ಹೊಸದಿಲ್ಲಿ: ಮುಂದಿನ ದಿನಗಳಲ್ಲಿ ನಿಮ್ಮ ಮೊಬೈಲ್‌ನಲ್ಲಿ ದಿಢೀರ್ ಆಗಿ ಇಂಟರ್ನೆಟ್ ಸ್ಥಗಿತಗೊಂಡರೆ ಇದಕ್ಕೆ ನಿಮಗೆ ಸೇವೆ ನೀಡುತ್ತಿರುವ ಟೆಲಿಕಾಂ ಸಂಸ್ಥೆಗಳ ಪಾತ್ರ ಇಲ್ಲದೇ ಇರಬಹುದು. ಏಕೆಂದರೆ, ಇದೇ ಮೊದಲ ಬಾರಿ ಕೇಂದ್ರ ಸರಕಾರ ಇಂಟರ್ನೆಟ್ ನಿರ್ಬಂಧ ನಿಯಮಾವಳಿ ರೂಪಿಸಿದ್ದು, “ಸಾರ್ವಜನಿಕ ತುರ್ತುಪರಿಸ್ಥಿತಿ ಅಥವಾ ಸಾರ್ವಜನಿಕ ಸುರಕ್ಷತೆ ಕಾರಣಕೊಟ್ಟು ಸೇವೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಮಾಡಬಹುದು!
ಹೌದು, ಆ.8 ರಂದೇ ಸರಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಈವರೆಗೆ ದೇಶದಲ್ಲಿ 144 ಸೆಕ್ಷನ್ ಜಾರಿ ಅಥವಾ ಶಾಂತಿ ಕದಡಿದಾಗ ಮಾತ್ರ ಸರಕಾರಗಳೇ ಇಂಟರ್ನೆಟ್ ನಿರ್ಬಂಧಿಸುತ್ತಿದ್ದವು. ಸೈಬರ್ ತಜ್ಞರ ಪ್ರಕಾರ, ಈ ಸ್ಥಗಿತಕ್ಕೆ ಒಂದು ಚೌಕಟ್ಟು ಇರಲಿಲ್ಲ. ಆದರೆ ಮುಂದೆ ಕಾನೂನಿನ ಚೌಕಟ್ಟಿನ ಒಳಗೇ ಅಂತಾರ್ಜಾಲವನ್ನು ನಿರ್ಬಂಧಿಸಬಹುದಾಗಿದೆ. ಸರಕಾರದ ಈ ನಿರ್ಧಾರಕ್ಕೆ ತಜ್ಞರು ಆತಂಕ ವ್ಯಕ್ತಪಡಿಸಿದ್ದು, ಇದರಿಂದ ಸಾರ್ವಜನಿಕ ಸೆನ್ಸಾರ್‌ಶಿಪ್ ನಡೆಯಬಹುದು ಎಂದಿದ್ದಾರೆ.
ಇತ್ತೀಚೆಗೆ ಗುಜರಾತ್‌ನ ಪರೀಕ್ಷೆ ವೇಳೆ ಇಂಟರ್ನೆಟ್ ಬ್ಲಾಕ್ ಮಾಡಿ, ಇದಕ್ಕೆ ಕಾಪಿ ಮಾಡದೇ ಇರಲು ಈ ಕ್ರಮ ಎಂದು ಹೇಳಲಾಗಿತ್ತು. ಹೀಗಾಗಿ ಮುಂದೆ ಇಂಥ ಹಲವು ನೆಪ ಹೇಳಿ ಇಂಟರ್ನೆಟ್ ಸ್ವಾತಂತ್ರ್ಯ ಭಂಗಪಡಿಸಬಹುದು ಎಂದು ತಜ್ಞರು ಆತಂಕಪಟ್ಟಿದ್ದಾರೆ. ಅಲ್ಲದೆ 2017ರಲ್ಲೇ 40 ಬಾರಿ ನಿರ್ಬಂಧಿಸಲಾಗಿದೆ.
ಅಧಿಸೂಚನೆಯಲ್ಲಿ ಏನಿದೆ?: ಸರಕಾರದ ಅಧಿಸೂಚನೆ ಪ್ರಕಾರ, ಅಂತರ್ಜಾಲ ಪ್ರತಿಬಂಧಕ್ಕೆ ಆದೇಶ ಕೊಡುವ ಅಧಿಕಾರ ಕೆಲವೇ ಕೆಲವು ಅಧಿಕಾರಿಗಳಿಗೆ ಇರುತ್ತದೆ. ಕೇಂದ್ರದ ಮಟ್ಟದಲ್ಲಿ ಗೃಹ ಇಲಾಖೆಯ ಕಾರ್ಯದರ್ಶಿ ಮತ್ತು ರಾಜ್ಯದ ಮಟ್ಟದಲ್ಲೂ ಗೃಹ ಇಲಾಖೆಯ ಕಾರ್ಯದರ್ಶಿಗೆ ಮಾತ್ರ ಇರುತ್ತದೆ. ಆದರೆ ಜಿಲ್ಲಾಧಿಕಾರಿಗಳು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದೇ ಎಂಬು ದಕ್ಕೆ ಯಾವುದೇ ಸ್ಪಷ್ಟತೆ ಇಲ್ಲ. ಇಂಥ ಆದೇಶಗಳನ್ನು ಜಂಟಿ ಕಾರ್ಯದರ್ಶಿ ಶ್ರೇಣಿಗಿಂತ ಕೆಳಗಿನವರ್ಯಾರೂ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದೆ.