ತೇರದಾಳ: ಕೃಷ್ಣಾ ನದಿಯಲ್ಲಿನ ನೀರು ಇಳಿಮುಖವಾಗುತ್ತಿದೆ. ಇದರಿಂದ ಮೇನಲ್ಲಿ ಪಟ್ಟಣದಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುವ ಆತಂಕ ಎದುರಾಗಿದೆ. ಬಿಸಿಲಿನ ತಾಪ ಹಾಗೂ ಜಮೀನುಗಳಿಗೆ ನೀರು ಸರಬರಾಜು ಹೆಚ್ಚಾಗಿರುವುದರಿಂದ ಏಪ್ರಿಲ್ ಮುಗಿಯುವ ಮೊದಲೆ ನದಿಯಲ್ಲಿನ ನೀರು ಖಾಲಿ ಆಗುವ ಸಾಧ್ಯತೆಯಿದೆ. ಹೀಗಾಗಿ ತೇರದಾಳ ಹಾಗೂ ಸುತ್ತಲಿನ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.
ತೇರದಾಳಕ್ಕೆ ಹಳಿಂಗಳಿ ಬಳಿಯ ಕೃಷ್ಣಾ ನದಿ ತೀರದಲ್ಲಿ ಜಾಕ್‌ವೆಲ್ ನಿರ್ಮಿಸಿ ಪೈಪ್‌ಲೈನ್ ಮುಖಾಂತರ ನೀರು ಸರಬರಾಜುಗೊಳ್ಳುತ್ತಿದೆ. ಮಾರ್ಚ್ ಕೊನೆಯ ವಾರದಲ್ಲೆ ಮೂರು ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಕೆಲ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಜಾಕ್‌ವೆಲ್ ಬಳಿಯ ನದಿಯಲ್ಲಿ ಈಗ ಕೇವಲ 12-14 ಅಡಿಯಷ್ಟು ಮಾತ್ರ ನೀರಿದೆ. ಪ್ರತಿನಿತ್ಯ ಒಂದು ಅಡಿಯಷ್ಟು ನೀರು ಕಡಿಮೆಗೊಳ್ಳುತ್ತಿದೆ. ತೇರದಾಳ, ರಬಕವಿ-ಬನಹಟ್ಟಿ ನಗರಗಳಿಗೆ ಹಾಗೂ ಬಹುಗ್ರಾಮಗಳ ಕುಡಿವ ನೀರಿನ ಯೋಜನೆಯಡಿ ಏಳು ಹಳ್ಳಿಗಳಿಗೆ ಕೃಷ್ಣಾ ನದಿ ನೀರು ಪೂರೈಕೆಯಾಗುತ್ತಿದ್ದು, ನದಿಯಲ್ಲಿನ ನೀರು ಖಾಲಿಯಾಗುವ ಆತಂಕ ಎದುರಾಗಿದೆ.
ಹೆಚ್ಚಿನ ಕೊಳವೆ ಬಾವಿಗಳು: ಪುರಸಭೆಯವರು ಅಂದಾಜು 50ರಷ್ಟು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಇವುಗಳಲ್ಲಿ ಬಹುತೇಕ ಕೊಳವೆ ಬಾವಿಗಳಿಗೆ ನೀರಿದೆ. ಕೆಲವು ಮಾತ್ರ ಮೋಟಾರ್ ಮತ್ತು ಪೈಪ್ ದುರಸ್ತಿಯಿಂದ ಸ್ಥಗಿತಗೊಂಡಿದ್ದು, ಇನ್ನುಳಿದ ಎಲ್ಲ ಕೊಳವೆ ಬಾವಿಗಳು ಚಾಲ್ತಿಯಲ್ಲಿವೆ. ಆದರೆ ಅವುಗಳಿಗೂ ನೀರು ಕಡಿಮೆ ಆಗುತ್ತಿವೆ. ಇನ್ನು ಕೆಲ ಕೈ ಪಂಪ್ ಗಳು ಸದ್ದಿಲ್ಲದೇ ಗೂಡು ಸೇರಿವೆ. ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಖಾಸಗಿ ಸೇರಿದಂತೆ ಅನೇಕ ಶುದ್ಧ ನೀರಿನ ಘಟಕಗಳಿದ್ದು, ಚಾಲ್ತಿಯಲ್ಲಿವೆ.
ರೈತರ ಗೋಳು: ಬಿಸಿಲು ಹೆಚ್ಚಾಗುತ್ತಿದ್ದಂತೆ ಬೆಳೆದು ನಿಂತ ಬೆಳೆಗಳಿಗೂ ನೀರು ಅವಶ್ಯವಾಗಿದೆ. ಇದ್ದ ಬೆಳೆ ಉಳಿಸಿಕೊಳ್ಳಲು ರೈತ ನೀರಿಗಾಗಿ ಗೋಳಾಡುತ್ತಿದ್ದು, ಕೊಳವೆ ಬಾವಿ ಹಾಗೂ ತೆರೆದ ಬಾವಿಗಳಿಗೆ ನೀರು ಕಡಿಮೆಯಾಗಿದೆ. ಜಾನುವಾರುಗಳಿಗೆ ಕುಡಿಯಲು ನೀರು ಸಾಕಾಗುತ್ತಿಲ್ಲ.
ಕೋಯ್ನಾದಿಂದ ನೀರು: ಪ್ರತಿವರ್ಷ ಈ ವೇಳೆಗೆ ಜನಪ್ರತಿನಿಧಿಗಳು ಮಹಾರಾಷ್ಟ್ರ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಿಸಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುತ್ತಿದ್ದರು. ಆದರೆ ಎಲ್ಲರೂ ಈಗ ಲೋಕಸಭಾ ಚುನಾವಣೆಯಲ್ಲಿ ತೊಡಗಿರುವುದರಿಂದ ಮಹಾರಾಷ್ಟ್ರ ಸರಕಾರದೊಂದಿಗೆ ಮಾತನಾಡಿ ನದಿಗೆ ನೀರು ಬಿಡಿಸುವ ಕೆಲಸ ವಿಳಂಭವಾಗುವ ಸಾಧ್ಯತೆಯಿದೆ. ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ತೊಡಗಿರುವುದರಿಂದ ಕೋಯ್ನಾದಿಂದ ನೀರು ಬಿಡಿಸುವ ಪ್ರಕ್ರಿಯೆ ತಡವಾಗುವ ಸಂಭವವಿದೆ.
ನದಿಯಲ್ಲಿನ ನೀರು ಕಡಿಮೆಯಾಗುತ್ತಿದೆ. ನಗರದಲ್ಲಿ ಪುರಸಭೆ ವತಿಯಿಂದ ಕೊರೆಸಿರುವ ಕೊಳವೆ ಬಾವಿಗಳ ಸ್ಥಿತಿ-ಗತಿಗಳ ಬಗ್ಗೆ ತಿಳಿದುಕೊಂಡು ಸಾರ್ವಜನಿಕರಿಗೆ ಸಮರ್ಪಕ ನೀರು ಪೂರೈಕೆ ಮಾಡಲು ಯತ್ನಿಸಲಾಗುವುದು. ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡು
ಬಂದಿರುವ ನಾನು ಆ ಕಾರ್ಯದೊಂದಿಗೆ ನೀರಿನ ಸಮಸ್ಯೆ ಉಲ್ಬಣವಾಗದಂತೆ ಪ್ರಯತ್ನಿಸುತ್ತೇನೆ. ಸಾರ್ವಜನಿಕರು ನೀರನ್ನು ಹಿತ-ಮಿತವಾಗಿ ಬಳಸಬೇಕು. ಅನಗತ್ಯವಾಗಿ ನೀರು ಪೋಲು ಮಾಡಬಾರದು.
ಮಹಾವೀರ ಬೋರನ್ನವರ.
ಮುಖ್ಯಾಧಿಕಾರಿ, ತೇರದಾಳ