Advertisement

ದೀಪಕ್‌ ಅಂತ್ಯಕ್ರಿಯೆ: ಸಾವಿರಾರು ಮಂದಿ ಅಶ್ರುತರ್ಪಣ

05:55 AM Jan 05, 2018 | Team Udayavani |

ಮಂಗಳೂರು: ದುಷ್ಕರ್ಮಿಗಳಿಂದ ಗುರುವಾರ ಹತ್ಯೆಯಾದ ಹಿಂದೂ ಸಂಘಟನೆ ಕಾರ್ಯಕರ್ತ ದೀಪಕ್‌ ರಾವ್‌ ಅವರ ಅಂತಿಮ ಯಾತ್ರೆ ಹಾಗೂ ಅಂತ್ಯಕ್ರಿಯೆ ಗುರುವಾರ ಅಪಾರ ಸಂಖ್ಯೆಯ ಜನರು, ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಮುಖಂಡರ ಉಪಸ್ಥಿತಿಯಲ್ಲಿ ಕಾಟಿಪಳ್ಳದ ಜನತಾ ಕಾಲನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ನಡುವೆ ನೆರವೇರಿಸಲಾಯಿತು.

Advertisement

ಈ ಸಂದರ್ಭ ದೀಪಕ್‌ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಸೇರಿದ್ದ ಹಿಂದೂ ಕಾರ್ಯ ಕರ್ತರ ಆಕ್ರಂದನ ಮುಗಿಲು ಮುಟ್ಟಿತ್ತು.ಮೃತದೇಹವನ್ನು ಪೊಲೀಸರೇ ತಂದರು ದೀಪಕ್‌ ಮೃತದೇಹವನ್ನು ಮೆರವಣಿಗೆ ಮೂಲಕ ಕಾಟಿಪಳ್ಳಕ್ಕೆ ಕೊಂಡೊಯ್ಯುವುದೆಂದು ಹಿಂದೂ ಸಂಘಟನೆಗಳು ತೀರ್ಮಾನಿಸಿದ್ದವು. ಆ ಸಂದರ್ಭ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗವಾಗಬಾರದು  ಎಂದು ಸಂಬಂಧ ಪಟ್ಟವರು ಆಸ್ಪತ್ರೆಗೆ ಬರುವ ಮುನ್ನವೇ ಪೊಲೀಸರು ಎ.ಜೆ. ಆಸ್ಪತ್ರೆಯಿಂದ ರಹಸ್ಯವಾಗಿ ಶವವನ್ನು ಕಾಟಿಪಳ್ಳದ ನಿವಾಸಕ್ಕೆ ಸಾಗಿಸಿದರು.

ಪೊಲೀಸರ ಈ ರೀತಿಯ ಅನಿರೀಕ್ಷಿತ ನಿರ್ಧಾರವು ಹಿಂದೂಪರ ಸಂಘಟನೆ ಮುಖಂಡರು, ಕಾರ್ಯಕರ್ತರನ್ನು ಕೆರಳಿಸಿತು. ಈ ವಿಚಾರ ಸಾಕಷ್ಟು ವಿರೋಧ ಮತ್ತು ವಿವಾದಕ್ಕೂ ಕಾರಣವಾಯಿತು. ದೀಪಕ್‌ ನಿವಾಸದ ಎದುರು ಮೃತ ದೇಹವನ್ನು ಸ್ವೀಕರಿ ಸುವುದಕ್ಕೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ನಿರಾಕರಿಸಿದರು. ಮಾತ್ರವಲ್ಲದೆ ಮೃತದೇಹವನ್ನು ವಾಪಸ್‌ ಕೊಂಡೊಯ್ಯುವಂತೆ ಆಗ್ರಹಿಸಿದರು.

ಗ್ರಾಮಸ್ಥರ ಪಟ್ಟು
ಕುಟುಂಬಸ್ಥರಿಗೆ ಮಾಹಿತಿ ನೀಡದೆ ಮೃತ ದೇಹವನ್ನು ಪೊಲೀಸರೇ ಶವಾಗಾರದಿಂದ ಮನೆಗೆ ರಹಸ್ಯವಾಗಿ ಸಾಗಿಸಿದ್ದರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಮೃತದೇಹ ವನ್ನು ಸ್ವೀಕರಿಸಲು ನಿರಾಕರಿಸಿದರು. “ಶವವನ್ನು ವಾಪಸ್‌ ಕೊಂಡೊಯ್ಯಿರಿ. ಎ.ಜೆ. ಆಸ್ಪತ್ರೆಯಿಂದ ನಾವೇ ಶವವನ್ನು ಸ್ವೀಕರಿಸಿ ಮೆರವಣಿಗೆಯಲ್ಲಿ ತರುತ್ತೇವೆ’ ಎಂದು ಹೇಳಿ ಆ್ಯಂಬುಲೆನ್ಸ್‌ನಿಂದ ಶವ ಇಳಿಸಲು ನಿರಾಕರಿಸಿ ಪಟ್ಟು ಹಿಡಿದರು.

“ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಾವು ಮೆರವಣಿಗೆಗೆ ಅವಕಾಶ ನೀಡಿಲ್ಲ. ಹಾಗಾಗಿ ಈ ರೀತಿ ಮಾಡಬೇಕಾಯಿತು’ ಎಂದು ಎಡಿಜಿಪಿ ಕಮಲ್‌ ಪಂತ್‌, ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಡಿಸಿಪಿಗಳಾದ ಹನುಮಂತ ರಾಯ ಮತ್ತು ಉಮಾ ಪ್ರಶಾಂತ್‌ ಮತ್ತು ಇತರ ಪೊಲೀಸ್‌ ಅಧಿಕಾರಿಗಳು ಮನವೊಲಿಸಲು ಯತ್ನಿಸಿ ಪರಿಪರಿಯಾಗಿ ಮನವಿ ಮಾಡಿ ಕೊಂಡರೂ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪಟ್ಟು ಸಡಿಲಿಸಲಿಲ್ಲ. ಈತನ್ಮಧ್ಯೆ ಕೆಲವು ಜನ ಹಿಂದೂ ಸಂಘಟನೆಗಳ ನಾಯಕರು ಕೂಡ ಗ್ರಾಮಸ್ಥರ ಮನ ಒಲಿಸಲು ಯತ್ನಿಸಿದರು. ಆದರೆ ಅದಕ್ಕೂ ಗ್ರಾಮಸ್ಥರು ಸೊಪ್ಪು ಹಾಕಿರಲಿಲ್ಲ. 

Advertisement

ಬೆಳಗ್ಗೆ 8.45ರ ವೇಳೆಗೆ ಮೃತ ದೇಹವನ್ನು ಹೊತ್ತ ಆ್ಯಂಬುಲೆನ್ಸ್‌ ಮನೆ ಆವರಣಕ್ಕೆ ತಲುಪಿದ್ದು ಸುಮಾರು ಎರಡು ಗಂಟೆ ಕಾಲ ಗ್ರಾಮಸœರು ಮತ್ತು ಜಿಲ್ಲಾಡಳಿತದ ನಡುವೆ ಕಗ್ಗಂಟು ಮುಂದು ವರಿಯಿತು. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡುವಂತೆ ಕೆಲವರು ಆಗ್ರಹಿಸಿ ದರೆ ಇನ್ನೂ ಕೆಲವು ಮಂದಿ ಸ್ವತಃ ಗೃಹ ಸಚಿವ ರಾಮಲಿಂಗಾ ರೆಡ್ಡಿ ಇಲ್ಲಿಗೆ ಬರಬೇಕು; ದೀಪಕ್‌  ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸ ಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕ ದರ್ಶನ, ಅಶ್ರುತರ್ಪಣ
ಮೃತ ದೇಹವನ್ನು ಆ್ಯಂಬುಲೆನ್ಸ್‌ನಿಂದ ಇಳಿ ಸಿದ ಬಳಿಕ ಮನೆಯೊಳಗೆ ಕೊಂಡೊಯ್ದು ಅಂತ್ಯ  ಕ್ರಿಯೆಗೆ ಸಂಬಂಧಿಸಿದ ವಿಧಿ ವಿಧಾನ ಗಳನ್ನು ನೆರ ವೇರಿಸಲಾಯಿತು. ಅನಂತರ ಮೆರ ವಣಿಗೆ ಯಲ್ಲಿ ಜನತಾ ಕಾಲನಿಯಲ್ಲಿರುವ ರುದ್ರಭೂಮಿಗೆ ಸಾಗಿಸಿ ಅಂತ್ಯ ಕ್ರಿಯೆ ನಡೆಸಲಾಯಿತು.

ಎ.ಸಿ. ಆ್ಯಂಬುಲೆನ್ಸ್‌ಗೆ ಶವ ಸ್ಥಳಾಂತರ
ದೀಪಕ್‌ ರಾವ್‌ ಶವ ಸಾಗಿಸಲು ಕುಟುಂಬಸ್ಥರು ತಮ್ಮದೇ ಆದ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿದ್ದರು. ಆದರೆ ಪೊಲೀಸರು ತಮ್ಮದೇ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿ ಶವ ಸಾಗಿಸಿದ್ದರು. ಈ ಬಗ್ಗೆ ಮನೆ ಮಂದಿಗೆ ಆಕ್ರೋಶವಿತ್ತು. ಶವ ಸ್ವೀಕರಿಸುವ ಬಗೆಗಿನ ವಿವಾದ ಮುಂದುವರಿದಂತೆ ಸುಮಾರು 10.15ಕ್ಕೆ ಎ.ಜೆ. ಆಸ್ಪತ್ರೆಯಿಂದ ಎಸಿ ಸೌಲಭ್ಯ ವಿರುವ ಆ್ಯಂಬುಲೆನ್ಸ್‌ ಬಂದಿದ್ದು, ಶವವನ್ನು ಆಸ್ಪತ್ರೆಯ ವಾಹನದಿಂದ ಈ ಎಸಿ ಆ್ಯಂಬುಲೆನ್ಸ್‌ಗೆ ವರ್ಗಾಯಿಸಲಾಗಿತ್ತು.

ಇಂದೇ ಪರಿಹಾರ ವಿತರಣೆ 
ಜಿಲ್ಲಾಡಳಿತದಿಂದ 5 ಲಕ್ಷ ರೂ. ಪರಿಹಾರ ವನ್ನು ಇವತ್ತೇ ಸಂಜೆ ನಾನು ಮನೆಗೆ ಬಂದು ವಿತರಿಸುತ್ತೇನೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಜತೆ ಮಾತನಾಡಿ ಮುಂದಿನ ದಿನಗಳಲ್ಲಿ ನೀಡಲಾಗುವುದು. ಇನ್ನೂ ಹೆಚ್ಚುವರಿ ಪರಿಹಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ತಿಳಿಸಿದರು.

ತಾಯಿಯ ರೋದನ
ದೀಪಕ್‌ ಸಾವನ್ನಪ್ಪಿದ ವಿಷಯವನ್ನು ತಾಯಿ ಪ್ರೇಮಲತಾ ಅವರಿಗೆ ಬುಧವಾರ ತಿಳಿಸಿರಲಿಲ್ಲ. ಗುರುವಾರ ಬೆಳಗ್ಗೆ 6 ಗಂಟೆ ವೇಳೆಗೆ ಅವರಿಗೆ ವಿಷಯ ತಿಳಿಸಲಾಗಿತ್ತು. ಬುಧವಾರ ಸಂಜೆ ಮಗ ಬಾರದೆ ಇದ್ದಾಗ ಆತ ಆಸ್ಪತ್ರೆಯಲ್ಲಿದ್ದಾನೆ ಎಂದು ಮಾತ್ರ ತಿಳಿಸಲಾಗಿತ್ತು. ಮುಂಜಾನೆ ವಿಷಯ ತಿಳಿಯುತ್ತಿದ್ದಂತೆ ಪುತ್ರ ಶೋಕದಿಂದ ಪ್ರೇಮಲತಾ ರೋದಿಸುತ್ತಿರುವ ದೃಶ್ಯ ಎಲ್ಲರ ಮನ ಕಲಕುವಂತಿತ್ತು. ಆಕೆಯ ಜತೆ ಕುಟುಂಬದ ಇತರ ಸದಸ್ಯರೂ ರೋದಿಸುತ್ತಿದ್ದರು.

50 ಲಕ್ಷ  ರೂ. ಕೇಳಿದರೆ 5 ಲಕ್ಷ  ರೂ. ಕೊಡುತ್ತೀರಾ?
ಬೆಳಗ್ಗೆ 10.45ರ ವೇಳೆಗೆ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಮತ್ತು ಗ್ರಾಮಸ್ಥರ ಹಾಗೂ ಹಿಂದೂ ಸಂಘಟನೆಗಳ ನಾಯಕರ ಜತೆ ಮಾತುಕತೆ ನಡೆಸಿದರು ಹಾಗೂ ಮೃತ ದೀಪಕ್‌ ರಾವ್‌ ಕುಟುಂಬಕ್ಕೆ ಜಿಲ್ಲಾಡಳಿತದ ವತಿಯಿಂದ 5 ಲಕ್ಷ ರೂ. ಪರಿಹಾರವನ್ನು ಇವತ್ತೇ ನೀಡ ಲಾಗುವುದು ಎಂದರು.

ಆಗ ಪ್ರತಿಭಟನಕಾರರು “50 ಲಕ್ಷ ರೂ. ಪರಿಹಾರ ಕೇಳಿದರೆ 5 ಲಕ್ಷ ರೂ. ಕೊಡುತ್ತೀರಾ’ ಎಂದು ಆಕ್ರೋಶ ವ್ಯಕ್ತಪಡಿಸಿ 5 ಲಕ್ಷ ರೂ. ಪರಿಹಾರ ಸ್ವೀಕರಿಸಲು ನಿರಾಕರಿಸಿದರು. ಕಳ್ಳರು ಕೊಲೆಯಾದರೆ ಹೆಚ್ಚು ಪರಿಹಾರ ಕೊಡುತ್ತಾರೆ, ನಮಗೇಕಿಲ್ಲ ಎಂದು ಪ್ರಶ್ನಿಸಿ ನಮಗೆ ನ್ಯಾಯ ಬೇಕು ಎಂದು ಒತ್ತಾಯಿಸಿದರು.
 
ಸರಕಾರ ತತ್‌ಕ್ಷಣಕ್ಕೆ 5 ಲಕ್ಷ ರೂ. ಪರಿಹಾರ ಮಂಜೂರು ಮಾಡಿದೆ. ಮುಂದೆ ಹೆಚ್ಚುವರಿ ಪರಿಹಾರ ದೊರಕಿಸಲು ಪ್ರಯತ್ನಿಸುತ್ತೇವೆ. ದೀಪಕ್‌ ಹತ್ಯೆ ನಮಗೂ ಆಘಾತ ತಂದಿದೆ. ಅವರ ಮನೆ ಯವರಿಗೆ ಯಾವ ರೀತಿಯಲ್ಲಿ ಸಾಂತ್ವನ ಹೇಳ ಬೇಕು ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳು ಸೇರಿದ್ದ ಜನಸ್ತೋಮದ ಬಳಿ ತಿಳಿಸಿದರು. ಆದರೆ ಗ್ರಾಮಸ್ಥರು ತಮ್ಮ ಪಟ್ಟು ಸಡಿಲಿಸಿಲ್ಲ.

ಬಳಿಕ ಜಿಲ್ಲಾಧಿಕಾರಿಗಳು ಸರಕಾರದ ಜತೆ ಮಾತುಕತೆ ನಡೆಸಿ ಜಿಲ್ಲಾಡಳಿತದಿಂದ 5 ಲಕ್ಷ ರೂ. ಪರಿಹಾರದ ಹೊರತಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ 5 ಲಕ್ಷ ರೂ. ಸಹಿತ ಒಟ್ಟು 10 ಲಕ್ಷ ರೂ. ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು. ಅಲ್ಲದೆ ಗ್ರಾಮದಲ್ಲಿ ಶವಯಾತ್ರೆ ನಡೆಸಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುವುದಾಗಿ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ಆಯುಕ್ತರು ಪ್ರಕಟಿಸಿದರು. ಇದರಿಂದ ಗ್ರಾಮಸ್ಥರು ಮತ್ತು ಪೋಷಕರು ಪ್ರತಿಭಟನೆಯನ್ನು ಕೈಬಿಟ್ಟು ದೀಪಕ್‌ ರಾವ್‌ ಶವ ಸ್ವೀಕರಿಸಲು ಸಮ್ಮತಿಸಿದರು.

ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದಿದ್ದ  ಮಗ  ಬರಲೇ ಇಲ್ಲ
ಮಂಗಳೂರು: “
ನನ್ನ ಮಗ ದೀಪಕ್‌ ಮನೆಗೆ ಆಧಾರಸ್ತಂಭವಾಗಿದ್ದ. ಅವನೇ ಸರ್ವಸ್ವವಾಗಿದ್ದ. ಯಾರ ತಂಟೆಗೂ ಹೋಗದ ಅವನ ಮೇಲೆ ದುಷ್ಕರ್ಮಿಗಳ ದೃಷ್ಟಿ ಯಾಕಾದರೂ ಬಿತ್ತೋ? ಕೊಂದವರಿಗೆ ದೇವರೇ ಶಿಕ್ಷೆ ಕೊಡಲಿ. ನನ್ನ ಮಗನ ಕೊಲೆಯೇ ಅವರಿಗೆ ಕೊನೆಯಾಗಲಿ’ ಎಂದು ದೀಪಕ್‌ನ ತಾಯಿ ಪ್ರೇಮಲತಾ ಅಂತ್ಯಕ್ರಿಯೆ ಸಂದರ್ಭದಲ್ಲಿ ರೋದಿಸುತ್ತಿದ್ದರು.

“ಮನೆಯನ್ನೂ ಅವನೇ ಕಟ್ಟಿಸಿದ್ದ. ಮನೆ ಸಾಲ ಮುಗಿಯುತ್ತಾ ಬಂತಮ್ಮ. ಇನ್ನು 2 ಲಕ್ಷ ರೂ. ಬಾಕಿ ಇದೆ. ಅದು ಮುಗಿದ ಬಳಿಕ ನಿನ್ನ ಚಿನ್ನ ವನ್ನು ಬಿಡಿಸಿ ಕೊಡುತ್ತೇನೆ. ಫಂಡ್‌ಗೆ ಸೇರಿದ್ದೇನೆ. ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದೆಲ್ಲ ಹೇಳಿದ್ದ; ಆದರೆ ನನ್ನ ಮಗ ಮನೆಗೆ ಮರಳಲೇ ಇಲ್ಲ’ “ನನಗೆ ಚಿನ್ನ ಬೇಡ ಮಗ. ನೀನೇ ಸರ್ವಸ್ವ ಎಂದಿದ್ದೆ. ಕೆಲಸಕ್ಕೆ ವಿದೇಶಕ್ಕೆ ಹೋಗುವುದಾಗಿ ಹೇಳಿದ್ದ. ಆದರೆ ನಾನೇ ತಡೆದಿದ್ದೆ. ವಿದೇಶಕ್ಕೆ ಹೋಗಿದ್ದರೆ ಎಲ್ಲೋ ಕೆಲಸ ಮಾಡಿಕೊಂಡಿರುತ್ತಿದ್ದ. ಆದರೆ ನಾನು ತಪ್ಪು ಮಾಡಿದೆ. ಮಗನಿಗೆ ಮದುವೆ ಮಾಡುವುದಕ್ಕೂ ಯೋಚನೆ ಮಾಡಿದ್ದೆವು. ಆದರೆ ಮೂರು ವರ್ಷ ಮದುವೆ ಬೇಡ; ತಮ್ಮನಿಗೆ ಮದುವೆ ಮಾಡಿ ಎಂದೂ ತಿಳಿಸಿದ್ದ. ಯಾರ ತಂಟೆಗೂ ಹೋಗುತ್ತಿರಲಿಲ್ಲ. ಭಜನೆಗಷ್ಟೇ ಹೋಗುತ್ತಿದ್ದ. ಯಾವುದೇ ಸಂಘಟನೆ ಯಲ್ಲೂ ಆತ ಇರಲಿಲ್ಲ. ಸಂಜೆ ಏಳು ಗಂಟೆಗೆ ಮನೆಗೆ ಬಂದರೆ ಇಲ್ಲೇ ಇರುತ್ತಿದ್ದ. ನಿನ್ನೆ ಬೆಳಗ್ಗೆ ನಮ್ಮೊಂದಿಗೇ ಕುಳಿತು ಚಹಾ ಕುಡಿದು ಹೋದವ ಬರಲೇ ಇಲ್ಲ… ಮೊಬೈಲ್‌ ಕೂಡ ನಾಟ್‌ರೀಚೆಬಲ್‌ ಬರುತ್ತಿತ್ತು’ ಎಂದು ದುಃಖೀಸುತ್ತಿದ್ದ ತಾಯಿಯ ಕಣ್ಣೀರು ಸೇರಿದವರ ಹೃದಯ ಕಲಕುತ್ತಿತ್ತು.

ಗಲ್ಲು ಶಿಕ್ಷೆಯಾಗಲಿ: ಮಜೀದ್‌
ಮಂಗಳೂರು:
ದೀಪಕ್‌ ಕೋಮುದ್ವೇಷಕ್ಕೆ ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರು ಮುಸ್ಲಿಮರೊಂದಿಗೆ ಸ್ನೇಹದಿಂದಲೇ ಇದ್ದು, ಅವರೊಂದಿಗೆ ವ್ಯವಹರಿಸುವಾಗ ಬ್ಯಾರಿ ಭಾಷೆಯಲ್ಲೇ ಮಾತನಾಡು ತ್ತಿದ್ದರು. 7 ವರ್ಷಗಳಿಂದ ನಮ್ಮ ಮೊಬೈಲ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತ ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಿದ್ದರು. ನಮಗೂ ಕೆಲಸದವ ನಾಗಿರದೆ ಸ್ನೇಹಿತನಾಗಿದ್ದ ಎಂದು ದೀಪಕ್‌ಗೆ ಉದ್ಯೋಗ ನೀಡಿದ್ದ ಮೊಬೈಲ್‌ ಅಂಗಡಿಯ ಮಾಲಕ ಮಜೀದ್‌ 
ದುಃಖದಿಂದ ಹೇಳಿದ್ದಾರೆ.

ದೀಪಕ್‌ ನಮ್ಮಲ್ಲಿ ಸಿಮ್‌ ಕಾರ್ಡ್‌ ಮಾರಾಟ ಹಾಗೂ ಕರೆನ್ಸಿ ಮೊತ್ತವನ್ನು ಸಂಗ್ರಹ ಮಾಡುತ್ತಿದ್ದರು. ಬೆಳಗ್ಗೆ ಸುಮಾರು 9.30ಕ್ಕೆ ಕಚೇರಿಗೆ ಬಂದು ಬಳಿಕ ಅರ್ಧ ಗಂಟೆ ಇದ್ದು, ಅನಂತರ ಹಣ ಸಂಗ್ರಹಕ್ಕೆ ಹೋಗುತ್ತಿದ್ದರು. ಅವರು ಯಾರೊಂದಿಗೂ ದ್ವೇಷ ಹೊಂದಿರುವುದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಕೆಲದಿನಗಳ ಹಿಂದೆ ಬಂಟಿಂಗ್ಸ್‌ ಕಟ್ಟುವ ವಿಚಾರಕ್ಕೆ ಗಲಭೆಯಾಗಿರುವ ಕುರಿತು ಹೇಳಿಕೊಂಡಿದ್ದರು. ಕೊಲೆಯಾದ ದಿನವೂ ಬೆಳಗ್ಗೆ ಬಂದು 10 ಗಂಟೆಗೆ ಹೊರಗೆ ಹೋಗಿದ್ದಾರೆ. ಮಧ್ಯಾಹ್ನ 12.30ಕ್ಕೆ ಲೆಕ್ಕ ಕೊಡಲು ಬರುವುದಾಗಿ ತಿಳಿಸಿದ್ದರು ಎಂದವರು ವಿವರಿಸಿದ್ದಾರೆ.

ನಾನು ಒಂದು ಬಾರಿ ಅವರ ಮನೆಗೂ ಹೋಗಿದ್ದೆ. ಪ್ರಸ್ತುತ ಕರೆನ್ಸಿ ಉದ್ಯಮ ಕುಸಿದಿರುವ ಪರಿಣಾಮ ಮನೆ ನೋಡಿಕೊಳ್ಳಲು ಕಷ್ಟವಾಗುತ್ತಿದೆ. ತಾನು ವಿದೇಶಕ್ಕೆ ಹೋಗುವೆ ಎಂದೂ ದೀಪಕ್‌ ಹೇಳಿಕೊಂಡಿದ್ದರು. ತಿಂಗಳಿಗೆ 12,000 ರೂ. ಸಂಬಳ ಪಡೆಯುತ್ತಿದ್ದರು. ಜತೆಗೆ ಕಂಪೆನಿ ಸ್ವಲ್ಪ ಇನ್ಸೆಂಟಿವ್‌ ನೀಡುತ್ತಿತ್ತು. ಆದರೆ ಈಗ ವ್ಯಾಪಾರ ಕುಸಿದಿರುವ ಪರಿಣಾಮ ಇನ್ಸೆಂಟಿವ್‌ ಕೂಡ ಬರುತ್ತಿರಲಿಲ್ಲ ಎಂದು ಮಜೀದ್‌ ಹೇಳಿದ್ದಾರೆ.

ಕೊಲೆ ಪ್ರಕರಣವು ಮಧ್ಯಾಹ್ನ ನಮ್ಮ ಕಚೇರಿಯ ಹತ್ತಿರವೇ ನಡೆದಿದ್ದು, ಬೊಬ್ಬೆ ಕೇಳಿ ಹತ್ತಿರ ಹೋಗುವಷ್ಟರಲ್ಲಿ ದೀಪಕ್‌ನ ಪ್ರಾಣ ಹೋಗಿತ್ತು. ಬಳಿಕ ನಾನು ಅವರ ಸ್ನೇಹಿತರೊಬ್ಬರನ್ನು ಕರೆದುಕೊಂಡು ಬಂದೆ. ಅಷ್ಟೊತ್ತಿಗೆ ಪೊಲೀಸರು ಕೂಡ ಬಂದಿದ್ದರು ಎಂದು ತಿಳಿಸಿರುವ ಮಜೀದ್‌ ಅವರು, ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆಯನ್ನೇ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮಹಿಳೆಯರ ಆಕ್ರೋಶ
ಮೃತರ ಕುಟುಂಬಕ್ಕೆ ಪರಿಹಾರ ಘೋಷಿ ಸಲು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸು ತ್ತಿದ್ದಂತೆ ಸೇರಿದ್ದ ಮಹಿಳೆಯರು ಆಕ್ರೋಶ ವ್ಯಕ್ತ ಪಡಿಸಿದರು. ಕೃಷ್ಣಾಪುರ, ಕಾಟಿಪಳ್ಳ ಪರಿಸರ ದಲ್ಲಿ ಯುವಕರು ರಸ್ತೆಯಲ್ಲೇ ನಿಂತು ಗಾಂಜಾ ಸೇವಿಸುತ್ತಿರುತ್ತಾರೆ. ಜತೆಗೆ ಹೆಲ್ಮೆಟ್‌ ಧರಿಸದೇ ಮೂರು ಮೂರು ಮಂದಿ ಬೈಕಿ ನಲ್ಲಿ ತೆರಳು ತ್ತಿರುತ್ತಾರೆ. ಈ ಕುರಿತು ಯಾರೂ ಕ್ರಮ ಕೈಗೊಳ್ಳುವು ದಿಲ್ಲ. ಗಾಂಜಾ ಪ್ರಭಾವ ದಿಂದಲೇ ಹತ್ಯೆ ನಡೆದಿದೆ ಎಂದು ಆಕ್ರೋಶ ವ್ಯಕ್ತ ಪಡಿ ಸಿ ದರು. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. 

ಬೆಳಗ್ಗೆ  8 ಗಂಟೆಗೆ ರಹಸ್ಯವಾಗಿ ಶವ ಸಾಗಾಟ
“ನಾನು ಮತ್ತು ಸಂಸದ ನಳಿನ್‌ ಕುಮಾರ್‌ ಕಟೀಲು ಬೆಳಗ್ಗೆ 7 ಗಂಟೆಗೆ ಎ.ಜೆ. ಆಸ್ಪತ್ರೆಯ ಶವಾಗಾರದ ಬಳಿ ತೆರಳಿದ್ದೆವು. ಆಗ ಅಲ್ಲಿದ್ದ ಪೊಲೀಸ್‌ ಆಯುಕ್ತರ ಬಳಿ ನಾವು ಶವ ಕೊಂಡೊಯ್ಯಲು 10 ಗಂಟೆಗೆ ಬರುತ್ತೇವೆ ಎಂದು ಹೇಳಿದೆವು. ಆಗ ಪೊಲೀಸ್‌ ಆಯುಕ್ತರು ಹತ್ತು ಗಂಟೆಗಲ್ಲ, ಸ್ವಲ್ಪ ಬೇಗ ಬನ್ನಿ; 9 ಗಂಟೆಯೊಳಗೆ ಶವ ಇಲ್ಲಿಂದ ಕೊಂಡೊಯ್ಯಬೇಕು. ಹೆಚ್ಚು ವಾಹನಗಳಲ್ಲಿ ಬರುವುದು ಬೇಡ ಎಂದಿದ್ದರು. ಆಗ ಸುಮಾರು 10 ವಾಹನಗಳಲ್ಲಿ ನಾವು ಬರುತ್ತೇವೆ ಎಂದು ಆಯುಕ್ತರಿಗೆ ತಿಳಿಸಿದ್ದೆವು. ಇನ್ನೂ ಸಮಯ ಇರುವುದರಿಂದ ನಾವು ಅಲ್ಲಿಂದ ವಾಪಸಾದೆವು. ಬಳಿಕ 8 ಗಂಟೆ ವೇಳೆಗೆ ನಳಿನ್‌ ಕುಮಾರ್‌ ಕಟೀಲು ದಿಲ್ಲಿಗೆ ತೆರಳಿದರು. ಆಗ ನಾನು ಮತ್ತು ಡಾ| ಭರತ್‌ ಶೆಟ್ಟಿ, ಗಣೇಶ್‌ ಹೊಸಬೆಟ್ಟು, ಈಶ್ವರ ಕಟೀಲು ಎ.ಜೆ. ಆಸ್ಪತ್ರೆ ಬಳಿಗೆ ಹೋದೆವು. ಕೆಲವು ಮಾಧ್ಯಮದವರೂ ಅಲ್ಲಿದ್ದರು. ವಿಚಾರಿಸಿದಾಗ ಈಗ ಒಂದೆರಡು ನಿಮಿಷ ಮೊದಲು ದೀಪಕ್‌ ರಾವ್‌ ಮೃತ ದೇಹವನ್ನು ಶವಾಗಾರದಿಂದ ಹಿಂಬಾಗಿಲಿನ ಮೂಲಕ ಪೊಲೀಸರು ಕಾಟಿಪಳ್ಳಕ್ಕೆ ಕೊಂಡು ಹೋದ ವಿಚಾರ ತಿಳಿಯಿತು. ನಾವು ಪ್ರತ್ಯೇಕ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿದ್ದೆವು. ಪೊಲೀಸರು ರಹಸ್ಯವಾಗಿ ಶವವನ್ನು ಸಾಗಿಸಿದ್ದಾರೆ’ ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಜಗದೀಶ್‌ ಶೇಣವ ತಿಳಿಸಿದ್ದಾರೆ.

ಶಾಂತ ಸ್ವಭಾವದ ಯುವಕ
ದೀಪಕ್‌ ಶಾಂತ ಸ್ವಭಾವದ ಯುವಕ ನಾಗಿದ್ದು, ಯಾರೊಂದಿಗೂ ದ್ವೇಷ ಕಟ್ಟಿಕೊಂಡವರಲ್ಲ. ಸ್ಥಳೀಯ ವಾಗಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ದೀಪಕ್‌ ಸ್ವಯಂಸೇವಕರಾಗಿ ದುಡಿಯುತ್ತಿದ್ದರು. ಸಂಜೆ ತನ್ನ ಕೆಲಸ ಮುಗಿಸಿ ಬಂದ ಬಳಿಕ ಸ್ನೇಹಿತರೊಂದಿಗೆ ಬೆರೆಯುತ್ತಿದ್ದರು. ಆದರೆ ಅವರ ಸಾವಿಗೆ ಹುಡುಗಿಯ ಸಂಬಂಧ ಕಾರಣ, ಕೇಬಲ್‌ ಉದ್ಯಮ ಕಾರಣ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಿವೆ. ಇದು ಸತ್ಯಕ್ಕೆ ದೂರವಾದ ವಿಚಾರ. ಅವರ ಹತ್ಯೆ ನಮಗೆಲ್ಲ ಆಘಾತ ತಂದಿದೆ ಎಂದು ದೀಪಕ್‌ ಸ್ನೇಹಿತರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. 

ವೀಡಿಯೋ ವೈರಲ್‌!
ಬಂಟಿಂಗ್ಸ್‌ ವಿಚಾರಕ್ಕೆ ಸಂಬಂಧಪಟ್ಟ ವೀಡಿಯೋ ದೀಪಕ್‌ ಹತ್ಯೆಗೆ ಕಾರಣ ಎಂದು ಹೇಳ ಲಾಗು ತ್ತಿದ್ದು , ಈಗ ಆ ವೀಡಿಯೋ ವೈರಲ್‌ ಆಗಿದೆ. ಬಂಟಿಂಗ್ಸ್‌ ವಿಚಾರದ ಗಲಭೆ ಯನ್ನು ದೀಪಕ್‌ ವೀಡಿಯೋ ಮಾಡಿದ್ದು, ಅದನ್ನು ಡಿಲೀಟ್‌ ಮಾಡುವಂತೆ ಒತ್ತಾಯ ಕೇಳಿ ಬಂದಿತ್ತು. ಅದನ್ನು ಡಿಲೀಟ್‌ ಮಾಡದಿದ್ದರೆ ನಿನ್ನನ್ನು ಡಿಲೀಟ್‌ ಮಾಡುತ್ತೇವೆ ಎಂದು ದೀಪಕ್‌ಗೆ ಬೆದರಿಕೆಯೂ ಬಂದಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.

ದೀಪಕ್‌ ಅಂತಿಮ ದರ್ಶನ ಪಡೆದ ಪ್ರಮುಖರು
ಸುರತ್ಕಲ್‌:
ಹಲವಾರು ಮಂದಿ ಗಣ್ಯರು ಗುರುವಾರ ದೀಪಕ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಸಂಸದ ನಳಿನ್‌, ಮೇಯರ್‌ ಕವಿತಾ ಸನಿಲ್‌, ಕಲ್ಲಡ್ಕ ಡಾ| ಪ್ರಭಾಕರ ಭಟ್‌, ವಿಹಿಂಪ ಮುಂದಾಳು ಗೋಪಾಲ್‌, ಶಾಸಕ ಸುನಿಲ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ವಿಹಿಂಪ ಮುಖಂಡ ಪ್ರೊ| ಎಂ.ಬಿ. ಪುರಾಣಿಕ್‌, ಬಜರಂಗ ರಾಜ್ಯ ಮುಖಂಡ ಸೂರ್ಯನಾರಾಯಣ ರೆಡ್ಡಿ, ಮಾಜಿ ಶಾಸಕ ರಘುಪತಿ ಭಟ್‌, ಮಾಜಿ ಸಚಿವರಾದ ಬಿ. ನಾಗರಾಜ ಶೆಟ್ಟಿ, ಜೆ. ಕೃಷ್ಣ ಪಾಲೆಮಾರ್‌, ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ, ನಾಯಕರಾದ‌ ಸಂಜೀವ ಮಠಂದೂರು, ಮಟ್ಟಾರು ರತ್ನಾಕರ ಹೆಗ್ಡೆ, ವೇದವ್ಯಾಸ ಕಾಮತ್‌, ಉಮಾನಾಥ ಕೋಟ್ಯಾನ್‌, ಹರಿಕೃಷ್ಣ ಬಂಟ್ವಾಳ, ಸತ್ಯಜಿತ್‌ ಸುರತ್ಕಲ್‌, ಡಾ| ವೈ. ಭರತ್‌ ಶೆಟ್ಟಿ, ಜಗದೀಶ್‌ ಶೇಣವ, ಶರಣ್‌ ಪಂಪ್‌ವೆಲ್‌ ಮೊದಲಾದವರು ಭೇಟಿ ನೀಡಿದರು.

ಬಿಗಿ  ಪೊಲೀಸ್‌ ಬಂದೋಬಸ್ತು
ದೀಪಕ್‌ ಮೃತದೇಹದ ಅಂತಿಮ ದರ್ಶನ ಹಾಗೂ ಶವ ಯಾತ್ರೆ ಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡ ಲಾಗಿತ್ತು. ಅಹಿತಕರ ಘಟನೆ ನಡೆಯ ದಂತೆ  ಕಮಿಷನರ್‌ ಸುರೇಶ್‌ ನೇತೃತ್ವದ ಪೊಲೀಸ್‌ ಅಧಿಕಾರಿಗಳ ತಂಡ ಸ್ಥಳದಲ್ಲೇ ಬೀಡುಬಿಟ್ಟಿತ್ತು. ಬಳಿಕ ಶವಯಾತ್ರೆಯು ಗಣೇಶ್‌ಕಟ್ಟೆ ಬಳಿಯ ಮನೆಯಿಂದ ಹೊರಟು ಗಣೇಶ್‌ಪುರ ಮೂಲಕ ಸಾಗಿ ಮತ್ತೆ ಗಣೇಶ್‌ಕಟ್ಟೆಯಾಗಿ ಜನತಾ ಕಾಲನಿಯ ರುದ್ರಭೂಮಿಗೆ ಸಾಗಿತು. ಸುಮಾರು ಮೂರು ಕಿ.ಮೀ. ದೂರ ಶವಯಾತ್ರೆ ನಡೆಯಿತು.

ದೀಪಕ್‌ ಹತ್ಯೆಗೆ ಖಂಡನೆ; ಪ್ರತಿಭಟನೆ
ಮಂಗಳೂರು/ಉಡುಪಿ:
ಕಾಟಿಪಳ್ಳದ ದೀಪಕ್‌ ರಾವ್‌ ಹತ್ಯೆ ಖಂಡಿಸಿ ಕರಾವಳಿಯಾದ್ಯಂತ ಬಿಜೆಪಿ ಮತ್ತು ಇತರ ಹಿಂದೂ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದವು.

ದೀಪಕ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ ಕಠಿನ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಮತ್ತು ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡದ ರಾಜ್ಯ ಸರಕಾರದ ಕ್ರಮ ವನ್ನು ವಿರೋಧಿಸಿ ಮಂಗಳೂರು ನಗರ ದಕ್ಷಿಣ ಬಿಜೆಪಿ ವತಿಯಿಂದ ನಗರದ ಪಿವಿಎಸ್‌ ಸರ್ಕಲ್‌ ಬಳಿ ತುರ್ತು ರಾಸ್ತಾರೋಕೋ ಪ್ರತಿಭಟನೆ ನಡೆಯಿತು.

ಪುತ್ತೂರಿನಲ್ಲಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಲಾಯಿತು. ಪುತ್ತೂರು ನಗರದ ಬಸ್‌ ನಿಲ್ದಾಣ ಸಮೀಪದ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ಸಂಪ್ಯದ ರಸ್ತೆಯಲ್ಲಿ ಬಿಜೆಪಿ, ಬಜರಂಗದಳ, ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ರಸ್ತೆಯಲ್ಲೇ ಪ್ರತಿಭಟನೆ ಹಮ್ಮಿಕೊಂಡರು. ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಉಡುಪಿ, ಕಾರ್ಕಳ, ಕುಂದಾಪುರ ತಾಲೂಕಿನಲ್ಲಿಯೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next