Advertisement

ಬೋಳದಲ್ಲಿ  ಡೀಮ್ಡ್  ಫಾರೆಸ್ಟ್‌  ಗುಮ್ಮ

09:00 PM Aug 23, 2021 | Team Udayavani |

ಬೆಳ್ಮಣ್‌: ಕಾರ್ಕಳ ತಾಲೂಕಿನ ಬೋಳ ಎಂಬ ಗ್ರಾಮ ಇಂದಿಗೂ ಬಸ್‌ ಬಾರದೂರು ಎಂಬ ಕುಖ್ಯಾತಿಗೆ ಪಾತ್ರವಾಗಿರುವುದರ ಜತೆಗೆ ಇಲ್ಲಿನ ಕೆಂಪುಜೋರ ಎಂಬಲ್ಲಿ ವಾಸವಾಗಿರುವ‌ 4 ಕೊರಗ ಕುಟುಂಬಗಳಿಗೆ ಡೀಮ್ಡ್ ಫಾರೆಸ್ಟ್‌  ಎಂಬ ಕಾರಣಕ್ಕಾಗಿ ಇನ್ನೂ ಹಕ್ಕುಪತ್ರ ಸಿಗದೆ ಇರುವುದು ಶಾಪವಾಗಿ ಪರಿಣಮಿಸಿದೆ.

Advertisement

ನಿರಂತರ ನೀರು ಪೂರೈಕೆ, ಸುಂದರ ರಸ್ತೆ, ಉತ್ತಮ ಕೃಷಿ ಚಟುವಟಿಕೆ, ವಿವಿಧ ಧಾರ್ಮಿಕ ಕೇಂದ್ರಗಳ ಮೂಲಕ ಸುದ್ದಿಯಲ್ಲಿರುವ ಈ ಬೋಳದಲ್ಲಿ ಕೆಲವೊಂದು ನಕಾರಾತ್ಮಕ ವಿಚಾರಗಳು ಸುದ್ದಿಯಾಗದೆ ಉಳಿದಿವೆ.

ಸುಮಾರು 1,300ಕ್ಕೂ ಮಿಕ್ಕಿ ಕುಟುಂಬಗಳಿರುವ ಈ ಬೋಳದ  ಕೆಂಪುಜೋರಾದಲ್ಲಿ ಈ ಹಿಂದೆ 5 ಕೊರಗ ಕುಟುಂಬಗಳು ವಾಸವಾಗಿದ್ದು ಇವರಿಗೆ 3-4 ದಶಕಗಳಿಂದ ಹಕ್ಕುಪತ್ರವೇ ಲಭಿಸಿರಲಿಲ್ಲ. ಕಳೆದ ವರ್ಷ ಉದಯವಾಣಿ ಜನಪರ ಕಾಳಜಿ ವಿಭಾಗದಲ್ಲಿ ಸಚಿತ್ರ ವರದಿ ಪ್ರಕಟಿಸಿದ ಬಳಿಕ  ಸಾಮಾಜಿಕ ಕಾರ್ಯಕರ್ತ ಬೋಳ ಸತೀಶ್‌ ಪೂಜಾರಿ ಅವರು ಸಮಾಜ ಕಲ್ಯಾಣ ಇಲಾಖೆ ಹಾಗೂ ಅರಣ್ಯ ಇಲಾಖೆಯ ಬೆನ್ನು ಹಿಡಿದು ಒಂದು ಕುಟುಂಬಕ್ಕೆ ಹಕ್ಕುಪತ್ರ ದೊರಕಿಸಲು ನೆರವಾಗಿದ್ದರು. ಇದೀಗ ಉಳಿದ ಕುಟುಂಬಗಳು ಡೀಮ್ಡ್ ಫಾರೆಸ್ಟ್‌  ಎಂಬ ಭಯದ ನೆರಳಲ್ಲಿ ಹಕ್ಕು ಪತ್ರಕ್ಕಾಗಿ ಕಾಯುತ್ತಿವೆ.

ವಿದ್ಯುತ್‌ ಬಿಲ್‌ ಹೊರೆ :

ಬೋಳದಲ್ಲಿ ಅಂತರ್ಜಲ ಮಟ್ಟದ ಕೊರತೆಯಿದ್ದು 6 ಬೋರ್‌ವೆಲ್‌ ತೋಡಿದ್ದರೂ ನೀರು ಸಿಕ್ಕಿರಲಿಲ್ಲ.  ಆ ಬಳಿಕ ತೋಡಿದ ಬೋರ್‌ವೆಲ್‌ನಲ್ಲಿ ನೀರು ಸಿಕ್ಕಿತ್ತು. ಇದೀಗ ಅಲ್ಲಲ್ಲಿ ಸುಮಾರು 8 ಬೋರ್‌ವೆಲ್‌ಗ‌ಳಿದ್ದು ಅವುಗಳಿಗೆ 8 ಪಂಪ್‌ಗ್ಳನ್ನು ಅಳವಡಿಸಿದ್ದರಿಂದ ವಿದ್ಯುತ್‌ ಬಿಲ್‌ ಅಧಿಕ ಬರುತ್ತಿದೆ. ಇದು ಸ್ಥಳೀಯ ಆಡಳಿತಕ್ಕೆ ಹೊರೆಯಾಗುತ್ತಿದೆ.

Advertisement

ಶೈಕ್ಷಣಿಕ ಕೇಂದ್ರಗಳ ಕೊರತೆ :

ಬೋಳ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಆಗರವಾಗಿದ್ದು ದೇವಸ್ಥಾನ, ದೈವಸ್ಥಾನಗಳು  ಪ್ರಮುಖ ಭಕ್ತಿ ಕೇಂದ್ರಗಳಾಗಿವೆ. ತುಳುನಾಡಿನ ಸತ್ಯದ ಸಿರಿ ಓಡಾಡಿದ ಉಲ್ಲೇಖಗಳೂ ಇವೆ. ಆದರೆ ಇಲ್ಲಿ ಶೈಕ್ಷಣಿಕ ಕೇಂದ್ರಗಳ ಕೊರತೆ ಎದ್ದು ಕಾಣುತ್ತಿದೆ. ಸರಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಶಾಲೆಗಳಿದ್ದರೂ ಪ್ರೌಢ, ಮುಂದಿನ ಶಿಕ್ಷಣಕ್ಕಾಗಿ ಈ ಊರಿನ ವಿದ್ಯಾರ್ಥಿಗಳು ಸುಮಾರು 10-15 ಕಿ.ಮೀ. ದೂರದ ಮುಂಡ್ಕೂರು, ಬೆಳ್ಮಣ್‌, ನಿಟ್ಟೆ  ಗ್ರಾಮಗಳಿಗೆ ತೆರಳಬೇಕಾಗಿದೆ.

ಇತರ ಸಮಸ್ಯೆಗಳೇನು? :

  • ಪ್ರೌಢಶಾಲೆಯ ಜತೆ ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆಗಳು ಬೇಕು.
  • ಅಂತರ್ಜಲ ಮಟ್ಟ ಕಡಿಮೆ ಇರುವುದರಿಂದ ನದಿಯಲ್ಲಿ ಬಾವಿ ತೋಡಿ ಒಂದೇ ಪಂಪ್‌ ಬಳಸಿ ವಿದ್ಯುತ್‌ ಬಿಲ್‌ ಕಡಿಮೆ ಮಾಡಲು ಕ್ರಮ ವಹಿಸುವುದು.
  • ಜನರ ಓಡಾಟಕ್ಕೆ ಬಸ್‌ ವ್ಯವಸ್ಥೆ ಆಗಬೇಕಾಗಿದೆ.
  • ರೈತ ಸಂಪರ್ಕ ಕೇಂದ್ರ ಅಗತ್ಯವಿದೆ.

ಅಭಿವೃದ್ಧಿ  ನಿರೀಕ್ಷೆ :

ಇಲ್ಲಿನ ಶಾಸಕರು  ಪ್ರಸ್ತುತ ಸಚಿವರಾಗಿರುವುದರಿಂದ ಇನ್ನಷ್ಟು ಅಭಿವೃದ್ಧಿ ನಿರೀಕ್ಷಿಸಲಾಗಿದೆ. ಅಲ್ಲದೆ ಕೋಟ ಶ್ರೀನಿವಾಸ ಪೂಜಾರಿ ಅವರು ಸಮಾಜ ಕಲ್ಯಾಣ ಸಚಿವರಾಗಿ  ಆಯ್ಕೆಯಾಗಿರುವುದರಿಂದ ಕೆಂಪುಜೋರ ಕೊರಗರ ಕುಟುಂಬದ ಹಕ್ಕು ಪತ್ರದ ಸಮಸ್ಯೆ ಪರಿಹಾರ ಸುಲಭ.ಬೋಳ ಸತೀಶ್‌ ಪೂಜಾರಿ, ಸಾಮಾಜಿಕ ಕಾರ್ಯಕರ್ತ

ಕೃಷಿಕರತ್ತ ಗಮನ ಕೊಡಿ  :

ಬೋಳದಲ್ಲಿ ಬಸ್‌ನ ಜತೆ ಕೆಲ ವೊಂದು ಮೂಲ ಸೌಕರ್ಯಗಳ ಕೊರತೆ ಇದೆ. ಕೃಷಿಕರಿಗೆ ಪೂರಕ ನೆರವು ಸಂಬಂಧ ಪಟ್ಟವರಿಂದ ದೊರಕುತ್ತಿಲ್ಲ. ಕೃಷಿಕರ ಬೆಳೆಗೆ ಬೆಂಬಲ ಬೆಲೆ ಅಗತ್ಯ. ಕೃಷಿಕರತ್ತ ಗಮನ ಕೊಡಿ.  -ಸಚ್ಚೇರಿಪೇಟೆ ಶರತ್‌ ಶೆಟ್ಟಿ, ಕೃಷಿಕ

 

ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next