ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿಗೆ ಎಲ್ಲೆಡೆ ಸಂಭ್ರಮ-ಸಡಗರ ಮನೆ ಮಾಡಿದೆ. ನಗರದ ಮಾರುಕಟ್ಟೆಗಳು ಜನರಿಂದ ತುಂಬಿ ತುಳುಕುತ್ತಿವೆ.ಕೋವಿಡ್-19ನಿಂದ ಕಳೆ ಗುಂದಿದ್ದ ಮಾರುಕಟ್ಟೆ, ವ್ಯಾಪಾರ-ವಹಿವಾಟು ಇದೀಗ ಹಬ್ಬದ ಸಂಭ್ರಮದಲ್ಲಿ ಚುರುಕು ಪಡೆದುಕೊಳ್ಳುತ್ತಿವೆ. ಪ್ರಮುಖ ಮಾರುಕಟ್ಟೆಗಳಾದ ದುರ್ಗದ ಬಯಲು, ಮಹಾತ್ಮಾ ಗಾಂಧಿ ಮಾರುಕಟ್ಟೆ, ಜನತಾ ಬಜಾರ, ಹಳೇಹುಬ್ಬಳ್ಳಿ ಮಾರುಕಟ್ಟೆ, ಗೋಕುಲ ರಸ್ತೆ, ವಿಶ್ವೇಶ್ವರನಗರ, ಕೇಶ್ವಾಪುರ ಸೇರಿದಂತೆ ಎಲ್ಲೆಡೆ ಖರೀದಿ ಜೋರಾಗಿಯೇ ನಡೆದಿದೆ.
ಹಬ್ಬಕ್ಕೆ ಬೇಕಾಗುವ ಹಣತೆ, ಹೂವು, ಅಲಂಕಾರಿಕ ವಸ್ತುಗಳು, ತಳಿರು-ತೋರಣ, ಆಕಾಶಬುಟ್ಟಿ, ಹಣ್ಣುಗಳ ಖರೀದಿಯಲ್ಲಿ ಜನರು ತಲ್ಲೀನರಾಗಿರುವುದು ಕಂಡುಬಂದಿತು.
ಕೋವಿಡ್ ಮರೆತ ಜನ: ಲಾಕ್‌ಡೌನ್ ಸಂಪೂರ್ಣ ಸಡಿಲಿಕೆ ನಂತರ ಅದ್ಧೂರಿ ಹಬ್ಬದ ಆಚರಣೆಯಲ್ಲಿ ತೊಡಗಿರುವ ಜನರು, ಕೋವಿಡ್ ವೈರಸ್ ಇತ್ತು ಎನ್ನುವುದನ್ನು ಸಹ ಮರೆತಿದ್ದಾರೆ. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಜನ-ಜಂಗುಳಿ. ಸಾಮಾಜಿಕ ಅಂತರವಿಲ್ಲ, ಮುಖಕ್ಕೆ ಮಾಸ್ಕ್ ಇಲ್ಲ, ಸ್ಯಾನಿಟೈಸರ್ ಬಳಕೆ ಕೆಲವೇ ಮಳಿಗೆಗಳಲ್ಲಿ ಮಾತ್ರ ಕಂಡು ಬರುತ್ತಿದೆ. ಹಬ್ಬದ ಸಂದರ್ಭದಲ್ಲಿ ಕೋವಿಡ್-19 ಸೋಂಕು ಕುರಿತು ಮೈಮರೆತರೆ ಎರಡನೇ ಹಂತದ ಹಾವಳಿಗೆ ಆಹ್ವಾನ ನೀಡಿದಂತೆ ಎಂಬ ಸರಕಾರ ಹಾಗೂ ಆರೋಗ್ಯ ಇಲಾಖೆ ಎಚ್ಚರಿಕೆ ಅರ್ಥ ಕಳೆದು ಕೊಂಡಂತೆ ಭಾಸವಾಗುತ್ತಿದೆ.
ಹೆಚ್ಚಿದ ಸಂಚಾರ ದಟ್ಟಣೆ : ದೀಪಾವಳಿ ಹಬ್ಬದ ನಿಮಿತ್ತ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಏಕ ಮುಖ ಸಂಚಾರ ಮಾಡಿದ್ದು, ರಸ್ತೆಯಲ್ಲಿಯೇ ವಾಹನಗಳ ನಿಲುಗಡೆ ಮಾಡಲಾಗಿತ್ತು. ಇದಲ್ಲದೇ ಕಿತ್ತೂರು ಚನ್ನಮ್ಮ ವೃತ್ತದ ಬಳಿ ಎಲ್ಲೆಂದರಲ್ಲಿ ಕಾರು ನಿಲುಗಡೆ ಮಾಡಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಕಂಡು ಬಂದಿತು. ಇನ್ನು ದಾಜೀಬಾನ ಪೇಟೆ, ದುರ್ಗದ ಬಯಲು, ಕೊಪ್ಪಿಕರ ರಸ್ತೆ, ಶಹಾ ಬಜಾರ, ಮರಾಠಾಗಲ್ಲಿ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿತ್ತು
ಬೆಲೆ ಏರಿಕೆಯ ಬಿಸಿ : ಎಲ್ಲೆಡೆ ಬೆಲೆ ಏರಿಕೆ ಬಿಸಿ ಕಾಡುತ್ತಿದೆ. ಹೂವಿನಿಂದ ಹಿಡಿದು ಹಣ್ಣು-ಅಲಂಕಾರಿಕ ವಸ್ತುಗಳು ಸೇರಿದಂತೆ ಎಲ್ಲದರ ದರದಲ್ಲಿ ಏರಿಕೆ ಕಂಡಿದ್ದು ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿದೆ. ಒಂದು ಮಾರು ಸೇವಂತಿಗೆ ಹೂವಿಗೆ 50ರಿಂದ 80ರೂ,. ಒಂದು ಡಜನ್ ಬಾಳೆಹಣ್ಣಿಗೆ 40ರಿಂದ 60 ರೂ., ಸೇಬು ಕೆಜಿಗೆ 120ರಿಂದ 150, ಐದು ಕಬ್ಬಿಗೆ 100ರಿಂದ 130 ರೂ., ಬಾಳೆಕಂಬ ಜೋಡಿಗೆ 50 ರೂ., ಇನ್ನು ಹೂವಿನ ದರ ಕೆಜಿಯಲ್ಲಿ ಸೇವಂತಿಗೆ 350 ರಿಂದ 400, ಚೆಂಡು ಹೂ 160ರಿಂದ 200 ರೂ., ಸುಂಗಧರಾಜ 600ರೂ.ಗೆ ಮಾರಾಟವಾಗುತ್ತಿರುವುದು ಕಂಡು ಬಂತು.