ಬೆಂಗಳುರು: ಕೋವಿಡ್ ಹಿನ್ನೆಲೆಯಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದಕ್ಕೆ ಅನುಮತಿ ನೀಡುವ ಅಥವಾ ನಿಷೇಧಿಸುವ ಸಂಬಂಧ ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಪಟಾಕಿ ವಿಚಾರದಲ್ಲಿ ಕೆಲವು ರಾಜ್ಯಗಳಲ್ಲಿ ಈ ಕುರಿತು ಕೈಗೊಂಡಿರುವ ಕ್ರಮ ಗಮನದಲ್ಲಿಟ್ಟುಕೊಂಡು ಇಲ್ಲಿಯೂ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ದೀಪಾವಳಿ ಆಚರಣೆಗೆ ಸಂಬಂಧಿಸಿದಂತೆ ವರದಿ ನೀಡಲು ತಜ್ಞರಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು. ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಮಾಲಿನ್ಯ ಅದರಿಂದ ಕೊರೊನಾ ಸೋಂಕಿತರ ಮೇಲೆ ಆಗುವ ಪರಿಣಾಮ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ತಿಳಿಸಲಾಗಿದೆ ಎಂದು ತಿಳಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಹಬ್ಬಗಳನ್ನು ಸರಳ ಹಾಗೂ ಸಂಪ್ರದಾಯವಾಗಿ ಆಚರಿಸಬೇಕು. ನಮಗೆ ಜನರ ಜೀವ ಹಾಗೂ ಸುರಕ್ಷತೆ ಮುಖ್ಯ ಎಂದು ಹೇಳಿದರು.
ಇದನ್ನೂ ಓದಿ:ನಿವೃತ್ತ ಸೇನಾಧಿಕಾರಿ ಮೇಲೆ ಕಾಡಾನೆ ದಾಳಿ : ಕರ್ನಲ್ ಮುತ್ತಣ್ಣ ಮೈಸೂರು ಆಸ್ಪತ್ರೆಗೆ ದಾಖಲು
ಶಾಲೆಗಳ ಆರಂಭ ಸಂಬಂಧ ಆರೋಗ್ಯ ಇಲಾಖೆಯ ಅಭಿಪ್ರಾಯ ಸಹ ಕೇಳಲಾಗಿದೆ. ಶಿಕ್ಷಣ ಸಚಿವರ ಜತೆ ಈ ಕುರಿತು ಸಮಾಲೋಚನೆ ನಡೆಸಲಾಗುವುದು. ಎರಡೂ ಇಲಾಖೆ ಅಧಿಕಾರಿಗಳ ಸಭೆಯೂ ನಡೆಯಲಿದೆ ಎಂದು ತಿಳಿಸಿದರು.