Advertisement
ರಾಜ್ಯದಲ್ಲಿ 2019ರ ಜುಲೈಯಲ್ಲಿ ಒಟ್ಟು 14,30,483 ಮಕ್ಕಳ ಪರೀಕ್ಷೆ ಮಾಡಿದ್ದು, ಅದರಲ್ಲಿ 21,303 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಪ್ರಸ್ತಕ ಸಾಲಿನಲ್ಲಿ 2,89,338 ಮಕ್ಕಳ ಪರೀಕ್ಷೆ ಮಾಡಿದ್ದು, 20,350 ಮಕ್ಕಳು ಅಪೌಷ್ಟಿಕತೆ ಎದುರಿಸುತ್ತಿದ್ದಾರೆ. ಒಂದು ವರ್ಷದಲ್ಲಿ ರಾಜ್ಯದ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಶೇ. 5.54ರಷ್ಟು ಕಡಿಮೆಯಾಗಿದೆ.
ಕರಾವಳಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಲ ಮಕ್ಕಳಿಗೆ ವಾರದಲ್ಲಿ 5 ದಿನ ಹಾಲು, ನೆಲಗಡಲೆ ಮಿಠಾಯಿ, 2 ದಿನ ಮೊಟ್ಟೆ, ವಾರದಲ್ಲಿ 6 ದಿನಗಳ ಕಾಲ ಮಧ್ಯಾಹ್ನದ ಬಿಸಿಯೂಟ (ಪೌಷ್ಟಿಕ ಆಹಾರ) ನೀಡಲಾಗುತ್ತಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಾರದಲ್ಲಿ 5 ದಿನ ಮೊಟ್ಟೆ, 200 ಮಿ.ಲೀ. ಹಾಲು, ನೆಲಗಡಲೆ ಮಿಠಾಯಿ, 6 ದಿನ ಬಿಸಿಯೂಟ ಕೊಡಲಾಗುತ್ತಿದೆ. ಇಲಾಖೆಯ ವತಿಯಿಂದ ವಾರ್ಷಿಕ ಸುಮಾರು 2 ಸಾವಿರ ರೂ. ಮೊತ್ತದ ನ್ಯೂಟ್ರಿಮಿಕ್ಸ್ ಪೌಷ್ಟಿಕ ಆಹಾರದ ಪೊಟ್ಟಣವನ್ನು 3 ವರ್ಷದೊಳಗಿನ ಅಪೌಷ್ಟಿಕ ಮಕ್ಕಳ ಮನೆಗೆ ಕಳುಹಿಸಿಕೊಡಲಾಗುತ್ತಿದೆ. ಉಡುಪಿಯಲ್ಲಿ 1,351
ಉಡುಪಿ ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣ ತೀರಾ ಕಡಿಮೆ ಇದೆ. 2019ರ ಜುಲೈಯಲ್ಲಿ ಜಿಲ್ಲೆಯಲ್ಲಿ 54,557 ಮಕ್ಕಳನ್ನು ಪರೀಕ್ಷೆ ಮಾಡಲಾಗಿದ್ದು, 2,006 ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬಂದಿತ್ತು. ಪ್ರಸ್ತಕ ಸಾಲಿನಲ್ಲಿ 60,777 ಮಕ್ಕಳನ್ನು ಪರೀಕ್ಷಿಸಿದ್ದು, 1,351 ಮಕ್ಕಳಲ್ಲಿ ಅಪೌಷ್ಟಿಕತೆ ಪತ್ತೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ ಶೇ. 1.45 ಇಳಿಕೆಯಾಗಿದೆ.
Related Articles
2019ರ ಜುಲೈಯಲ್ಲಿ ದ.ಕ. ಜಿಲ್ಲೆಯಲ್ಲಿ 91,674 ಮಕ್ಕಳನ್ನು ಪರೀಕ್ಷೆ ಮಾಡಲಾಗಿತ್ತು. 2,800 ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬಂದಿತ್ತು. ಪ್ರಸ್ತಕ ಸಾಲಿನಲ್ಲಿ 99,542 ಮಕ್ಕಳನ್ನು ಪರೀಕ್ಷೆ ಮಾಡಿದ್ದು, 2,740 ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಲ್ಲಿಯ ಅಪೌಷ್ಟಿಕತೆ ಪ್ರಮಾಣ ಶೇ. 0.30ರಷ್ಟು ಕಡಿಮೆಯಾಗಿದೆ.
Advertisement
ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಾಕಷ್ಟು ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಕ್ಕಳಿಗೆ ಯಾವೆಲ್ಲ ಆಹಾರ ನೀಡಬೇಕು ಎನ್ನುವ ಕುರಿತು ಪೋಷಕರಿಗೆ ಅಂಗನವಾಡಿ ಕಾರ್ಯಕರ್ತರ ಮೂಲಕ ತಿಳಿಸಲಾಗುತ್ತಿದೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಎನ್‌ಆರ್‌ಸಿ ಕೇಂದ್ರಕ್ಕೆ ದಾಖಲಿಸಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.– ಸೇಸಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪನಿರ್ದೇಶಕ, ಉಡುಪಿ ತೃಪ್ತಿ ಕುಮ್ರಗೋಡು