Advertisement

ಇಳಿಕೆಯಾದ ಮಧ್ಯಾಂತರ ರಜಾವಧಿ: ಕೃಷಿ ಪಾಠ ವಂಚಿತ ವಿದ್ಯಾರ್ಥಿಗಳು

11:53 AM Oct 27, 2018 | Team Udayavani |

ಆಲಂಕಾರು: ಅಬ್ಬರದ ಮಳೆಯಿಂದಾಗಿ ಶಾಲಾ ಆರಂಭದ ದಿನಗಳಲ್ಲಿ ಹೆಚ್ಚಿನ ದಿನಗಳು ರಜಾ ದಿನಗಳಾದವು. ಈ ಕಾರಣದಿಂದಾಗಿಯೇ ಮಧ್ಯಾವಧಿ ರಜೆಯು ಸಂಪೂರ್ಣ ಮಜಾ ಶಾಲಾ ವಿದ್ಯಾರ್ಥಿಗಳು ಅನುಭವಿಸಲಾಗದೆ ಗೊಂದಲದಲ್ಲಿಯೇ ಮುಗಿದು ಹೋಯಿತು. ಈ ಮಧ್ಯೆ ಬೇಸಾಯ ಕೃಷಿಯ ಬಗ್ಗೆ ಮತು ನೇಜಿ ನಾಟಿ ಮಾಡುವ ಬಗ್ಗೆ ಶಾಲಾ ಮಕ್ಕಳಿಗೆ ನೇಜಿ ಪ್ರಾತ್ಯಕ್ಷಿಕೆಯನ್ನು ನೀಡಿ ಕೃಷಿ ಪಾಠವನ್ನು ಹೇಳಿಕೊಡಲಾಗಿತ್ತು. ಅಂದು ನೇಜಿ ಪ್ರಾತ್ಯಕ್ಷಿಕೆಯನ್ನು ಪಡೆದಿದ್ದ ಮಕ್ಕಳು ಇದೀಗ ಪೈರು ಕಟಾವಿನ ಭಾಗ್ಯದಿಂದ ವಂಚಿತರಾಗಿದ್ದಾರೆ.

Advertisement

ಮಳೆಯ ಕಾರಣ ಹತ್ತು ದಿನಗಳು ಶಾಲಾ ಆರಂಭದ ದಿನಗಳಲ್ಲಿ ರಜೆ ನೀಡಲಾಗಿತ್ತು. ಪರಿಣಾಮ ಮಧ್ಯಾವಧಿ ರಜೆ ಕೇವಲ ಒಂದು ವಾರಕ್ಕೆ ಸೀಮಿತವಾಗಿತ್ತು. ಸರಕಾರ ಎರಡು ವಾರಗಳ ರಜೆಯನ್ನು ಘೋಷಿಸಿ, ಇದೀಗ ಶನಿವಾರ ಸಂಜೆ ತನಕ ತರಗತಿ ನಡೆಸುವಂತೆ ಆದೇಶಿಸಿದೆ. ಇದರಿಂದಾಗಿ ಶನಿವಾರ ಮಧ್ಯಾಹ್ನದ ಬಳಿಕವೂ ತರಗತಿಗೆ ಹಾಜರಾಗ ಬೇಕಾಗಿರುವುದದರಿಂದ ಹೆತ್ತವರೊಂದಿಗೆ ಕೃಷಿ ಕಾಯಕದಲ್ಲಿ ಪಾಲು ಪಡೆಯುವ ಭಾಗ್ಯದಿಂದ ಮಕ್ಕಳು ವಂಚಿತರಾಗಿದ್ದಾರೆ.

ಈ ಹಿಂದಿನ ಶಿಕ್ಷಣ ನಿಯಮದಂತೆ ಅ. 2ರಂದು ಗಾಂಧಿ ಜಯಂತಿ ಬಳಿಕ ಮಧ್ಯಾವಧಿ ರಜೆ ನೀಡಲಾಗುತ್ತಿತ್ತು. ಅಕ್ಟೋಬರ್‌ ಅಂತ್ಯದವರೆಗೆ ರಜೆ ನೀಡಿ, ನವಂಬರ್‌ ತಿಂಗಳ ಆರಂಭದಲ್ಲಿಯೇ ತರಗತಿಗಳು ಆರಂಭವಾಗುತ್ತಿದ್ದವು. ಜೂನ್‌ ತಿಂಗಳಲ್ಲಿ ನಾಟಿ ಮಾಡಿದ ನೇಜಿ ಅಕ್ಟೋಬರ್‌ ತಿಂಗಳಲ್ಲಿ ಕಟಾವಿಗೆ ಬರುತ್ತದೆ. ತಿಂಗಳಾಂತ್ಯದ ಮೊದಲು ಎರಡನೇ ಹಂತದ (ಸುಗ್ಗಿ) ನೇಜಿ ನಾಟಿ ಕಾರ್ಯವು ಮುಗಿಯುತ್ತಿತ್ತು. ಈ ಸಮಯದಲ್ಲಿ ಮಕ್ಕಳು ಗದ್ದೆಯ ಬೇಸಾಯ ಕೃಷಿಯನ್ನು ಅನುಭವಿಸುತ್ತಿದ್ದರು. ಆದರೆ ಬದಲಾದ ಶಿಕ್ಷಣ ನೀತಿಯಿಂದಾಗಿ ಅಕ್ಟೋಬರ್‌ ಮಧ್ಯದಲ್ಲಿಯೆ ಮಧ್ಯಾವಧಿ ತರತಿಗಳು ಆರಂಭವಾಗಿ ವಿದ್ಯಾರ್ಥಿಗಳು ನಿರಾಶರಾಗಿದ್ದಾರೆ.

ಶಾಲೆಯಿಂದ ಪೈರು ಕಟಾವಿನ ಪ್ರಾತ್ಯಕ್ಷಿಕೆ
ಶಾಲಾ ಆರಂಭದ ದಿನಗಳಲ್ಲಿ ಆಲಂಕಾರು ಸರಕಾರಿ ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ನೇಜಿ ನಾಟಿಯ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿ ವಿದ್ಯಾರ್ಥಿಗಳಿಗೆ ಕೃಷಿ ಪಾಠ ಹೇಳಿ ಕೊಡಲಾಗಿತ್ತು. ರೈತರ ಆಹಾರ ಪದ್ದತಿ, ಆಚಾರ ವಿಚಾರದೊಂದಿಗೆ ಗ್ರಾಮೀಣ ಜನತೆಯ ಕೃಷಿಯ ಜಾನಪದ ಶೈಲಿ ಮತ್ತು ಜೀವನದ ಸೊಗಡನ್ನು ಮನವರಿಕೆ ಮಾಡಿಕೊಡಲಾಗಿತ್ತು. ಈ ಹಿಂದೆ ಕೃಷಿ ಪಾಠವು ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಸಿಗುತ್ತಿತ್ತು. ಆದರೆ ಈ ಬಾರಿ ವಿದ್ಯಾರ್ಥಿಗಳು ಕೃಷಿಯ ಮನೆ ಪಾಠದಿಂದ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಪೈರು ಕಟಾವಿನ ಪ್ರಾತ್ಯಕ್ಷಿಕೆ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು ಆಲಂಕಾರು ಸರಕಾರಿ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಕೆ.ಪಿ. ನಿಂಗರಾಜು ಹೇಳಿದ್ದಾರೆ.

ಪಠ್ಯದೊಂದಿಗೆ ಕೃಷಿ ಪಾಠ ಶಿಕ್ಷಕರು 
ವಿದ್ಯಾರ್ಥಿಗಳ ಪಾಲಿನ ಎರಡನೇ ಪೊಷಕರಿದ್ದಂತೆ. ಪಾಠ ಹೇಳಿಕೊಡುವುದೇ ಶಿಕ್ಷಕರ ಪಾಲಿನ ಕರ್ತವ್ಯವಾಗದೆ ಜೀವನ ನಿರ್ವಹಣೆಯ ಪಾಠವನ್ನು ಭೋಧಿಸುವುದು ಇಂದಿನ ಅಗತ್ಯವಾಗಿದೆ. ಜವಾಬ್ದಾರಿಯುತ ಜೀವನ ನಿರ್ವಹಣೆಯ ಬಗ್ಗೆ ಮಾರ್ಗದರ್ಶನ ನೀಡಬೇಕಾಗಿದೆ. ಕೃಷಿ ಪಾಠವನ್ನು ಎಲ್ಲ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿಯೇ ನೀಡಲು ಶಿಕ್ಷಕರು ಜವಾಬ್ದಾರರಾಗಬೇಕು.
– ಪ್ರದೀಪ್‌ ಬಾಕಿಲ
   ಸಿಆರ್‌ಪಿ ಆಲಂಕಾರು ಕ್ಲಸ್ಟರ್‌

Advertisement

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next