Advertisement
ಡಿ. 22ರಿಂದ ಕ್ರಿಸ್ಮಸ್ ರಜೆ ಆರಂಭವಾಗಿದ್ದು, ಡಿ. 31ರ ವರೆಗೆ ಮುಂದುವರಿಯುತ್ತದೆ. ಹೀಗಾಗಿ, ಸಾಮಾನ್ಯವಾಗಿ ಈ ರಜೆಗೆ ಹೊರ ಜಿಲ್ಲೆ, ರಾಜ್ಯಗಳಿಂದ ಕರಾವಳಿ ಪ್ರವಾಸಕ್ಕೆಂದು ಇಲ್ಲಿನ ಲಾಡ್ಜ್ಗಳನ್ನು ರಜಾ ಅವಧಿಗೆ ಮುಂಚಿತವಾಗಿಯೇ ಕಾಯ್ದಿರಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಡಿ. 19ರಂದು ನಡೆದ ಗಲಭೆ, ಗೋಲಿಬಾರ್, ಡಿ. 22ರ ವರೆಗೆ ಕರ್ಫ್ಯೂ ಇದ್ದ ಹಿನ್ನೆಲೆಯಲ್ಲಿ ಮತ್ತು ಇದೀಗ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಯುತ್ತಿರುವ ಕಾರಣ ಪ್ರವಾಸಿಗರು ನಗರದಲ್ಲಿ ತಂಗಲು ಹಿಂದೇಟು ಹಾಕು ತ್ತಿದ್ದಾರೆ. ಇಲ್ಲಿನ ವಿವಿಧ ಹೊಟೇಲ್‌ನವರು ಪ್ರವಾಸೋದ್ಯಮ ಇಲಾಖೆಗೆ ನೀಡಿದ ಮಾಹಿತಿ ಪ್ರಕಾರ ಶೇ. 20ರಷ್ಟು ಕಡಿಮೆ ಬುಕ್ಕಿಂಗ್ ಈ ಬಾರಿ ಆಗಿದೆ. ರಜಾ ಅವಧಿಯಲ್ಲಿ ತುಂಬಿರುತ್ತಿದ್ದ ಲಾಡ್ಜ್ಗಳು ಪ್ರಸ್ತುತ ಖಾಲಿ ಖಾಲಿಯಾಗಿವೆ. ಆದರೆ ಒಂದು ದಿನದ ಪ್ರವಾಸಕ್ಕೆ ಬಂದು ಹೋಗುವವರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ.
ಪ್ರವಾಸ, ಶುಭ ಕಾರ್ಯಕ್ಕೆ ಬರಬೇಕಾದವರೂ ಕೆಲವು ಸಮಯಗಳ ಹಿಂದೆಯೇ ಲಾಡ್ಜ್ ರೂಂಗಳನ್ನು ಕಾಯ್ದಿರಿಸಿಕೊಂಡಿದ್ದರು. ಆದರೆ ಗಲಭೆ ಉಂಟಾದ ಪರಿಣಾಮ, ಕರ್ಫ್ಯೂ ವಿಧಿಸಿದ ಪರಿಣಾಮ ಆ ಅವಧಿಯಲ್ಲಾದ ಎಲ್ಲ ಬುಕ್ಕಿಂಗ್‌ಗಳು ರದ್ದಾಗಿವೆ. ಇದರಿಂದಾಗಿ ಲಾಡ್ಜ್ ಉದ್ಯಮಕ್ಕೆ ಅಂದಾಜು 50 ಲಕ್ಷ ರೂ.ಗಳಷ್ಟು ನಷ್ಟವಾಗಿದೆ. ಕೆಲವು ಪ್ರವಾಸಿಗರು ಪರಿಸ್ಥಿತಿ ಬಗ್ಗೆ ವಿಚಾರಿಸಿಕೊಂಡು ಲಾಡ್ಜ್ ಬುಕ್ ಮಾಡುತ್ತಿದ್ದಾರೆ. ಆದರೆ ಮೊದಲಿನಂತೆ ಸಂಪೂರ್ಣ ಲಾಡ್ಜ್ ಕಾಯ್ದಿರಿಸಿಕೊಳ್ಳುತ್ತಿಲ್ಲ. ಇನ್ನೊಂದು ವಾರ ಕಾಲ ಇದೇ ರೀತಿ ಮುಂದುವರಿಯಬಹುದು. ಅಷ್ಟರಲ್ಲಿ ಕ್ರಿಸ್ಮಸ್ ರಜೆಯೂ ಮುಗಿಯುವುರಿದಂದ ಲಾಡ್ಜ್ ಆದಾಯಕ್ಕೆ ಸಮಸ್ಯೆ ಹೆಚ್ಚಬಹುದು ಎನ್ನುವುದು ಅವರ ಮಾತು. ಬಸ್ ಬುಕ್ಕಿಂಗ್‌ಗೆ ಜನವೇ ಇಲ್ಲ
ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಪ್ರವಾಸ ತೆರಳಲು ಜನರಲ್ಲಿ ಆತಂಕ ಉಂಟಾಗುತ್ತಿದೆ. ಕಳೆದ ವರ್ಷಗಳಲ್ಲಿ ಕ್ರಿಸ್ಮಸ್, ಹೊಸ ವರ್ಷದ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಮತ್ತಿತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಖಾಸಗಿ ಬಸ್‌ಗಳಲ್ಲಿ ಸೀಟು ಕಾಯ್ದಿರಿಸುತ್ತಿದ್ದರು. ಕಳೆದ ವರ್ಷಗಳಲ್ಲಿ ಕ್ರಿಸ್ಮಸ್ ರಜೆಯಲ್ಲಿ ಕನಿಷ್ಠ 10 ಕುಟುಂಬಗಳು ಬಸ್ ಸೀಟು ಕಾಯ್ದಿರಿಸಿದ್ದರೆ, ಈ ಬಾರಿ ಕೇವಲ ಒಂದು ಕುಟುಂಬ ಮಂಗಳೂರಿಗೆ ಸೀಟು ಕಾಯ್ದಿರಿಸಿದೆ ಎನ್ನುತ್ತಾರೆ ನಗರದ ಟ್ರಾವೆಲ್ ಏಜೆನ್ಸಿಯೊಂದರ ಮಾಲಕ. ಮಂಗಳೂರಿನಿಂದ ಇತರೆಡೆಗಳಿಗೆ ಪ್ರವಾಸ ತೆರಳಲು ವಾಹನ ಬುಕ್ಕಿಂಗ್ ಮಾಡಿದವರ ಸಂಖ್ಯೆಯೂ ಈ ಬಾರಿ ತೀರಾ ಕಡಿಮೆ ಇದೆ ಎನ್ನುತ್ತಾರೆ ಅವರು.
Related Articles
Advertisement