ರಾಯಚೂರು: ಜಿಲ್ಲೆಯಲ್ಲಿ ಎಚ್‌ಐವಿ ಹಾಗೂ ಏಡ್ಸ್ ರೋಗಿಗಳ ಸಂಖ್ಯೆ ಇಳಿಮುಖವಾಗಿದ್ದು, ಈ ಬಾರಿಯೂ ನಾಲ್ಕನೇ ಸ್ಥಾನದಲ್ಲೇ ಮುಂದುವರಿದಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ| ಸುರೇಂದ್ರ ಬಾಬು ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೋಮವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019-20ನೇ ಸಾಲಿನಲ್ಲಿ 608 ಏಡ್ಸ್ ಪ್ರಕರಣ ಗಳು ವರದಿಯಾಗಿವೆ. 2020-21ನೇ ಸಾಲಿನ ಅಕ್ಟೋಬರ್ ಅಂತ್ಯದರೆಗೆ 225 ಪ್ರಕರಣಗಳು ವರದಿಯಾಗಿದ್ದು, ಈವರೆಗೆ 222 ಜನ ಏಡ್ಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ರಾಯಚೂರು ತಾಲೂಕಿನಲ್ಲೇ ಅತಿಹೆಚ್ಚು ಪ್ರಕರಣ ದೃಢಪಟ್ಟಿವೆ. 2019-20ನೇ ಸಾಲಿನಲ್ಲಿ ರಾಯಚೂರು ತಾಲೂಕಿನಲ್ಲಿ 15,668 ಜನರನ್ನು ಪರೀಕ್ಷಿಸಿದ್ದು, 219 ಪಾಸಿಟಿವ್ ಫಲಿತಾಂಶ ಬಂದಿದೆ. 2020-21ನೇ ಸಾಲಿನಲ್ಲಿ 63 ಪ್ರಕರಣಗಳು ವರದಿಯಾಗಿವೆ. ಸಿಂಧನೂರಿನಲ್ಲಿ ಪ್ರಸಕ್ತ ವರ್ಷದಲ್ಲಿ 47 ಎಚ್‌ಐವಿ ಪ್ರಕರಣಗಳು ವರದಿಯಾಗಿದ್ದು, ಕಳೆದ ವರ್ಷ 126 ಪ್ರಕರಣಗಳು ವರದಿಯಾಗಿದ್ದವು. ದೇವದುರ್ಗ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 27, ಲಿಂಗಸೂಗೂರು 60, ಮಾನವಿ 28 ಪ್ರಕರಣಗಳು ಪತ್ತೆಯಾಗಿವೆ ಎಂದರು.
14 ವರ್ಷದೊಳಗಿನ 256 ಮಕ್ಕಳಲ್ಲಿ ಎಚ್‌ಐವಿ ಪಾಸಿಟಿವ್ ಅಂಶಗಳು ಕಂಡುಬಂದಿವೆ. ಅಂಥ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಮಕ್ಕಳ ಬ್ಯಾಂಕ್ ಖಾತೆಗೆ ಒಂದು ಸಾವಿರ ರೂ. ನೀಡಲಾಗುತ್ತಿದೆ. ಲೈಂಗಿಕ ಅಲ್ಪಸಂಖ್ಯಾತರಲ್ಲಿಯೂ ಎಚ್‌ಐವಿ ಸೋಂಕು ಕಂಡು ಬರುತ್ತಿದ್ದು, ಪರೀಕ್ಷೆ ನಡೆಸಲಾಗುತ್ತಿದೆ. ಎಚ್‌ಐವಿ ಸೋಂಕಿತ ಮಹಿಳೆಯರಿಗೆ 24 ಜನರಿಗೆ ಸುರಕ್ಷಿತ ಹೆರಿಗೆ ಮಾಡಿಸಲಾಗಿದೆ. ಸಕಾಲಕ್ಕೆ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಈವರ್ಷ ಜಾಗತಿಕ ಒಗ್ಗಟ್ಟು ಹಾಗೂ ಜವಾಬ್ದಾರಿ ಹಂಚಿಕೆ ಘೋಷ ವಾಕ್ಯದೊಂದಿಗೆ ಎಚ್‌ಐವಿ ನಿಯಂತ್ರಣಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ. ಜಿಲ್ಲೆಯಲ್ಲಿ 14 ಆಪ್ತ ಸಮಾಲೋಚನೆ ಹಾಗೂ ಪರೀಕ್ಷಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಉಚಿತವಾಗಿ ರಕ್ತ ಪರೀಕ್ಷೆ ನಡೆಸಲಾಗುತ್ತಿದೆ. ರಿಮ್ಸ್ ಆಸ್ಪತ್ರೆ, ಸಿಂಧನೂರು ಮತ್ತು ಲಿಂಗಸೂಗೂರು ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಎಆರ್‌ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಿರವಾರ, ಮಸ್ಕಿ ಸೇರಿದಂತೆ 8 ಕಡೆಗಳಲ್ಲಿ ಉಪ ಎಆರ್‌ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮಕ್ಕಳಲ್ಲಿ ಎಚ್‌ಐವಿ ಏಡ್ಸ್ ಕುರಿತು ಜಾಗೃತಿ ಮೂಡಿಸಲು ರೆಡ್ ರಿಬ್ಬನ್ ಕ್ಲಬ್ ಸ್ಥಾಪಿಸಲಾಗಿದೆ ಎಂದರು.
ಕಾಂಡೋಮ್ ಬಳಕೆ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಜನ ಸಾಂದ್ರತೆ ಇರುವ ಕಡೆಗಳಲ್ಲಿ ಕಾಂಡೋಮ್ ಪೆಟ್ಟಿಗೆ ಅಳವಡಿಸಿ ಸುಲಭವಾಗಿ ಕಾಂಡೋಮ್ ಸಿಗುವಂತೆ ಮಾಡಲಾಗುತ್ತದೆ. ಡಿ.1ರಂದು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಹೆಚ್ಚು ಬಾರಿ ರಕ್ತದಾನ ಮಾಡಿದವರನ್ನು ಸನ್ಮಾನಿಸಲಾಗುತ್ತದೆ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ| ನಾಗರಾಜ ಇದ್ದರು.
ಲಾಕ್‌ಡೌನ್ ವೇಳೆ ಪರೀಕ್ಷೆ ಇಳಿಕೆ : ಕೋವಿಡ್-19 ಕಾರಣಕ್ಕೆ ಲಾಕ್‌ಡೌನ್‌ಜಾರಿಗೊಳಿಸಿದ ಪರಿಣಾಮ ಆಸ್ಪತ್ರೆಗೆ ಬರುವವರ ಸಂಖ್ಯೆ ಇಳಿಕೆ ಕಂಡಿದ್ದು, ಎಚ್‌ಐವಿ ಸೋಂಕಿತರ ಪರೀಕ್ಷೆ ಪ್ರಮಾಣ ತಗ್ಗಿದೆ. ಕೋವಿಡ್ ಹಿನ್ನೆಲೆಯಲ್ಲೂ ಎಚ್‌ಐವಿ ಸೋಂಕಿತರಿಗೆ ಔಷಧಪೂರೈಸಲಾಗುತ್ತಿದೆ. ಹೊರ ರಾಜ್ಯಗಳಿಂದಬಂದ ಸೋಂಕಿತರಿಗೂ ಔಷಧ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.