ನವದೆಹಲಿ: ದೆಹಲಿಯ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ಗಳಲ್ಲಿ ಒಬ್ಬನಾಗಿರುವ ದೀಪಕ್ ಬಾಕ್ಸರ್ ನನ್ನು ದಿಲ್ಲಿ ಪೊಲೀಸರು ಮೆಕ್ಸಿಕೋದಲ್ಲಿ ಬಂಧಿಸಿರುವುದು ವರದಿಯಾಗಿದೆ.
ದೆಹಲಿಯ ವಿಶೇಷ ಪೊಲೀಸ್ ತಂಡ ಮೆಕ್ಸಿಕೋದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಅವರ ಸಹಾಯದಿಂದ ಗ್ಯಾಂಗ್ ಸ್ಟರ್ ದೀಪಕ್ ಬಾಕ್ಸರ್ ನನ್ನು ಬಂಧಿಸಿದ್ದಾರೆ. ಇದೇ ವಾರದ ಕೊನೆಯಲ್ಲಿ ಬಂಧಿತ ದೀಪಕ್ ನನ್ನು ಭಾರತಕ್ಕೆ ಕರೆತರಲಾಗುತ್ತದೆ. ಭಾರತದ ಹೊರೆಗೆ ದೆಹಲಿಯ ಪೊಲೀಸರು ಇದೇ ಮೊದಲ ಬಾರಿ ಗ್ಯಾಂಗ್ ಸ್ಟರ್ ನೊಬ್ಬನನ್ನು ಬಂಧಿಸಿರುವ ಪ್ರಕರಣ ಇದಾಗಿದೆ ಎಂದು ವರದಿ ತಿಳಿಸಿದೆ.
2021 ರಲ್ಲಿ ಗೋಗಿ ಗ್ಯಾಂಗ್‌ನ ಮುಖ್ಯಸ್ಥ ಜಿತೇಂದ್ರ ಗೋಗಿ ಹತ್ಯೆಯಾದ ಬಳಿಕ ಆ ಗ್ಯಾಂಗನ್ನು ದೀಪಕ್ ಬಾಕ್ಸರ್ ಮುಂದುವರೆಸಿಕೊಂಡು ಹೋಗಿದ್ದ. ಗೋಲ್ಡಿ ಬ್ರಾರ್, ಲಾರೆನ್ಸ್ ಬಿಷ್ಣೋಯಿ ಅವರ ಸಹಚರಲ್ಲಿಯೂ ಒಬ್ಬನಾಗಿರುವ ದೀಪಕ್ ಬಾಕ್ಸರ್ 2022 ರ ಆಗಸ್ಟ್ ನಲ್ಲಿ ಕೊಲೆಯೊಂದನ್ನು ಮಾಡಿ ಅಲ್ಲಿಂದ ಪರಾರಿಯಾಗಿದ್ದ. ಬಿಲ್ಡರ್ ಅಮಿತ್ ಗುಪ್ತಾ ಅವರ ಮೇಲೆ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ಹಲವಾರು ಬಾರಿ ಗುಂಡು ಹಾರಿಸಿದ್ದ.
ಜನವರಿ 29 ರಂದು ರವಿ ಆಂಟಿಲ್ ಎಂಬ ಹೆಸರಿನೊಂದಿಗೆ ನಕಲಿ ಪಾಸ್ ಪೋರ್ಟ್ ಮಾಡಿಸಿ ದೀಪಕ್ ಕೋಲ್ಕತ್ತಾದಿಂದ ಮೆಕ್ಸಿಕೋಗೆ ತೆರಳಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಈ ಹಿಂದೆ ಗ್ಯಾಂಗ್ ಸ್ಟರ್ ದೀಪಕ್ ನನ್ನು ಹುಡುಕಿಕೊಟ್ಟವರಿಗೆ 3 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.