Advertisement
ಆದರೂ ಕಷ್ಟಗಳನ್ನು ನುಂಗಲೇಬೇಕು, ನೋವುಗಳ ಮರೆಯಲೇಬೇಕು, ಮತ್ತೆ ಮನೆಯಲ್ಲಿ ದೀಪ ಬೆಳಗಲೇಬೇಕು. ಸೋತು ಕೂತರೆ ನಡೆಯದು ಬದುಕು. ಕುಗ್ಗಿದರೆ ಮುನ್ನಡೆಯದು ಜಟಕಾ ಬಂಡಿ. ಸಾವುಗಳು ವಿಧಿ ಲಿಖಿತವಾದರೂ, ಇರುವ ಜೀವವನ್ನು ಕಾಯ್ದುಕೊಳ್ಳಲು ಹೋರಾಡಲೇ ಬೇಕು. ನಮ್ಮ ಆರೋಗ್ಯ ವನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಇತರರಿಗೂ ಯಾವ ರೋಗ ಹರಡದಂತೆ ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕ.
Related Articles
Advertisement
ಹಿಂದೂ ಧರ್ಮ: ಶ್ರೀ ರಾಮನು ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ.
ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಾಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲ ಪಕ್ಷದ ಪಾಡ್ಯ – ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.
ಸಿಖ್ ಧರ್ಮ: ಸಿಖ್ಖರ ಧರ್ಮದಲ್ಲಿಯೂ ದೀಪಾವಳಿಯು ವಿಶೇಷ ಹಬ್ಬ. 1620 ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್‌ನ ಕೋಟೆಯಲ್ಲಿ ಬಂಧಿತರಾಗಿದ್ದ 52 ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.
ಜೈನ್ ಧರ್ಮ: ದೀಪಾವಳಿಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತುರ್ದಶಿಯಂದು (ಕ್ರಿ.ಪೂ 567 ಅಕ್ಟೋಬರ್ 15) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸುತ್ತಾರೆ.
ಎಲ್ಲಧರ್ಮಗಳಲ್ಲೂ ಹೊಸ ವಿಚಾರಗಳ, ಹೊಸ ಭರವಸೆಗಳ ತುಂಬುವುದೇ ಧ್ಯೇಯ.
ಮನೆಯ ಮುಂದೆ ಕಾರ್ತಿಕ ದೀಪದ ಬುಟ್ಟಿಯು ವಿಭಿನ್ನವಾಗಿರುವುದು, ಸಾಲು ಸಾಲಾಗಿ ದೀಪಗಳ ಬೆಳಗಿಸುವುದು ಕಣ್ಣಿಗೆ ಸೌಂದರ್ಯದ ದೃಶ್ಯಗಳನ್ನು ಸೃಷ್ಟಿಸುತ್ತದೆ. ಕೆಲವೊಂದು ಕಡೆ ನೀರಿನಲ್ಲು ದೀಪಗಳನ್ನು ತೇಲಿಯೂ ಬಿಡುವುದು ಪದ್ದತಿ.
ಸೂಕ್ಷ್ಮವಾಗಿ ಅವಲೋಕಿಸಿದರೆ, ಎಲ್ಲಾ ದೀಪಗಳನ್ನು ಒಂದೊಂದು ಬೆಂಕಿ ಕಡ್ಡಿಯನ್ನು ಉಪಯೋಗಿಸಿ ಹಚ್ಚುವುದಿಲ್ಲ.ಕೇವಲ ಒಂದು ಬೆಂಕಿ ಕಡ್ಡಿಯಿಂದ ಒಂದು ಹಣತೆಯ ಬೆಳಗಿ, ಅದು ಉರಿಯುವಾಗ ಸಾಲಾಗಿ ಇಟ್ಟ ಉಳಿದ ಹಣತೆಗಳನ್ನು ಒಂದರಿಂದ ಒಂದನ್ನು ಹಚ್ಚಿ ಎಲ್ಲ ದೀಪಗಳನ್ನು ಪೂರ್ಣವಾಗಿ ಬೆಳಗಿಸುವುದು ಒಂದು ಐಕ್ಯತೆಯನ್ನು, ಹಂಚಿಕೊಳ್ಳುವ ಭಾವನೆಯನ್ನು ಬಿಂಬಿಸುತ್ತದೆ. ‘ತಾನೇ ಉರಿದರೂ ದೀಪ ಮನೆಗೆ ಬೆಳಕ ಕೊಡುವುದು’ ಎನ್ನುವ ಕಸ್ತೂರಿ ನಿವಾಸ ಚಿತ್ರದ ಅವರ ಸಾಲು ಎಂದಿಗೂ ಸತ್ಯ.
ಈ ಹಬ್ಬಗಳನ್ನು ಯಾಕೆ ಆಚರಿಸಬೇಕು ಹೇಳಿ? ಪದ್ದತಿಗಳಿಗಾಗಿ? ಅಲ್ಲ.ಧರ್ಮದ ವಿಧಾನವಾಗಿ ಅಲ್ಲ. ಕರ್ತವ್ಯವಾಗಿ? ಅಲ್ಲ. ದೇವರಿಗಾಗಿ? ಅಲ್ಲ. ಬರೀ ಆಚರಣೆಗಾಗಿ? ಅಲ್ಲ. ಮತ್ತೆ ಯಾವುದಕ್ಕಾಗಿ?
ಮನುಷ್ಯನ ಪ್ರತಿದಿನವೂ, ಪ್ರತಿ ಕ್ಷಣವೂ ಎನೇನೋ ವಿಚಿತ್ರ ದಾರಿಗಳು, ಸವಾಲುಗಳು, ಅಡೆತಡೆಗಳು, ವಿಭಿನ್ನತೆಗಳನ್ನು ಎದುರಿಸುತ್ತಾನೆ. ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಮಾನವನ ಬದುಕಿನಲ್ಲಿ ಒಂದು ಹೊಸ ಧೈರ್ಯ, ಸ್ಥೈರ್ಯ, ಆತ್ಮವಿಶ್ವಾಸ, ಚೈತನ್ಯವನ್ನು ಮತ್ತೆ ಚಿಗುರಿಸಲು, ಹೊಸ ಭರವಸೆಯ ಬಿತ್ತಲು, ಖುಷಿಯ ಹಂಚಲು, ದ್ವೇಷ ಮರೆತು ಒಬ್ಬರಿಗೊಬ್ಬರು ಮತ್ತೆ ಕೈಜೋಡಿಸಲು, ಕೂಡಿ ಬಾಳಲು, ಹೊಸ ಬದುಕ ಮತ್ತೆ ಕಟ್ಟಿ ಕೊಳ್ಳಲು, ಆಂತರಿಕ ತಮಸ್ಸನ್ನು ನಂದಿಸಿ, ಮುಗುಳ್ನಗೆಯ ಜ್ಯೋತಿ ಬೆಳಗಲು ಒಂದು ದೀಪ ಬೆಳಗುವ ಆಚರಣೆಯಿದು.
ಡಾ.ಅರ್ಚನಾ ಎನ್ ಪಾಟೀಲ
ಹಾವೇರಿ