ಚಿಕ್ಕೋಡಿ: ಕಳೆದ ನಾಲ್ಕೈದು ದಿನಗಳಿಂದ ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಎಡೆಬಿಡದೇ ಮಳೆ ಸುರಿದು ಪ್ರವಾಹದ ಆತಂಕ ಉಂಟು ಮಾಡಿದ್ದ ಮಳೆ ಕಳೆದ 24 ಗಂಟೆಯಲ್ಲಿ ಸಂಪೂರ್ಣ ತಗ್ಗಿದೆ. ಇದರಿಂದ ಕೃಷ್ಣಾ, ದೂಧಗಂಗಾ ಮತ್ತು ವೇಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ಮೂರು ಅಡಿಯಷ್ಟು ಇಳಿಕೆ ಕಂಡಿದೆ.
ನೆರೆಯ ಮಹಾರಾಷ್ಟ್ರದ ಜಲಾನಯನ ಪ್ರದೇಶವಾದ ಮಹಾಬಳೇಶ್ವರ, ಕೋಯ್ನಾ, ಪಾಟಗಾಂವ, ಕೊಲ್ಲಾಪೂರ, ರಾಧಾನಗರಿ ಮತ್ತು ಕಾಳಮ್ಮವಾಡಿ ಪ್ರದೇಶದಲ್ಲಿ 4-5 ದಿನ ಭಾರಿ ಮಳೆ ಸುರಿದಿತ್ತು. ರಾಜ್ಯದ ಗಡಿ ಭಾಗದಲ್ಲಿ ಸಹ ಉತ್ತಮ ಮಳೆ ಸುರಿದಿತ್ತು. ಇದರಿಂದ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಮಳೆ ಕಡಿಮೆಯಾಗಿದ್ದರಿಂದ ನದಿಗಳ ನೀರಿನ ಒಳಹರಿವು ನಿಧಾನವಾಗಿ ಇಳಿಮುಖವಾಗುತ್ತಿದೆ.
ಮುಳುಗಡೆಗೊಂಡಿರುವ ಕೃಷ್ಣಾ ನದಿಯ ಕಲ್ಲೋಳ- ಯಡೂರ, ದೂಧಗಂಗಾ ನದಿಯ ಮಲಿಕವಾಡ-ದತ್ತವಾಡ, ನಿಪ್ಪಾಣಿ ತಾಲೂಕಿನ ಕಾರದಗಾ-ಭೋಜ, ವೇದಗಂಗಾ ನದಿಯ ಜತ್ರಾಟ-ಭಿವಶಿ, ಅಕ್ಕೋಳ-ಸಿದ್ನಾಳ, ಭೋಜವಾಡಿ-ಕುನ್ನೂರ ಮತ್ತು ಬಾರವಾಡ-ಕುನ್ನೂರ ಸೇತುವೆಗಳು ಬರುವ ಎರಡು ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಗಳಿವೆ. ನೆರೆಯ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ 85 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ದೂಧಗಂಗಾ ಮತ್ತು ವೇಧಗಂಗಾ ನದಿಗಳಿಂದ 26 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 1.12 ಲಕ್ಷ ಕ್ಯೂಸೆಕ್‌ಗೂ ಅಧಿ ಕ ನೀರು ಹರಿದು ಹಿಪ್ಪರಗಿ ಬ್ಯಾರೇಜ್‌ಗೆ ಹೋಗುತ್ತಿದೆ. ಅಲ್ಲಿಂದ 1.43 ಲಕ್ಷ ಕ್ಯೂಸೆಕ್ ನೀರು ಹರಿದು ಆಲಮಟ್ಟಿಗೆ ಹೋಗುತ್ತಿದೆ ಎಂದು ತಹಶೀಲ್ದಾರ್ ಪ್ರವೀಣ ಜೈನ್ ಹೇಳಿದ್ದಾರೆ.
ಮಳೆ ವಿವರ: ಚಿಕ್ಕೋಡಿ-0.4 ಮಿಮೀ, ಅಂಕಲಿ-01 ಮಿಮೀ, ನಾಗರಮುನ್ನೋಳ್ಳಿ-1.8 ಮಿಮೀ, ಸದಲಗಾ-2.2 ಮಿಮೀ, ಜೋಡಟ್ಟಿ-2 ಮಿಮೀ. ನಿಪ್ಪಾಣಿ 1.0 ಮಿಮೀ, ನಿಪ್ಪಾಣಿ ಎಆರ್‌ಎಸ್- 2.3 ಮಿಮೀ, ಸೌಂದಲಗಾ-4.6 ಮಿಮೀ, ಗಳತಗಾ-3.6 ಮಿಮೀ.
ಮಹಾರಾಷ್ಟ್ರದ ಮಳೆ ವಿವರ: ಕೋಯ್ನಾ-21 ಮಿಮೀ, ನವಜಾ-26 ಮಿಮೀ, ಮಹಾಬಳೇಶ್ವರ-27 ಮಿಮೀ, ಕಾಳಮ್ಮವಾಡಿ-33 ಮಿಮೀ, ವಾರಣಾ-36 ಮಿಮೀ, ದೂಧಗಂಗಾ-108 ಮಿಮೀ, ರಾಧಾನಗರಿ-37 ಮಿಮೀ, ಪಾಟಗಾಂವ-57 ಮಿಮೀ, ಕೊಲ್ಲಾಪೂರ-9 ಮಿಮೀ.