Advertisement

ಆಗಮಿಸುವ ಬಲೀಂದ್ರನಿಗೆ ಸೊಡರ ಆರತಿ; ಗೋಪೂಜೆಯ ಮಹತ್ವ

11:00 PM Nov 04, 2021 | Team Udayavani |

ದೀಪ ಮೂಲದಲ್ಲಿ ಬ್ರಹ್ಮ ದೇವರು, ದೀಪ ಮಧ್ಯದಲ್ಲಿ ಜನಾರ್ದನ ದೇವರು, ದೀಪಾಗ್ರದಲ್ಲಿ ರುದ್ರ ದೇವರು; ಹೀಗೆ ಪ್ರಜ್ವಲಿಸುವ ದೀಪದಲ್ಲಿ ಮೂರು ಮೂರ್ತಿಗಳ ಸನ್ನಿಧಾನವಿದೆ. ದೀಪ ಎಂದರೆ ತೇಜಸ್ಸು, ಹೊಳಪು, ಅನಲ, ಕಿರಣ, ಪ್ರಕಾಶ ಎಂದು ಅಥೆìçಸಿಕೊಳ್ಳಲಾಗುತ್ತದೆ. ದೀಪವನ್ನು ಜ್ಞಾನ ಎಂಬುದಾಗಿಯೂ ತಿಳಿಯಲಾಗಿದೆ. ಮಂಗಳ, ಶುಭಕರ, ಕಲ್ಯಾಣಕರವಾದುದು ಎಂದು ಸಾಂದರ್ಭಿಕವಾಗಿ ದೀಪವನ್ನು ಉದ್ದೇಶಿಸಿ ವಿವರಿಸ ಲಾಗುತ್ತದೆ. ಇಂತಹ “ದೀಪ’ವೇ ಪ್ರಧಾನವಾಗಿ “ದೀಪ’ವನ್ನೇ ಬೆಳಗುತ್ತಾ ಆಚರಿಸುವ ಹಬ್ಬ ದೀಪಾವಳಿ.

Advertisement

ಹಬ್ಬ(ಪರ್ಬ) ಎಂದರೆ ಅದು ದೀಪಾವಳಿ. ಇದು ಪೂರ್ವದಲ್ಲಿ ದೇಶವನ್ನು ಆಳಿದ ಜನಪ್ರಿಯ ಅರಸ ಬಲೀಂದ್ರನನ್ನು ಬರಮಾಡಿಕೊಂಡು “ಆವಾಹನೆ – ವಿಸರ್ಜನೆ’ ಪರಿಕಲ್ಪನೆಯ ವಿಧಾನದಲ್ಲಿ ಪೂಜಿಸಿ ಪೊಲಿ ಎಂಬ “ಸಮೃದ್ಧಿ’ಯ ಹರಕೆಗೊಳ್ಳುವ ಸಂದರ್ಭ.

ಆಗಿ ಹೋದ ಅರಸನೊಬ್ಬನ ಸ್ಮರಣೆಗೆ ಇಂತಹ ಅದ್ದೂರಿಯ ಆಚರಣೆಯೇ…, ಹೌದು..! ಬಲಿ ಅಥವಾ ಬಲಿಯೇಂದ್ರ ಈ ದೇಶವನ್ನು ಸತ್ಯ ಧರ್ಮದಿಂದ ಆಳಿದ, ಧನ, ಧಾನ್ಯ, ವಸ್ತು, ವಾಹನಾದಿ ಸಕಲೈಶ್ವರ್ಯಗಳನ್ನು ಸಾಧಿಸಿ ತನ್ನ ಪ್ರಜಾ ಸಂದೋಹಕ್ಕೆ ಕೊಡಮಾಡಿದ ಮಹನೀಯ. ದಾನ, ಧರ್ಮ, ಹೋಮ, ನೇಮ, ನಡಾವಳಿಗಳನ್ನು ಶ್ರದ್ಧಾ ಭಕ್ತಿಯೊಂದಿಗ ನಡೆಸಿ ಧರ್ಮ-ಸಂಸ್ಕೃತಿಯ ರಕ್ಷಕನಾಗಿ, ಪ್ರಜಾರಂಜಕನಾಗಿ ಪೊಡವಿಯನ್ನಾಳಿದ ಜನಪ್ರಿಯ ಅರಸ ಬಲಿ.

ವಾಗ್ಧಾನಕ್ಕೆ ಬದ್ಧನಾಗಿ ತನ್ನ ದೇಶ, ಕೋಶ, ಭಂಡಾರ, ಪ್ರಜಾ ಸಂದಣಿಯನ್ನು ತೊರೆದು ದೇಶ ತ್ಯಾಗಮಾಡಿದ ಪುಣ್ಯಾತ್ಮ. ಆತ ವರ್ಷಕ್ಕೆ ಒಂದು ಬಾರಿ ಆಗಮಿಸಿ ತನ್ನ ರಾಜ್ಯದ ಕೃಷಿ ಸಮೃದ್ಧಿ, ಪ್ರಜಾವರ್ಗವನ್ನು ಕಂಡು ಹೋಗುವ ಸಂದರ್ಭ ದೀಪಾವಳಿ.

ಕೃಷಿ ಸಂಸ್ಕೃತಿ:

Advertisement

ಹಾಗಿದ್ದರೆ ಈ ಸಂಭ್ರಮ, ಸಡಗರ, ದೀಪಾ ರಾಧನೆಗಳೇ ಮೊದಲಾದ ವಿಶಿಷ್ಟ ಆಚರಣೆಗಳೆಲ್ಲ ಏಕೆ ಬೇಕು?

ಮಹನೀಯ ಬಲಿಯು ದೇಶವಾಳಿದ ವರ್ಷದ ಪ್ರತಿದಿನವೂ ನಾವು ಇಂದು ವರ್ಷದಲ್ಲಿ ಒಂದು ದಿನ (ಅಥವಾ ಮೂರು ದಿನ) ಆಚರಿಸುವ ದೀಪಾವಳಿಯ ದಿನದ ವಿಜೃಂಭಣೆ – ಸಮೃದ್ಧಿ ಯನ್ನು ಹೊಂದಿತ್ತು.

ಅದರ ನೆನಪಿಗಾಗಿ ಬಲಿಯು ಆಗಮಿಸಿ- ನಿರ್ಗಮಿಸುವ ಅವಧಿಯಲ್ಲಿ ಈ ಹಬ್ಬ. ಇದು  ವೈಭವೀ ಕರಣಗೊಂಡ ಅಥವಾ ಒತ್ತಾಯದ ಅಥವಾ ಸೋಗಿನ ಆಚರಣೆಯಾಗಿಯೂ ಆಚರಿಸ ಲಾಗುತ್ತಿದೆ. ಆದರೆ ದೀಪಾವಳಿಯ ಪಾರಂಪರಿಕ ಸೊಬಗಿನ ಭವ್ಯತೆ ಇನ್ನೂ ಉಳಿದುಕೊಂಡಿದೆ. ಏಕೆಂದರೆ ದೇಶದಲ್ಲಿ ಕೃಷಿ ಸಂಸ್ಕೃತಿ ನಾಶ ವಾಗಿಲ್ಲವಲ್ಲ.

ಕೃಷಿಯ ಹುಟ್ಟುವಳಿ ಮನೆಯಂಗಳಕ್ಕೆ ಬಂದಿರು ತ್ತದೆ. ಮನೆಯ ಚಾವಡಿಯಲ್ಲಿ ಧಾನ್ಯದ ರಾಶಿ ಇರುತ್ತದೆ, ಮನೆತುಂಬಿರುವ ಮನಸ್ಸು ಪ್ರಸನ್ನವಾಗಿರುವ, ನಿಸರ್ಗ ನಿಚ್ಚಳವಾಗಿರುವ ವೇಳೆ ಇದಾಗಿದೆ. ಇದು ಸಹಜವಾದ ಸಂಭ್ರಮದ ಕಾಲ. ಇಂತಹ ಆನಂದ, ಅಮಿತೋತ್ಸಾಹಗಳು ಕೃಷಿ ಕಾರಣವಾಗಿ ಬಲಿ ಮಹಾರಾಜನ ರಾಜ್ಯದಲ್ಲಿ ಸದಾ ತುಂಬಿ ತುಳುಕುತ್ತಿತ್ತು. ಅದರ ನೆನಪಿಗೆ ದೀಪಾವಳಿ. ಕೃಷಿ ಪ್ರಧಾನವಾದ ಆಚರಣೆ, ಕೃಷಿಯ ಹುಟ್ಟುವಳಿಯ ಆರಾಧನೆ, ಸದಾ ಸಮೃದ್ಧಿಯನ್ನು ಹಾರೈಸುವ, ಕೃಷಿ ಸಹಾಯಿ ಪ್ರಾಣಿ ಮತ್ತು ಉಪಕರಣಗಳಿಗೆ ಕೃತಜ್ಞತಾರ್ಪಣೆ ಹೇಳುವ ಸುಸಂದರ್ಭ.

ಅಮಾವಾಸ್ಯೆಯ ಕಪ್ಪುಕತ್ತಲಲ್ಲಿ ಆಗಮಿಸುವ ಬಲೀಂದ್ರನನ್ನು ಸ್ವಾಗತಿಸುವ ಸಡಗರಕ್ಕೆ “ದೀಪ’. ಮಂಗಳಮಯ ಸನ್ನಿವೇಶದ ದ್ಯೋತಕವಾಗಿ “ದೀಪ’  ಪ್ರಧಾನವಾಗುತ್ತದೆ. ಕಾರ್ತಿಕ ಮಾಸದ ದೀಪೋತ್ಸವಕ್ಕೆ ಆರಂಭ ಎಂಬ ಅರ್ಥದಲ್ಲೂ  ದೀಪ. ದೀಪ ಮನಸ್ಸುಗಳನ್ನು ಜೋಡಿಸುವ ಮಾಧ್ಯಮವೂ ಹೌದು ತಾನೆ? “ತಮಸೋಮಾ ಜ್ಯೋತಿರ್ಗಮಯ’.

ಕೃತಜ್ಞತಾರ್ಪಣೆ:

ಧಾನ್ಯ ಸಂಪತ್ತನ್ನು ನೀಡಿದ ಕೃಷಿ ಕ್ಷೇತ್ರ(ಗದ್ದೆ)ಯ ಬದಿಯಲ್ಲಿ ದೀಪ-ಸೊಡರು ಹಚ್ಚಿಟ್ಟು , ಬಲಿ ಸಮರ್ಪಿಸಿ (ಬಲಿ: ಅವಲಕ್ಕಿ, ತೆಂಗಿನ ಕಾಯಿಯ ತುಂಡು, ವೀಳ್ಯದೆಲೆ, ಅಡಿಕೆ ಮುಂತಾದ ವಸ್ತುಗಳು. ಪ್ರಾದೇಶಿಕವಾಗಿ ವಸ್ತುಗಳಲ್ಲಿ ವ್ಯತ್ಯಾಸವಿದೆ)

ಬಲೀಂದ್ರನನ್ನು ಕರೆದು ಸಮೃದ್ಧಿ ಯನ್ನು ಯಾಚಿ ಸುವ ವಿಧಿಯು ಪ್ರಾಪಂಚಿಕ- ಪಾರಮಾರ್ಥಿಕ ಗಳನ್ನು ಬೆಸೆಯುವ ಸಾಮಾನ್ಯ-ಅಸಾಮಾನ್ಯ ಹೊಂದಾ ಣಿಕೆ ಗಳ ಪರಿಕಲ್ಪನೆಯ ಬಂದು ಹೋಗುವ ಸಮೃದ್ಧಿಯ ದೇವತೆಯಾಗಿ ಬಲೀಂದ್ರನ ಸ್ಮರಣೆಯಾಗುತ್ತದೆ. ಮುಂದೆ ಮನೆಯಂಗಳ – ಚಾವಡಿ – ಕಣಜ ದಲ್ಲಿ ಶೇಖರಿಸಿದ ಧಾನ್ಯ ಸಂಪತ್ತಿಗೆ ದೀಪಾರಾಧನೆ (ತುಡಾರ್‌ ತೋರಿಸುವುದು). ಧಾನ್ಯವೇ “ಲಕ್ಷ್ಮೀ’, ಹಾಗಾಗಿ ಪ್ರತ್ಯೇಕ ಲಕ್ಷ್ಮೀಪೂಜೆ ಬಹುಶಃ ಜನಪದರಲ್ಲಿ ಅಥವಾ ಕೃಷಿಕರಲ್ಲಿಲ್ಲ.

ಕೃಷಿಕನಿಗೆ ಹಟ್ಟಿ ಕೊಟ್ಟಿಗೆ ಮುಖ್ಯವಾದುದು. ಸಾಗುವಳಿಗೆ ಕೋಣ, ಎತ್ತುಗಳು ಸಹಾಯಿ ದನಕರು ಗಳೂ ಅಷ್ಟೇ ಪ್ರಧಾನ. ಇವುಗಳ ಸಹಕಾರವನ್ನು ನೆನಪಿಸಿಕೊಂಡು ದೀಪತೋರಿಸುವ ಸಂಪ್ರದಾಯದಲ್ಲಿ ಕೃತಜ್ಞತಾರ್ಪಣೆಯ ಭಾವ ಸ್ಪಷ್ಟ. ನೇಗಿಲು, ಹಾರೆ ಮುಂತಾದ ಉಪಕರಣಗಳನ್ನು ತೊಳೆದಿರಿಸಿ ಅವುಗಳಿಗೆ ದೀಪ ತೋರಿಸಿ ಧನ್ಯ ವಾದ ಪ್ರಕಟಿಸುವ ಆಚರಣೆ ದೀಪಾವಳಿಯ ಸಂಭ್ರಮದಲ್ಲಿದೆ. ಈ ಭೂಮಿಯನ್ನು ಆಳಿದ ಒಬ್ಬ ಅರಸನ ಸ್ಮರಣೆ ಹಾಗೂ ನಮ್ಮ ಮಣ್ಣಿನ ಸಾಂಸ್ಕೃತಿಕ ಭವ್ಯತೆಯ ಅನಾವರಣವಾಗಿಯೂ ದೀಪಾವಳಿ ರೂಢಿಯಲ್ಲಿದೆ.

ವಾಮನಾವತಾರಿ ವಿಷ್ಣುವಿನ ಪಾದದ ತುಳಿತ ದಲ್ಲಿ ಬಲೀಂದ್ರ ಪಾತಾಳ ಸೇರುತ್ತಾನೆ ಅಥವಾ ಭೂಗತನಾಗುತ್ತಾನೆ, ಭೂಮಿಯಲ್ಲಿ ವಿಲೀನ ನಾಗುತ್ತಾನೆ. ಕೃಷಿ ಸಮೃದ್ಧಿಯಾಗಿ ಬಲೀಂದ್ರನನ್ನು ನಂಬುವ, ಆರಾಧಿಸುವ, ಸಮೃದ್ದಿಯನ್ನು ಆತನಿಂದಲೇ ಯಾಚಿಸುವ ಜನಪದರ ಕಲ್ಪನೆ, ಸ್ವೀಕಾರ ಬಹಳ ಆತ್ಮೀಯವಾಗಿ ಭಾಸವಾಗುತ್ತದೆ.

ವಿಶ್ವದ ಮನುಕುಲದ ಮಾತೃಸ್ಥಾನದಲ್ಲಿ ನಿಲ್ಲುವ ಗೋ ಹೆತ್ತ ತಾಯಿಯಂತೆ. ಅಲ್ಲ…ಅದಕ್ಕಿಂತಲೂ ಹೆಚ್ಚು. ಜೀವಿತಾವಧಿ ಪೂರ್ತಿ ಹಾಲುಕೊಡುವ ಪ್ರಾಣಿ. ಗೋ ಎಂದರೆ ಸರ್ವ ದೇವಾನುದೇವತೆಗಳ ಸಾನ್ನಿಧ್ಯವಿರುವ ಪವಿತ್ರ ಪ್ರಾಣಿ.

ಕತ್ತಲಲ್ಲಿ ಬೆಳಕು ಸಂಭ್ರಮಿಸಲಿ. ಕತ್ತಲನ್ನು ಮತ್ತು ಬೆಳಕನ್ನು ಸಮಾನವಾಗಿ ಸ್ವೀಕರಿಸೋಣ. ಗೋ ರಕ್ಷಣೆ ದೇಶದ ಪರಮ ಧರ್ಮವಾಗಲಿ.

ಬಲಿಯ ಪುರಾಣ:

ಪುರಾಣದ ಕಥೆಗಳು ಹೇಳುವಂತೆ ಬಲಿ ಒಬ್ಬ ಖಳನಾಗಿರುತ್ತಾನೆ. ಆದರೆ ಸತ್ಕಾರ್ಯ,  ದಾನ- ಧರ್ಮ, ಯಾಗ-ಯಜ್ಞಗಳಿಂದಲೂ ಗಮನ ಸೆಳೆಯು ತ್ತಾನೆ. ವಾಮನನಾದ ಶ್ರೀಹರಿಯ ಕೃಪೆಗೆ ಪಾತ್ರನಾಗುತ್ತಾನೆ.

ಆದರೆ ಜನಪದ ಸಾಹಿತ್ಯ (ಪಾರ್ದನ)ಗಳು ಹೇಳುವಂತೆ ಬಲಿ ಸಜ್ಜನ ನಾಯಕ. ಇವನ ಉತ್ಕಾಂತಿಯನ್ನು ಕಂಡ ದೇವತೆಗಳು ಅಸಹನೆ ಯಿಂದ ನಾರಾಯಣನಲ್ಲಿ ದೂರುತ್ತಾರೆ. ನಾರಾಯಣ ದೇವರು ವಾಮನನಾಗಿ ಬಂದು ಯಾಗ ನಿರತನಾದ ಬಲಿಯಲ್ಲಿ ಭೂ ದಾನ ಬೇಡುತ್ತಾರೆ, ಆತನನ್ನು ಪಾತಾಳಕ್ಕೆ ತುಳಿ ಯುತ್ತಾರೆ. ಆದರೆ ವಾಮನನಾಗಿ ಬಂದ ದೇವರು ತ್ರಿವಿಕ್ರಮನಾಗಿ ಬೆಳೆದು ಬಲಿಯನ್ನು ಅನುಗ್ರಹಿಸುವ ಸಂಗತಿ ಮಾತ್ರ ಬಲಿಯ ನೈತಿಕತೆ – ಶ್ರೇಷ್ಠತೆಯನ್ನಾಗಿ ಜನಪದರು ಸ್ತುತಿಸುತ್ತಾರೆ.

ಬಹುಮಾನ್ಯ ಗೋವಿಗೆ ಪೂಜೆ :

ಜನಪದರಲ್ಲಿ ಪ್ರತ್ಯೇಕ ಗೋಪೂಜೆ ಎಂದಿಲ್ಲ. ದೀಪಾವಳಿಯಂದು ಮನೆಯ ಹಟ್ಟಿಯಲ್ಲಿರುವ, ಕೃಷಿ ಸಹಾಯಿ ದನಕರು, ಕೋಣ, ಎತ್ತುಗಳನ್ನು ತೊಳೆದು ಹೂಮಾಲೆಯಿಂದ ಅಲಂಕರಿಸಿ ದೀಪಾ ವಳಿಯ ವಿಶೇಷ ತಿಂಡಿಗಳನ್ನು ತಿನ್ನಲು ಇಟ್ಟು ಅವುಗಳು ತಿನ್ನುತ್ತಿರುವಂತೆ ದೀಪ (ತುಡಾರ್‌) ತೋರಿಸಿ “ಧನಿ’ಗೆ ಅಂದರೆ ಮನೆ ಯಜಮಾನನಿಗೆ ಹಾಲಿನ ಊಟ ಕೊಡುತ್ತಾ ಬಹುಕಾಲ ಹಟ್ಟಿಯಲ್ಲಿರು.. ಎನ್ನುವ ಕ್ರಮ ಒಂದು. ದೀಪ(ತುಡಾರ್‌) ಮಗ.. ದೀಪ. ಕಲ್ಲಿನ ಎಡೆಯಿಂದ ಹರಿಯುವ ನೀರು ಕುಡಿ, ಮುಳ್ಳಿನ ಗಿಡದ ಅಡಿಯಲ್ಲಿ ಬೆಳೆದ ಹುಲ್ಲು ಮೇದು, ಹೊಟ್ಟೆ ತುಂಬ ಮೇದು, ಹಟ್ಟಿ ತುಂಬ ಗುಂಪಾಗಿ ಕೂಡು ಎಂದು ದೀಪಾವಳಿಯ ದೀಪ ತೋರಿಸುವ ದನಕರು, ಕೋಣ, ಎತ್ತುಗಳನ್ನು ಮನೆಯ ಮಕ್ಕಳನ್ನು ಸಂಬೋಧಿಸುವಂತೆ  ಮಗ… ಎಂದೇ ಕರೆಯುತ್ತಾ ದೀಪ ತೋರಿಸುವ ಪೂರ್ವ ಸಂಪ್ರದಾಯ. ಇದು ಜನಪದರ ಗೋ ಮತ್ತು ಕೋಣ-ಎತ್ತುಗಳ ಪೂಜೆ.

“ಗಾವೋವಿಶ್ವಸ್ಯ ಮಾತರ’. “ಸರ್ವೇ ದೇವಾಃ ಸ್ಥಿತಾ ದೇಹೇ’ ಮುಂತಾದ ಕಲ್ಪನೆಯೊಂದಿಗೆ ವೈದಿಕರು ದೀಪಾವಳಿಯ ಮರುದಿನ ಗೋಪೂಜೆ ಯನ್ನು ನೆರವೇರಿಸುತ್ತಾರೆ. ಇತ್ತೀಚೆಗೆ ಇದೇ ಪದ್ಧತಿ ಜನಪ್ರಿಯವಾಗುತ್ತಿದೆ.

ಗೋ, ಗವ್ಯಗಳು ಪ್ರಧಾನವಾಗಿ ವೈದಿಕದ ಆಚ ರಣೆ  ಗಳಲ್ಲಿ ಉಪಯೋಗವಾಗುತ್ತದೆ. ಗೋದಾನ ಶ್ರೇಷ್ಠ ವಾದುದು. ನಾಡಿನ ಗೋರಕ್ಷಣಾರ್ಥ ಹೋರಾಡಿದ ವೀರರಿಗಾಗಿ ವೀರ ಗಲ್ಲು ಗಳನ್ನು ಅರಸರು ಹಾಕಿಸು ತ್ತಿದ್ದರು. ಒಪ್ಪಂದ -ದಾನ ಶಾಸನಗಳಲ್ಲಿ “ದಾನವನ್ನು ಉಪೇ ಕ್ಷಿಸಿ ದರೆ, ಒಪ್ಪಂದವನ್ನು ಮುರಿದರೆ ಕಾಶಿ ಕ್ಷೇತ್ರದಲ್ಲಿ ಕಪಿಲೆಯನ್ನು ಕೊಂದ ದೋಷ ಬರಲಿ’. ಎಂಬ ಶಾಪಾಶಯಗಳಿವೆ. ಹೀಗೆ ಗೋ ಬಹುಮಾನ್ಯವಾಗಿತ್ತು, ಪೂಜಾರ್ಹವಾಗಿತ್ತು.

ಕೆ.ಎಲ್‌. ಕುಂಡಂತಾಯ

Advertisement

Udayavani is now on Telegram. Click here to join our channel and stay updated with the latest news.

Next