Advertisement

ಮೀರಾರೋಡ್‌ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿ: ದೀಪಾವಳಿ ಆಚರಣೆ

12:13 PM Nov 08, 2021 | Team Udayavani |

ಮೀರಾರೋಡ್‌: ಮೀರಾರೋಡ್‌ ಪೂರ್ವದ ಗೀತಾ ನಗರದಲ್ಲಿರುವ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ  ಪಲಿಮಾರು ಮಠದ ಹಿರಿಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರ ಇಚ್ಛೆ ಹಾಗೂ ಸಂಕಲ್ಪದಂತೆ ಪಲಿಮಾರು ಮಠದ ಟ್ರಸ್ಟಿ ಸಚ್ಚಿದಾನಂದ ರಾವ್‌ ನೇತೃತ್ವದಲ್ಲಿ ನ. 4ರಂದು ದೀಪಾಳಿ ಪ್ರಯುಕ್ತ ವಿವಿಧ ಪೂಜಾ ಕಾರ್ಯಗಳು ಜರಗಿದವು.

Advertisement

ಪಲಿಮಾರು ಮಠದ ಟ್ರಸ್ಟಿ ಹಾಗೂ ಪ್ರಬಂಧಕ ವಾಸುದೇವ ಎಸ್‌. ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ ಸಪರಿವಾರ ಸಹಿತ ಶ್ರೀನಿವಾಸ ದೇವರಿಗೆ ತೈಲಾಭ್ಯಂಗ ಸ್ನಾನ, ಭಕ್ತರಿಗೆ ತೈಲ ವಿತರಣೆ ನೆರವೇರಿತು. ಸಂಜೆ ಶ್ರೀ ಬಾಲಾಜಿ ಸನ್ನಿಧಿಯ ಮಹಿಳಾ ಸದಸ್ಯೆಯರಿಂದ ಭಜನೆ, ಮಠದ ಆವರಣದಲ್ಲಿರುವ ತುಳಸಿ ಕಟ್ಟೆಯಲ್ಲಿ  ಬಲೀಂದ್ರನ ಸ್ಮರಣೆಗೈದು ಪೂಜೆ ಸಲ್ಲಿಸಿದರು. ಬಳಿಕ ಧನಲಕ್ಷ್ಮೀ ಪೂಜೆ, ಆಕಾಶ ದೀಪ, ಪರಿವಾರ ದೇವರಿಗೆ ಶ್ರೀನಿವಾಸ ದೇವರಿಗೆ ಪ್ರಸನ್ನ ಪೂಜೆ ಆಯೋಜಿಸಲಾಗಿತ್ತು.

ವಾಸುದೇವ ಎಸ್‌. ಉಪಾಧ್ಯಾಯ ಅವರು ಉತ್ಸವದ ಬಗ್ಗೆ ವಿವರಿಸಿ, ತುಳುನಾಡನ್ನು ಆಳ್ವಿಕೆ ಮಾಡಿದ ಬಲಿ ಚಕ್ರವರ್ತಿ ವಿಷ್ಣುವಿನ ಪರಮ ಭಕ್ತ. ಮಹಾದೈತ್ಯ ಬಲೀಂದ್ರ ಸಕಲ ವೇದ ಶಾಸ್ತ್ರ ಪಾರಂಗತ. ಬೇಡಿದ್ದನ್ನು ದಯಪಾಲಿ ಸುವ ಮಹಾದಾನಿಯಾಗಿದ್ದ. ಕೃಷಿಯ ಅಧಿಪತಿಯಾದ ಆತನು ದೀಪಾವಳಿಯ ಪರ್ವ ಕಾಲದಲ್ಲಿ  ಭೂಮಿಗೆ ಬರುತ್ತಾರೆ ಎಂಬ ಪ್ರತೀತಿ ಇದೆ. ಆದ್ದರಿಂದ ತುಳಸಿ ಕಟ್ಟೆಯಲ್ಲಿ  ವಿವಿಧ ಪರಿಕರಗಳನ್ನಿಟ್ಟು ಸ್ಮರಿಸಲಾಗುತ್ತದೆ ಎಂದು ಹೇಳಿದ ಅವರು, ನ. 16ರ ಉತ್ಥಾನ ದ್ವಾದಶಿಯವರೆಗೆ ಪ್ರತೀದಿನ ರಾತ್ರಿ 7.30ರಿಂದ 8.30ರ ವರೆಗೆ ತುಳಸಿ ಪೂಜೆ ಬಳಿಕ ತುಳಸಿ ಸಂಕೀರ್ತನೆ ಮತ್ತು ಡಿ. 4ರ ವರೆಗೆ ಕಾರ್ತಿಕ ದೀಪೋತ್ಸವ ನಡೆಯಲಿದೆ ಎಂದರು.

ಗೋಪಾಲ ಭಟ್‌, ಗಣೇಶ್‌ ಭಟ್‌, ಪ್ರಶಾಂತ್‌ ಭಟ್‌, ಕೃಷ್ಣಮೂರ್ತಿ ಉಪಾಧ್ಯಾಯ, ಅನಂತರಾಮ ಭಟ್‌, ಕರಮಚಂದ ಗೌಡ ಸಹಕರಿಸಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

-ಚಿತ್ರ-ವರದಿ: ರಮೇಶ್‌ ಅಮೀನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next