ಕುಣಿಗಲ್: ಜಾಗತಿಕ ಮಟ್ಟದಲ್ಲಿ ಹರಡುತ್ತಿರು ಕೊರೊನಾ ವೈರಸ್ ಹಾಗೂ ಹಕ್ಕಿಜ್ವರ ಹಿನ್ನೆಲೆಯಲ್ಲಿ ಕೋಳಿ ಮಾಂಸದಂಗಡಿ ವ್ಯಾಪಾರಕ್ಕೆ ಸಾಕಷ್ಟು ಹೊಡೆತ ಬಿದ್ದಿದ್ದು, ಕೋಳಿ ಮಾಂಸ ಕೊಳ್ಳುವವರಿಲ್ಲದೇ ವ್ಯಾಪಾರಸ್ಥರು, ಕೋಳಿ ಫಾರಂ ಮಾಲೀಕರು ತಲೆ ಮೇಲೆ ಕೈ ಇಟ್ಟುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಮೇಕೆ, ಕುರಿ, ಮೀನಿಗೆ ಬೇಡಿಕೆ: ಕುಣಿಗಲ್ ತಾಲೂಕಾದ್ಯಂತ ಕೋಳಿ ಮಾಂಸ ಕೊಳ್ಳುವ ಗ್ರಾಹಕರ ಸಂಖ್ಯೆ ತೀವ್ರ ಇಳಿಮುಖವಾಗಿದ್ದು, ಇದರಿಂದ ವ್ಯಾಪಾರವಿಲ್ಲದೆ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುವಂತಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಮೇ ತಿಂಗಳ ವರೆಗೆ ಪಟ್ಟಣ ಸೇರಿ ತಾಲೂಕಿನಲ್ಲಿ ಮುನಿಯಪ್ಪ ಹಾಗೂ ಮಾರಿ ಹಬ್ಬ ನಡೆಯುತ್ತಿದೆ.
ಹಬ್ಬದ ವಿಶೇಷವಾಗಿ ಕೋಳಿ, ಮೇಕೆ, ಕುರಿ, ಮೀನು ಮಾಂಸದ ವ್ಯಾಪಾರ ಭರ್ಜರಿಯಾಗಿ ನಡೆಯುತ್ತದೆ. ದೂರದ ಊರಿನಿಂದ ಸಂಬಂಧಿಕರು, ಸ್ನೇಹಿತರನ್ನು ಕರೆಸಿ ಭರ್ಜರಿ ಮಾಂಸದ ಊಟ ಏರ್ಪಡಿಸಿ ಸಂತೋಷ ಹಂಚಿಕೊಳ್ಳುವುದು ವಿಶೇಷವಾಗಿದೆ. ಹೆಚ್ಚಾಗಿ ಕೋಳಿ ಮಾಂಸವನ್ನು ಜನರು ಉಪಯೋಗಿಸುತ್ತಾರೆ.
ಹಬ್ಬದ ಅವಧಿಯಲ್ಲಿ ಸುಮಾರು 2.50 ಲಕ್ಷ ಕೆ.ಜಿ. ಕೋಳಿ ಮಾಂಸ ಪ್ರತಿವರ್ಷ ಮಾರಾಟವಾಗುತ್ತದೆ. ಹಾಗಾಗಿ ಕೋಳಿ ಫಾರಂ ಮಾಲೀಕರು ಲಕ್ಷಾಂತರ ರೂ. ಬಂಡವಾಳ ಹೂಡಿ ಕೋಳಿಗಳನ್ನು ತರಿಸಿ ನಗರ, ಪಟ್ಟಣ ಗ್ರಾಮೀಣ ಪ್ರದೇಶದ ಕೋಳಿ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ. ಆದರೆ ಕೊರೊನಾ ವೈರಸ್ ಹಾಗೂ ಹಕ್ಕಿ ಜ್ವರ ಭೀತಿಯಿಂದ ಕೋಳಿ ವ್ಯಾಪಾರದ ಮೇಲೆ ಪರಿಣಾಮ ಬೀರಿದ್ದು, ವ್ಯಾಪಾರವಿಲ್ಲದೆ ಕೋಳಿ ವ್ಯಾಪಾರಿಗಳು ತೊಂದರೆ ಅನೂಭವಿಸುವಂತಾಗಿದೆ.
ಬಿಕೋ ಎನ್ನುತ್ತಿರುವ ಅಂಗಡಿ: ಪ್ರತಿವರ್ಷ ಹಬ್ಬ ಹರಿದಿನಗಳಲ್ಲಿ ಕೋಳಿ ಮಾಂಸ ಕೊಳ್ಳಲು ಜನರು ಮುಗಿ ಬೀಳುತ್ತಿದ್ದರು. ಅಂಗಡಿಗಳು ಜನರಿಂದ ತುಂಬಿ ಹೋಗುತಿತ್ತು. ಆದರೆ ಈ ವರ್ಷ ಕೊರೊನಾ ವೈರಸ್ ಭೀತಿಯಿಂದ ಕೋಳಿ ಕೊಳ್ಳಲು ಜನರು ಮುಂದೆ ಬರುತ್ತಿಲ್ಲ, ಕಳೆದ ತಿಂಗಳು ಕೆ.ಜಿ ಬಾಯ್ಲರ್ ಕೋಳಿಗೆ 170 ರೂ. ಇದ್ದ ದರ ಈ ತಿಂಗಳು 35 ರೂ.ಗೆ ಇಳಿದಿದ್ದರೂ ಜನರು ಕೋಳಿ ಅಂಗಡಿ ಬಳಿ ಬರಲು ಹಿಂದೇಟು ಹಾಕುತ್ತಿದ್ದಾರೆ.
ಮಾ.10, 11ರಂದು ಪಟ್ಟಣದಲ್ಲಿ ನಡೆದ ಕೊಲ್ಲಾಪುರದಮ್ಮ, ದುರ್ಗಾದೇವಿ, ಆದಿಶಕ್ತಿ ಪರಾಶಕ್ತಿ, ಕೋಟೆ ಮಾರಮ್ಮ ಸೇರಿ ಶಕ್ತಿ ದೇವರ ಜಾತ್ರೆ ಹಿನ್ನೆಲೆಯಲ್ಲಿ ಕೋಳಿ ಅಂಗಡಿ ಬೆಳಂಬೆಳಗ್ಗೆ ತೆರೆದು ಕಾಯುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರು ಬಂದಿರಲಿಲ್ಲ. ವೈರಸ್ ಭೀತಿಯಿಂದ ಜನರು ಕೋಳಿ ಮಾಂಸ ಬಿಟ್ಟು ಮಟನ್ ಹಾಗೂ ಮೀನು ಖರೀದಿಗೆ ಹೆಚ್ಚು ಗಮನ ಹರಿಸಿದ್ದರಿಂದ ಮಟನ್ ಕೆ.ಜಿ.ಗೆ 400 ರೂ. ಇದ್ದ ದರ ದಿಢೀರ್ 550ರಿಂದ 600ರೂ.ಗೆ ದರ ಹೆಚ್ಚಿದೆ.
ಕಳೆದ ವರ್ಷ ಈ ಹಬ್ಬದಂದು ಸುಮಾರು ಎರಡರಿಂದ ಮೂರು ಸಾವಿರ ಕೆ.ಜಿ.ಚಿಕನ್ ಮಾರಾಟ ಮಾಡುತ್ತಿದ್ದೆವು. ಆದರೆ ಕೊರೊನಾ ಹಾಗೂ ಹಕ್ಕಿ ಜ್ವರ ಭೀತಿಯಿಂದ ಈ ಬಾರಿ 60 ಕೆ.ಜಿ. ಚಿಕನ್ ಮಾರಾಟವಾಗಿಲ್ಲ, ಕೆಲಸಗಾರರಿಗೆ ಸಂಬಳ, ಅಂಗಡಿ ಬಾಡಿಗೆ, ವಿದ್ಯುತ್ ಬಿಲ್ ಕಟ್ಟಲಾಗದ ಪರಿಸ್ಥಿತಿ ಎದುರಾಗಿದೆ.
– ಶಿವರಾಮ್, ಕೋಳಿ ಅಂಗಡಿ ವ್ಯಾಪಾರಿ
-ಕೆ.ಎನ್.ಲೋಕೇಶ್