ಲಂಡನ್: ಕೋವಿಡ್-19 ಮೊದಲ ಅಲೆ ಈಗ ವಿಶ್ವದೆಲ್ಲೆಡೆ ಕ್ಷೀಣಿಸುತ್ತಿದೆ. ಸಂಶೋಧನೆಯಲ್ಲಿ ಅರ್ಧ ದಾರಿಯಲ್ಲಿರುವ ಲಸಿಕೆ ತಜ್ಞರಿಗೆ ಈ ವಿಚಾರವೇ ಈಗ ತಲೆನೋವಾಗಿದೆ!
ಏಕೆ ಗೊತ್ತೇ? ಲಸಿಕೆ ಸಂಶೋಧನೆ ಎನ್ನುವುದು ಸಾಮುದಾಯಿಕ ಪ್ರಕ್ರಿಯೆ.ಸಹ ಸ್ರಾರು ಸೋಂಕಿತರು ಒಂದೇ ಪ್ರದೇಶದಲ್ಲಿದ್ದರೆ, ರೋಗವ್ಯತ್ಯಾಸ, ಚೇತರಿಕೆ ಗುಣಮಟ್ಟ ಗಳನ್ನು ಅಧ್ಯಯನ ಮಾಡುವುದು ವಿಜ್ಞಾನಿಗಳಿಗೆ ಸುಲಭ. ಚಿಕಿತ್ಸೆಯ ಗುಂಪು, ನಿಯಂತ್ರಣ ಗುಂಪು- ಎಂಬ 2 ವಿಭಾಗಗಳಲ್ಲಿ ಲಸಿಕೆ ಪ್ರಯೋಗ ನಡೆಸಲಾಗುತ್ತದೆ. ಒಂದು ಪ್ರದೇಶದಲ್ಲಿ ಸೋಂಕು ಹೆಚ್ಚಿದ್ದರಷ್ಟೇ ಈ ಪ್ರಯೋಗದ ತಾಳೆಗಳು ಯಶಸ್ವಿಯಾಗುತ್ತವೆ.
“ಲಸಿಕೆಗಳ ಕ್ಲಿನಿಕಲ್ ಟೆಸ್ಟ್‌ಗೆ ವ್ಯಾಪಕ ಸೋಂಕುಗಳಿರುವ ಪ್ರದೇಶಗಳು ಬೇಕು. ಆದರೆ, ಸರಕಾರಗಳು ಈಗಾಗಲೇ ಸಾಮಾ ಜಿಕ ಅಂತರ ಇತ್ಯಾದಿ ನೀತಿ ರೂಪಿಸಿ ಸೋಂಕು ಗಳನ್ನು ನಿಯಂತ್ರಿಸಿದ್ದರೆ, ಪ್ರಯೋಗದ ಯಶಸ್ಸು ಕಷ್ಟಸಾಧ್ಯ’ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ನಿರ್ದೇಶಕ ಫ್ರಾನ್ಸಿಸ್ ಕಾಲಿನ್ಸ್ ಹೇಳುತ್ತಾರೆ.
“ಸೋಂಕು ಏಕಾಏಕಿ ಕ್ಷೀಣಿಸುತ್ತಿದ್ದರೆ ಈಗಿನ ಪ್ರಯೋಗಗಳು ವ್ಯರ್ಥ ಫಲಿತಾಂಶ ನೀಡುವ ಸಾಧ್ಯತೆ ಇರುತ್ತದೆ. ಸಮುದಾ ಯದಲ್ಲಿ ಸೋಂಕಿನ ಅಪಾಯವಿದ್ದರಷ್ಟೇ ನಮಗೆ ಕೆಲಸ ಸುಲಭ’ ಎನ್ನುತ್ತಾರೆ, ಇಂಗ್ಲೆಂಡ್‌ನ ಸಂಶೋಧಕ ಐಫರ್ ಅಲಿ.
ಆಫ್ರಿಕದತ್ತ ವಿಜ್ಞಾನಿಗಳ ಕಣ್ಣು: ಪ್ರಸ್ತುತ ಕೋವಿಡ್-19 ಸೋಂಕು ಅಮೆರಿಕ, ಇಂಗ್ಲೆಂಡ್, ಇಟಲಿಗಳಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ಚೇತ ರಿಸಿಕೊಳ್ಳುವವರ ಸಂಖ್ಯೆಯೇ ಅಧಿಕಗೊ ಳ್ಳುತ್ತಿದೆ. ಇದರಿಂದಾಗಿ ಲಸಿಕೆ ತಜ್ಞರು ಹಾಟ್‌ಸ್ಪಾಟ್‌ಗಳತ್ತ ಮುಖ ಮಾಡುತ್ತಿದ್ದಾರೆ. ಅದ ರಲ್ಲೂ ಈಗಷ್ಟೇ ಸೋಂಕು ಉಲ್ಬಣಿಸು ತ್ತಿರುವ ಆಫ್ರಿಕ, ಲ್ಯಾಟಿನ್ ಅಮೆರಿಕ ದೇಶಗಳತ್ತ ವಿಜ್ಞಾನಿಗಳ ಕಣ್ಣು ಬಿದ್ದಿದೆ.
ಎಬೋಲಾ ಲಸಿಕೆಗೂ ಸವಾಲು ಎದುರಾಗಿತ್ತು!
2014ರಲ್ಲಿ ಪಶ್ಚಿಮ ಆಫ್ರಿಕದಲ್ಲಿ ಎಬೊಲಾ ಸಮಸ್ಯೆ ಉದ್ಭವಿಸಿದ್ದಾಗ, ಲಸಿಕೆ ತಜ್ಞರು ಇಂಥದ್ದೇ ಸವಾಲನ್ನು ಎದುರಿಸಿದ್ದರು. ದೊಡ್ಡ ದೊಡ್ಡ ಔಷಧ ಕಂಪನಿಗಳು ಸಂಶೋಧನೆಯಲ್ಲಿ ಮುಳುಗಿದ್ದಾಗ, ಇತ್ತ ಎಬೋಲಾ ಕ್ಷೀಣಿಸುತ್ತಾ ಬಂದಿತ್ತು.