯ ಪಾತ್ರವಹಿಸುತ್ತದೆ. ರಾತ್ರಿ ಆದಂತೆ ಎಲ್ಲರ ಮನೆಯಲ್ಲಿ ದೀಪಗಳದ್ದೇ ಅಲಂಕಾರ. ಹಣತೆ ಗೆ ಎಣ್ಣೆಯನ್ನು ಹಾಕಿ ದೀಪವನ್ನು ಉರಿಸಿ, ಪಟಾಕಿ ಸಿಡಿಸಿ ಯಾರ ಮನೆಯಲ್ಲಿ ಜಾಸ್ತಿ ಸಿಡಿಸಿದ್ದಾರೆ ಎಂದು ತಿಳಿಯುವುದೇ ಒಂದು ಕುತೂಹಲ. ದೀಪದ ಅಲಂಕಾರದ ಜೊತೆ ಫೋಟೋ ತೆಗೆಸಿ ಮೊಬೈಲ್ ನಲ್ಲಿ ಅಪ್ಲೋಡ್ ಮಾಡದಿದ್ದರೆ ಈಗಿನ ಹುಡುಗರಿಗಂತೂ ನಿದ್ರೆಯೇ ಬಾರದು. ಹುಡುಗಿಯರಿಗಂತೂ ಸೆಲ್ಫಿಯೇ ಮುಖ್ಯ. ಏನೇ ಇರಲಿ ಅಂದಿನಿಂದ ಇಂದಿಗೂ ದೀಪ ಬೆಳಗುವ ದೀಪಾವಳಿ ಆಚರಣೆಯಲ್ಲಿ ಸ್ವಲ್ಪ ಬದಲಾವಣೆ ಆದರೂ ಆ ಸಂತೋಷಕ್ಕೆ ಎಲ್ಲರು ಪಾತ್ರರಾಗಿರುತ್ತಾರೆ… ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು….
-ನವೀನ್ ಚಂದ್ರ, ಕಾಸರಗೋಡು