Advertisement

Deepavali 2023: ಬೆಳಕಿನ ಹಬ್ಬ…ನೀರು ತುಂಬುವ ಹಬ್ಬ

06:15 PM Nov 13, 2023 | Team Udayavani |

ನೀರು ತುಂಬುವ ಹಬ್ಬದೊಂದಿಗೆ ದೀಪಾವಳಿ ಆರಂಭಗೊಳ್ಳಲಿದೆ. ಅಂದು ಮನೆಯ ನೀರೆಯರೆಲ್ಲರಿಗೂ ನೀರು ತರುವ ಸಂಭ್ರಮ. ಸ್ನಾನದ ಮನೆ ಅಂದು ಸುಂದರವಾಗಿ ಸಜ್ಜುಗೊಳ್ಳುತ್ತದೆ. ನೀರನ್ನು ಕಾಯಿಸುವ, ತುಂಬಿಸುವ, ಹೊಯ್ಯುವ ಪಾತ್ರೆಗಳೆಲ್ಲ ಫಳ ಫಳನೆ ಹೊಳೆಯುತ್ತವೆ. ಪಾತ್ರೆಗಳೆಲ್ಲ ಅಂದು ಸುಣ್ಣ, ಕೆಮ್ಮಣ್ಣುಗಳ ಲೇಪನ, ಹೂಮಾಲೆಗಳಿಂದ ಅಲಂಕಾರಗೊಳ್ಳುತ್ತವೆ. ನಂತರ ದೀಪ ನೈವೇದ್ಯಗಳಿಂದ ಪೂಜೆ ಮಾಡುತ್ತಾರೆ.

Advertisement

ನಮ್ಮ ದಿನ ನಿತ್ಯದ ಉಪಯೋಗಕ್ಕೆ ಬರುವ ವಸ್ತುಗಳು ಯಾವುದೇ ಇರಲಿ, ಅವುಗಳಲ್ಲಿ ಗೌರವ ಮನ್ನಣೆ ಸೂಚಿಸುವುದು ಹಾಗೂ
ಎಲ್ಲವೂ ಸುಂದರವಾಗಿ, ಕಲಾತ್ಮಕವಾಗಿ ಇರಬೇಕೆಂಬ ಸೌಂದರ್ಯ ಪ್ರಜ್ಞೆಯೂ ಈ ಆಚರಣೆ ಹಿಂದಿದೆ.

ನರಕ ಚತುರ್ದಶಿಯಂದು ಆರತಿ ಮಾಡಿಸಿಕೊಳ್ಳುವ ಪದ್ಧತಿ: ನರಕ ಚತುರ್ದಶಿಯಂದು ಅಭ್ಯಂಜನ ಸ್ನಾನ ಮಾಡಿ ಸಹೋದರಿಯರಿಂದ ಆರತಿ ಮಾಡಿಸಿಕೊಳ್ಳುವ ಪದ್ಧತಿ ಮೊದಲಿನಿಂದಲೂ ನಡೆದು ಬಂದ ಸಂಪ್ರದಾಯ.

ದೀಪಾವಳಿಯ ಪ್ರಮುಖ ಆಕರ್ಷಣೆಯೇ ಈ ಅಭ್ಯಂಜನ ಸ್ನಾನ. ಈ ಆಚರಣೆಗೊಂದು ಪೌರಾಣಿಕ ಹಿನ್ನೆಲೆಯಿದೆ. ಭೂದೇವಿಯ
ಮಗನಾದ ನರಕಾಸುರ ಜರಾಸಂಧನ ಪ್ರೀತಿಗಾಗಿ 16 ಸಾವಿರ ಸುಂದರಿಯರನ್ನು ತನ್ನ ಸೆರೆಯಲ್ಲಿ ಬಂಧಿಸಿ ಇಟ್ಟಿದ್ದು ಮಾತ್ರವಲ್ಲ
ಲೋಕ ಕಂಟಕನಾಗಿದ್ದ. ಆತ ಅದಿತಿಯ ಕುಂಡಲ, ಇಂದ್ರನ ಶ್ವೇತತ್ಛತ್ರವನ್ನು ಅಪಹರಿಸಿದ್ದ. ತದನಂತರ ಶ್ರೀ ಕೃಷ್ಣನು
ನರಕಾಸುರನೊಂದಿಗೆ ಭೀಕರ ಯುದ್ಧ ನಡೆಸಿ ಮಧ್ಯರಾತ್ರಿ ಹೊತ್ತಿಗೆ ಸಂಹರಿಸಿದ. ಬೆಳಗಿನ ಜಾವ ಮನೆಗೆ ಬಂದು ಸುಖವಾಗಿ
ಅಭ್ಯಂಜನ ಸ್ನಾನ ಮಾಡಿದ. ಶ್ರೀಕೃಷ್ಣನ ದೆಸೆಯಿಂದ 16 ಸಾವಿರ ಸುಂದರಿಯರು ಸೆರೆವಾಸದಿಂದ ಬಿಡುಗಡೆ ಹೊಂದಿದರು.

ಅವರಿಗೆ ಎಲ್ಲಿಲ್ಲದ ಸಂತಸ. ಅವರೆಲ್ಲರೂ ಕೃಷ್ಣನಿಗೆ ಕೃತಜ್ಞತೆ ಹೇಳಿ ಭಕ್ತಿಯಿಂದ ಆರತಿ ಬೆಳಗಿ ಪೂಜಿಸಿದರು. ನರಕಾಸುರನ ತಾಯಿ ಭೂದೇವಿ ಈ ದಿನವು ನನ್ನ ಮಗನ ಹೆಸರಿನಿಂದ ಕರೆಯುವಂತಾಗಲಿ, ಈ ದಿನ ಎಲ್ಲರೂ ನಿನ್ನಂತೆ ಅಭ್ಯಂಜನ ಆಚರಿಸುವಂತಾಗಲಿ ಎಂದು ಕೃಷ್ಣನನ್ನು ಬೇಡಿದಳು. ಶ್ರೀ ಕೃಷ್ಣ ತಥಾಸ್ತು ಎಂದು ವರ ನೀಡಿದ. ಅಂದಿನಿಂದ
ಸಾಂಪ್ರದಾಯಿಕವಾಗಿ ನರಕ ಚತುರ್ದಶಿ ಆಚರಿಸಲ್ಪಡುತ್ತದೆ. ನರಕ ಚತುರ್ದಶಿಯಂದು ಚಿಕ್ಕ ಮಕ್ಕಳು ಹಾಗೂ ದೊಡ್ಡವರು ಅಭ್ಯಂಜನ ಸ್ನಾನ ಮಾಡಿ ಹೊಸ ವಸ್ತ್ರ ಧರಿಸಿ ಪಟಾಕಿ ಸಿಡಿಸಿ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ.

Advertisement

ದೀಪಾವಳಿ ಕೊನೆ ದಿನ ಯಮ ದ್ವಿತಿಯಾ: ಸುಜ್ಞಾನದ ಸಂಕೇತ ದೀಪಾವಳಿಯ ಕೊನೆಯ ದಿನವೇ ಯಮ ದ್ವಿತೀಯಾ. ಕ್ಷಣ ಕಾಲವೂ ಬಿಡುವೇ ಇಲ್ಲದ ಯಮರಾಜ ಕಾರ್ತಿಕ ಶುದ್ಧ ಬಿದಿಗೆಯ ದಿನ ಹೇಗೋ ಅವಕಾಶ ಮಾಡಿಕೊಂಡು ತನ್ನ ತಂಗಿ ಯಮನೆಯ ಮನೆಗೆ ಹೋದನಂತೆ. ಅಪರೂಪಕ್ಕೆ ಬಂದ ಅಣ್ಣ ಯಮನಿಗೆ, ತಂಗಿ ಯಮನೆಯು ಬಗೆ ಬಗೆಯ ಭಕ್ಷ
ಭೋಜನಗಳನ್ನು ಮಾಡಿ ಪ್ರೀತಿಯಿಂದ ಬಡಿಸಿದಳಂತೆ. ಊಟ ಮಾಡಿ ಸಂತುಷ್ಟನಾದ ಯಮ ತಂಗಿಯ ಕೋರಿಕೆಯಂತೆ ಈ ದಿನ ಸಹೋದರಿಯರ ಮನೆಗೆ ಹೋಗಿ ಊಟ ಮಾಡಿದವರಿಗೆ ನಾನು ದೀರ್ಘಾಯುಷ್ಯ ದಯಪಾಲಿಸುತ್ತೇನೆಂದು ವರ ಕೊಟ್ಟನಂತೆ. ಸಹೋದರಿಯರಿಗೆ ಅಣ್ಣ-ತಮ್ಮಂದಿರು ಒಲವಿನಿಂದ ಉಡುಗೊರೆ ಕೊಡುವ ದಿನ ಇದಾಗಿದೆ. ಮದುವೆಯಾಗಿ ಹೋದ ಹೆಣ್ಣು ಮಕ್ಕಳನ್ನು ಮೊದಲ ಬಾರಿಗೆ ಅಳಿಯನ ಸಮೇತ ಕರೆಸಿಕೊಂಡು ಅಳಿಯನಿಗೆ ಉಡುಗೊರೆ ಬಂಗಾರ ಕೊಡುವ ಆಚರಣೆ ಇತ್ತೀಚೆಗೆ ಬೆಳೆದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next