ಮುಂಬೈ: ಐಸಿಸಿ ಟಿ20 ವಿಶ್ವಕಪ್ ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಈಗಾಗಲೇ ಆಸ್ಟ್ರೇಲಿಯಾಗೆ ತಲುಪಿದೆ. ಅಲ್ಲಿನ ಹವಾಮಾನಕ್ಕೆ ಹೊಂದಿಕೊಂಡು ಹೆಚ್ಚಿನ ಅಭ್ಯಾಸ ಮಾಡುವ ಉದ್ದೇಶದಿಂದ ಕೆಲ ವಾರಗಳ ಮೊದಲೇ ಆಸೀಸ್ ಗೆ ಪ್ರವಾಸ ಮಾಡಲಾಗಿದೆ.
ಏಷ್ಯಾಕಪ್ ನಂತೆ ಟಿ20 ವಿಶ್ವಕಪ್ ಗೂ ಗಾಯಾಳುಗಳ ಸಮಸ್ಯೆ ಕಾಡಿದೆ. ಏಷ್ಯಾಕಪ್ ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಸೇವೆಯಿಂದ ಅಲಭ್ಯರಾಗಿದ್ದ ಟೀಂ ಇಂಡಿಯಾ ಇದೀಗ ವಿಶ್ವಕಪ್ ಗೂ ಬುಮ್ರಾರನ್ನು ಕಳೆದುಕೊಂಡಿದೆ. ಆಸೀಸ್ ವಿರುದ್ಧ ಸರಣಿಯಲ್ಲಿ ಆಡಿದ್ದ ಬುಮ್ರಾ ಮತ್ತೆ ಗಾಯಗೊಂಡಿದ್ದು, ಪೂರ್ಣ ವಿಶ್ವಕಪ್ ಗೆ ಲಭ್ಯವಿರುವುದಿಲ್ಲ.
ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಮೀಸಲು ತಂಡ ಏಕದಿನ ಸರಣಿ ಆಡುತ್ತಿದೆ. ಹರಿಣಗಳ ವಿರುದ್ಧ ಟಿ20 ಸರಣಿಯಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ದೀಪಕ್ ಚಾಹರ್ ಮೊದಲ ಏಕದಿನ ಪಂದ್ಯದಲ್ಲಿ ಆಡಿರಲಿಲ್ಲ. ಇದು ಹಲವರ ಅಚ್ಚರಿಗೆ ಕಾರಣವಾಗಿತ್ತು. ಆದರೆ ಇದಕ್ಕೆ ಟೀಂ ಇಂಡಿಯಾ ಸ್ಪಷ್ಟನೆ ನೀಡಿದ್ದು, ಬಲಗೈ ವೇಗದ ಬೌಲರ್ ಚಾಹರ್ ಗಾಯಗೊಂಡಿದ್ದಾರೆ ಎಂದಿದೆ.
ಇದನ್ನೂ ಓದಿ:ಪಡಿತರ ವ್ಯವಸ್ಥೆಯಡಿ ಕರಾವಳಿ ಜಿಲ್ಲೆಗಳಲ್ಲಿ ಸ್ಥಳೀಯ ಕುಚ್ಚಲಕ್ಕಿ ವಿತರಣೆಗೆ ಕೇಂದ್ರ ಅನುಮತಿ
“ದೀಪಕ್ ಅವರ ಪಾದವನ್ನು ಟ್ವಿಸ್ಟ್ ಆಗಿದೆ. ಆದರೆ ಇದು ತುಂಬಾ ಗಂಭೀರವಾಗಿಲ್ಲ. ಆದಾಗ್ಯೂ ಕೆಲವು ದಿನಗಳ ವಿಶ್ರಾಂತಿ ಸಲಹೆ ನೀಡಬಹುದು” ಎಂದು ಮೂಲವೊಂದು ವರದಿ ಮಾಡಿದೆ. ಟಿ20 ವಿಶ್ವಕಪ್ ಸ್ಟ್ಯಾಂಡ್-ಬೈ ಪಟ್ಟಿಯಲ್ಲಿರುವ ದೀಪಕ್ ಅವರನ್ನು ಈ ಸರಣಿಯಲ್ಲಿ ಆಡಿಸುವ ರಿಸ್ಕ್ ತೆಗೆದುಕೊಳ್ಳುವುದು ಕಷ್ಟ ಎನ್ನಲಾಗಿದೆ.
ಗಾಯಗೊಂಡ ಬುಮ್ರಾ ಬದಲಿಗೆ ಟಿ20 ವಿಶ್ವಕಪ್ ಗೆ ಯಾರನ್ನೂ ಆಯ್ಕೆ ಮಾಡಿಲ್ಲ. ಮೊಹಮ್ಮದ್ ಶಮಿ ಮೊದಲ ಆಯ್ಕೆಯಾಗಿದ್ದು, ಒಂದು ವೇಳೆ ಫಿಟ್ ಆಗಿದ್ದಲ್ಲಿ ಎರಡು ಮೂರು ದಿನಗಳಲ್ಲಿ ಅವರು ಆಸೀಸ್ ಗೆ ಪ್ರಯಾಣಿಸಲಿದ್ದಾರೆ.