Advertisement

ಡೀಮ್ಡ್ ಫಾರೆಸ್ಟ್‌: 15 ದಿನಗಳಲ್ಲಿ ಅಂತಿಮ ತೀರ್ಮಾನ

01:48 AM Feb 20, 2022 | Team Udayavani |

ಕೊಕ್ಕರ್ಣೆ: ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಪರಿಹಾರ ಅಂತಿಮ ಹಂತದಲ್ಲಿದೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ನಡುವೆ ಆಗಿರುವ ಒಮ್ಮತದ ತೀರ್ಮಾನದಂತೆ ಅರಣ್ಯಭೂಮಿ ಕಂದಾಯ ಇಲಾಖೆಗೆ ಹಸ್ತಾಂತರ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, 15 ದಿನಗಳೊಳಗೆ ಅಂತಿಮ ತೀರ್ಮಾನ ಹೊರಬೀಳಲಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

Advertisement

ಅವರು ಶನಿವಾರ ಕೊಕ್ಕರ್ಣೆಯಲ್ಲಿ ಜರಗಿದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಕುರಿತ ಸಂವಾದ ಸಂದರ್ಭ ಈ ಭರವಸೆ ನೀಡಿದರು.

ರಾಜ್ಯದಲ್ಲಿ ಒಟ್ಟು 9 ಲಕ್ಷ ಹೆಕ್ಟೇರ್‌ ಡೀಮ್ಡ್ ಫಾರೆಸ್ಟ್‌ ವ್ಯಾಪ್ತಿಯಲ್ಲಿದೆ. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸಭೆ ನಡೆಸಿ 6 ಲಕ್ಷ ಹೆ. ಕಂದಾಯ ಇಲಾಖೆಗೆ ಮತ್ತು 3 ಲಕ್ಷ ಹೆ. ಅರಣ್ಯ ಇಲಾಖೆಗೆ ಹಂಚಿಕೆ ಮಾಡಲು ತೀರ್ಮಾನವಾಗಿದೆ. ಡೀಮ್ಡ್ ಫಾರೆಸ್ಟ್‌ ವಿರಹಿತಗೊಳಿಸಲು ಅಭ್ಯಂತರವಿಲ್ಲ ಎಂದು ಅರಣ್ಯ ಇಲಾಖೆ ಸುಪ್ರೀಂ ಕೋರ್ಟ್‌ಗೆ ಅಫಿದವಿತ್‌ ಸಲ್ಲಿಸಿದೆ.

ಕಂದಾಯ ಇಲಾಖೆ ಕೂಡ ಇದು ನಮ್ಮದೇ ಭೂಮಿ ಎಂದು ಅಫಿಡವಿಟ್‌ ಸಲ್ಲಿಸಿದೆ. ಹೀಗಾಗಿ ಎಲ್ಲ ಸಮಸ್ಯೆಗಳು ಪರಿಹಾರವಾಗಿವೆ. ಸರಕಾರ ಶೀಘ್ರದಲ್ಲಿ ಅಂತಿಮ ಆದೇಶ ಹೊರಡಿಸಿ, ಪ್ರಸ್ತುತ ಡೀಮ್ಡ್ ಫಾರೆಸ್ಟ್‌ ಎಂದು ದಾಖಲಾದ ಜಮೀನಿನಲ್ಲಿ 6ಲಕ್ಷ ಹೆಕ್ಟೇರ್‌ ಜಮೀನಿನ ದಾಖಲೆಗಳು ಕಂದಾಯ ಇಲಾಖೆಗೆ ಹಸ್ತಾಂತರಿಸುವ ಕಾರ್ಯ ತ್ವರಿತವಾಗಿ ನಡೆಯಲಿದೆ. ಅನಂತರ ಅದನ್ನು ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಮಂಜೂರುಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ 1 ಲಕ್ಷ ಎಕ್ರೆ
ಉಡುಪಿ ಜಿಲ್ಲೆಯಲ್ಲಿ 1 ಲಕ್ಷ ಎಕ್ರೆ ಭೂಮಿ ಡೀಮ್ಡ್ ಫಾರೆಸ್ಟ್‌ನಿಂದ ಕಂದಾಯ ಇಲಾಖೆ ವ್ಯಾಪ್ತಿಗೆ ಬರಲಿದ್ದು, ಅನಂತರ 94ಸಿ, 94 ಸಿಸಿ ಹಾಗೂ ನಮೂನೆ 50, 53ಯಡಿ ಅರ್ಜಿ ಸಲ್ಲಿಸಿದ ಕೃಷಿಕರು, ಬಡ ಜನರಿಗೆ ಸಿಗಲಿದೆ ಎಂದರು.

Advertisement

ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಪರಿಹಾರಕ್ಕೆ ಶಾಸಕ ರಘುಪತಿ ಭಟ್‌ ಸಾಕಷ್ಟು ಸಲಹೆಗಳನ್ನು ನೀಡಿದ್ದು, ಸಚಿವ ಸುನಿಲ್‌ ಕುಮಾರ್‌ ಮತ್ತು ಕರಾವಳಿಯ ಇತರ ಶಾಸಕರು ನನಗೆ ಸಾಕಷ್ಟು ಸಾಥ್‌ ನೀಡಿದ್ದಾರೆ ಎಂದು ಕಂದಾಯ ಸಚಿವರು ಶ್ಲಾ ಸಿದರು.

ಸಮಸ್ಯೆಗೆ ಮೂಲ ಕಾರಣ
ಈ ಹಿಂದೆ ಕಂದಾಯ ಇಲಾಖೆಯ ವಶದಲ್ಲಿದ್ದ ಸಾಕಷ್ಟು ಪ್ರಮಾಣದ ಭೂಮಿ ಒತ್ತುವರಿಯಾಗುತ್ತಿತ್ತು. ಹೀಗಾಗಿ ಅಂದಿನ ಸರಕಾರ ಈ ಭೂಮಿಯನ್ನು ರಕ್ಷಿಸುವ ಸಲುವಾಗಿ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿಸಿತು. ಅನಂತರ ಅರಣ್ಯ ಇಲಾಖೆ ತನ್ನ ಭೂಮಿಯನ್ನು ಉಳಿಸಿಕೊಳ್ಳುವ ಸಲುವಾಗಿ ಯಾರೂ ಪರಭಾರೆ ಮಾಡಬಾರದು ಎಂದು ಡೀಮ್ಡ್ ಫಾರೆಸ್ಟ್‌ ಎಂಬುದಾಗಿ ಘೋಷಿಸಿತು. ಹೀಗಾಗಿ ಈ ಸಮಸ್ಯೆ ಉಲ್ಬಣಗೊಂಡಿತು ಎಂದು ಕಂದಾಯ ಸಚಿವರು ಸಮಸ್ಯೆಯ ಉಗಮದ ಬಗ್ಗೆ ತಿಳಿಸಿದರು.

ಹೊಸದಾಗಿ ಅರ್ಜಿಗೆ ಅವಕಾಶವಿಲ್ಲ
ಸುಮಾರು 40-50 ವರ್ಷಗಳಿಂದ ವಾಸವಿದ್ದು, ಕೃಷಿ ನಡೆಸಿ ಅರ್ಜಿ ಸಲ್ಲಿಸುತ್ತ ಬಂದವರಿಗೆ ಪ್ರಥಮವಾಗಿ ಜಮೀನು ನೀಡಲು ಆದ್ಯತೆ ನೀಡಲಾಗುವುದು. ಹೊಸದಾಗಿ ಅರ್ಜಿ ಸಲ್ಲಿಸಿದವರನ್ನು ಈ ವ್ಯಾಪ್ತಿಗೆ ಪರಿಗಣಿಸುವುದಿಲ್ಲ ಎಂದು ಕಂದಾಯ ಸಚಿವರು ತಿಳಿಸಿದರು.

ಕುಮ್ಕಿ ಸಮಸ್ಯೆ ಪರಿಹಾರಕ್ಕೆ ಸಮಿತಿ
ಕಮ್ಕಿ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದು, ವಿಧಾನಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ಸಮಿತಿಯ ಸಭೆ ನಡೆಸಿ ಫಲಾನುಭವಿಗಳಿಗೆ ಭೂಮಿ ನೀಡುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ನೆಲದಲ್ಲಿ ಕುಳಿತು ಮನವಿ ಆಲಿಸಿದ ಸಚಿವರು
ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಮನವಿ ಆಲಿಸುವ ಸಂದರ್ಭ ಕಂದಾಯ ಸಚಿವರು, “ನೀವು ನೆಲದಲ್ಲಿ, ನಾನು ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ’ ಎಂದು ನೆಲದಲ್ಲೇ ಕುಳಿತು ಸಂತ್ರಸ್ತರ ಮನವಿಗೆ ಕಿವಿಯಾದರು.

 

Advertisement

Udayavani is now on Telegram. Click here to join our channel and stay updated with the latest news.

Next