Advertisement

ಬೆಳಕಿನ ಹಬ್ಬದ ಸಂಭ್ರಮಕ್ಕೆ ಗೂಡುದೀಪ, ಹಣತೆಗಳ ತೋರಣ

08:29 PM Oct 25, 2019 | mahesh |

ಬೆಳ್ತಂಗಡಿ: ದೀಪಾವಳಿ ಸಡಗರ ಹಂಚಿಕೊಳ್ಳುವಲ್ಲಿ ಅಂಗಡಿ ಮುಂಗಟ್ಟುಗಳು ಸಜ್ಜಾಗಿವೆ. ತಾಲೂಕಿನ ಜನತೆಯೂ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ತಯಾರಿ ನಡೆಸಿದ್ದಾರೆ. ಆಲಂಕಾರಿಕ ವಸ್ತುಗಳನ್ನು ಬೆಳ್ತಂಗಡಿ ಮುಖ್ಯ ರಸ್ತೆಯ ಅಂಗಡಿ ಮುಂಗಟ್ಟುಗಳು ವಾರದಿಂದಲೇ ಸಜ್ಜುಗೊಳಿಸಿವೆ. ಹಬ್ಬದ ನಿಮಿತ್ತ ಬೆಳ್ತಂಗಡಿ, ಧರ್ಮಸ್ಥಳ, ಉಜಿರೆ, ಮಡಂತ್ಯಾರು, ವೇಣೂರು ಸಹಿತ ಪ್ರಮುಖ ಮಾರುಕಟ್ಟೆ, ರಸ್ತೆ ಸಮೀಪ ಬಜಾರ್‌ಗಳಲ್ಲಿ ಹಣತೆ, ಆಕರ್ಷಕ ಗೂಡುದೀಪ, ಪಟಾಕಿ, ಹೂವು, ಹಣ್ಣು, ತರಕಾರಿ ಮತ್ತಿತರ ಸಾಮಗ್ರಿಗಳು ಗ್ರಾಹಕರ ಆಯ್ಕೆಗನುಗುಣವಾಗಿ ಸಿದ್ಧವಾಗಿವೆ.

Advertisement

ಬಟ್ಟೆ, ಕಾಗದದ ಗೂಡುದೀಪ
ವಿವಿಧ ಬಗೆಗಳ ಗೂಡುದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅಕ್ಕಿಮುಡಿ ಗಾತ್ರದ ಗೂಡುದೀಪ, ಡೈಮಂಡ್‌ ಶೇಪ್‌, ಬಕೆಟ್‌ ಶೇಪ್‌, ವಾಸ್ತು ಗೂಡುದೀಪ, ಯಜ್ಞದೀಪ, ತಿರುಗುದೀಪ, ಪ್ರಭಾವಳಿ, ಉಲ್ಲನ್‌ ನೂಲಿನಿಂದ ತಯಾರಿಸಿದ ಮತ್ತಿತರ 20 ರೂ.ನಿಂದ 600 ರೂ. ವರೆಗಿನ ಮನಮೋಹಕ ಗೂಡುದೀಪಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಜತೆಗೆ ವಿವಿಧ ಮಿಂಚುಳ್ಳಿ ಲೈಟಿಂಗ್‌ ಮಾಲೆ, ಕ್ಯಾಂಡಲ್‌, ಆಲಂಕಾರಿಕ ದೀಪಗಳು ಮಾರುಕಟ್ಟೆಯಲ್ಲಿವೆ.

ಎಲ್ಲೆಡೆ ಆಫರ್‌ಗಳ ಅಬ್ಬರ
ಮಾರಾಟ ಮಳಿಗೆಗಳಲ್ಲಿ ಆಫರ್‌ಗಳ ಅಬ್ಬರ ಜೋರಾಗಿದೆ. ಶೇ. 10 ರಿಯಾಯಿತಿ, ಒಂದು ಖರೀದಿಸಿದರೆ ಮತ್ತೂಂದು ಉಚಿತ. ಹೀಗೆ ವಿವಿಧ ಆಫರ್‌ಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.

ಅಂಗಡಿ ಪೂಜೆಗೆ ತಯಾರಿ
ಅಂಗಡಿ- ಮುಂಗಟ್ಟುಗಳನ್ನು ಪೂಜೆಗಾಗಿ ಶುಚಿಗೊಳಿಸಿ ಹೂವುಗಳ ಅಲಂಕಾರಕ್ಕೆ ಸಿದ್ಧಗೊಳಿಸಲಾಗುತ್ತಿದೆ. ಹೀಗಾಗಿ ಹೂ ಮಾರಾಟವೂ ಜೋರಾಗಿದೆ. ಸೇವಂತಿಗೆ, ಜಾಜಿ, ಮಲ್ಲಿಗೆಗೆ ಬೇಡಿಕೆ ಹೆಚ್ಚಾಗಿದೆ. ಮಾರಿಗೆ 50ರಿಂದ 100 ರೂ.ವರೆಗೆ ವಿವಿಧ ಹೂಗಳು ಮಾರುಕಟ್ಟೆಯಲ್ಲಿವೆ.

ಚಿನ್ನಾಭರಣ ಖರೀದಿ ಜೋರು
ಹಬ್ಬದ ತಯಾರಿಯಲ್ಲಿ ಮಗ್ನ ರಾಗಿರುವ ಜನರು ಹೊಸ ಟಿವಿ, ಕಾರು ಸಹಿತ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಮಹಿಳೆಯರು ಚಿನ್ನ, ಬೆಳ್ಳಿಯ ಆಭರಣ ಖರೀದಿಯಲ್ಲಿ ನಿರತರಾಗಿದ್ದಾರೆ.

Advertisement

ಪಾರಂಪರಿಕ ಹಣತೆ
ಆಧುನಿಕ ಕಾಲದ ಭರಾಟೆಯ ನಡುವೆಯೂ ಪಾರಂಪರಿಕ ಮಣ್ಣಿನ ಹಣತೆಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಸಾಂಪ್ರದಾಯಿಕವಾಗಿ ಕುಂಬಾರರು ಕೈಯಿಂದಲೇ ನಿರ್ಮಿಸಿದ ಹಣತೆಗಳು ಪ್ರಾಮುಖ್ಯತೆ ಪಡೆದಿವೆ. ಹೆಂಚಿನ ಮಣ್ಣು, ಪಿಂಗಾಣಿ ಹಣತೆಗಳು ಅತ್ಯಾಕರ್ಷಕವಾಗಿವೆ. ಮಣ್ಣಿನ ಹಣತೆಗೆ 3ರಿಂದ 4 ರೂ., ಪಿಂಗಾಣಿ ಹಣತೆಗೆ 4ರಿಂದ 5 ರೂ.ಗಳಿವೆ. 1 ಡಜನ್‌ ಹಣತೆ ಯನ್ನು 30 ರೂ.ನಿಂದ 50 ರೂ.ಗೆ ಮಾರಾಟ ಮಾಡಲಾಗುತ್ತಿದೆ.

 ಗ್ರಾಹಕರ ಉತ್ತಮ ಸ್ಪಂದನೆ ಗ್ರಾಹಕರ ಅಭಿರುಚಿ ಪ್ರತಿ ವರ್ಷ ಬದಲಾಗುತ್ತಿರುತ್ತದೆ. ದೀಪಾವಳಿಗೆ ವಿವಿಧ ಬಗೆಯ ಗೂಡುದೀಪಗಳನ್ನು ತರಿಸುತ್ತೇವೆ. ಈ ಬಾರಿಯೂ ಗ್ರಾಹಕರ ಸ್ಪಂದನೆ ಉತ್ತಮವಾಗಿದೆ.
 - ಶಶಿಕಲಾ ಬಿ.ಎಲ್‌., ಮಳಿಗೆ ಮಾಲಕಿ

 ಬಹುವಿಧ ಕಾಗದದ ತುಳಸಿಕಟ್ಟೆ ಗೂಡು ದೀಪದಿಂದ ಇಂದಿನ ಬಹುವಿಧದ‌ ಗೂಡುದೀಪದ ವರೆಗೂ ಮಾರಾಟವಾಗುತ್ತಿದೆ. ಜನರ ಅಭಿರುಚಿಗೆ ತಕ್ಕಂತೆ ತರಿಸುತ್ತೇವೆ.
– ಗೋಪಾಲಕೃಷ್ಣ ಭಟ್‌, ಮಳಿಗೆ ಮಾಲಕ

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next