ಮಡಿಕೇರಿ: ಶುಂಠಿ ಬೆಲೆ ಈ ಬಾರಿ ಪಾತಾಳಕ್ಕೆ ಕುಸಿದಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಶುಂಠಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಾಣಿಜ್ಯ ಬೆಳೆಗಳನ್ನು ಬೆಳೆಯುವುದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದೆಂಬ ಆಶಯದೊಂದಿಗೆ ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯ ರೈತರು ಸಾವಿರಾರು ಎಕ್ರೆ ಪ್ರದೇಶದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಶುಂಠಿ ಬೆಳೆಯುತ್ತಿದ್ದಾರೆ. ಆದರೆ ಈ ಬಾರಿ ಶುಂಠಿ ಬೆಲೆ ಹಿಂದೆಂದಿಗಿಂತಲೂ ಕಡಿಮೆ ಯಾಗಿರು ವುದರಿಂದ ಜಿಲ್ಲೆಯಲ್ಲಿ ಶುಂಠಿ ಬೆಳೆದ ರೈತರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈ ಬಾರಿ ಕೋವಿಡ್ ಸಂಕಷ್ಟದ ನಡುವೆಯೂ ಅನೇಕ ರೈತರು ಶುಂಠಿ ಬೆಳೆದಿದ್ದಾರೆ. ಆದರೆ ಇದೀಗ ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲದೆ ಅಂತಾ ರಾಜ್ಯಗಳಲ್ಲೂ ಬೇಡಿಕೆ ಕಡಿಮೆ ಯಾಗಿರುವ ಹಿನ್ನೆಲೆಯಲ್ಲಿ ಶುಂಠಿಯನ್ನು ಕೇಳುವವರೇ ಇಲ್ಲವಾಗಿದೆ.
ಈಗಾಗಲೇ ಶುಂಠಿ ಬೆಳೆಗೆ ಏಳು ತಿಂಗಳುಗಳು ಕಳೆಯುತ್ತಿದ್ದು, ಫಸಲನ್ನು ಮಾರಾಟ ಮಾಡುವ ಸಮಯ ಬಂದಿದೆ. ಆದರೆ ಕಳೆದ 10 ವರ್ಷಗಳಿಂದಲೂ 60 ಕೆ.ಜಿ. ಶುಂಠಿ ಮೂಟೆಗೆ ರೂ. 1,500ರಷ್ಟಿದ್ದ ಬೆಲೆ ಈ ಬಾರಿ ರೂ. 750ಕ್ಕೆ ಇಳಿದಿದೆ. ಆದರೂ ಖರೀದಿದಾರರು ಮುಂದೆ ಬಾರದೆ ಬೆಳೆ ಹಾಳಾಗುತ್ತಿದೆ. ಮತ್ತೂಂದೆಡೆ ಆಗಾಗ ಸುರಿಯುತ್ತಿರುವ ಭಾರೀ ಮಳೆ ಶುಂಠಿಗೆ ರೋಗವನ್ನು ಹರಡುತ್ತಿದೆ.
ಕಳೆದ ವರ್ಷಗಳಲ್ಲಿ ಇದೇ ಸಮಯದಲ್ಲಿ ಒಂದು ಮೂಟೆ ಶುಂಠಿಗೆ 2,600-3,000 ರೂ. ಬೆಲೆ ಸಿಗುತ್ತಿತ್ತು. ಆದರೆ ಈ ಬಾರಿ ಶುಂಠಿ ಬೆಳೆಯನ್ನು ಕೆಳುವವರೇ ಇಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
6 ತಿಂಗಳ ಹಿಂದೆ ಬೀಜದ ಶುಂಠಿಗೆ 5,000 ರೂ. ಬೆಲೆ ಇತ್ತು. ಆದರೆ ಈಗ ಬೀಜದ ಶುಂಠಿಗೂ ಕೇವಲ 1,100 ರೂ. ದೊರಕುತ್ತಿದೆ. ಇದರಿಂದಾಗಿ ಕುಶಾಲ ನಗರ ಹೋಬಳಿ ವ್ಯಾಪ್ತಿಯ ಹೆಬ್ಟಾಲೆ, ತೂರೆನೂರು, ಶಿರಂಗಾಲ ಸಿದ್ಧಲಿಂಗಪುರ, ಬಾಣವಾರ, ಗುಡ್ಡೆಹೂಸೂರು ಗ್ರಾ.ಪಂ. ವ್ಯಾಪ್ತಿಗಳಲ್ಲಿ ಮಳೆಯಿಂದಾಗಿ ಶುಂಠಿ ಗದ್ದೆ ಗಳಲ್ಲೇ ಕೊಳೆತು ಹೋಗುತ್ತಿದೆ. ಈ ಬಾರಿ ಶುಂಠಿಯ ಬೀಜದ ಬೆಲೆಯೂ ರೈತರಿಗೆ ದೊರಕುತ್ತಿಲ್ಲ. ಮತ್ತೂಂದೆಡೆ ನೀರು, ಗೊಬ್ಬರ ಹಾಗೂ ಕಾರ್ಮಿಕರಿಗಾಗಿ ಮಾಡಿದ ಖರ್ಚು ಅಧಿಕವಿದ್ದು, ಶುಂಠಿ ಬೆಳೆದ
ರೈತರು ತಲೆ ಮೇಲೆ ಕೈ ಇಟ್ಟು ಕೂರುವ ಪ್ರಸಂಗ ಎದುರಾಗಿದೆ.
ಸಾಲ ಮರುಪಾವತಿ ಚಿಂತೆ
ರೈತರು ಭೂಮಿ, ನೀರು, ಶುಂಠಿ ಬೀಜಕ್ಕೆ ಸಾವಿರಾರು ರೂ. ಖರ್ಚು ಮಾಡಿ ದ್ದಾರೆ. ಸಹಕಾರ ಸಂಘಗಳಲ್ಲಿ ಮತ್ತು ಇತರ ಸಂಸೆœಗಳಲ್ಲಿ ಸಾಲ ಪಡೆದು ಶುಂಠಿ ಬೆಳೆ ದವರೂ ಇದ್ದಾರೆ. ಆದರೆ ಈ ಸಾಲ ಮರುಪಾವತಿ ಹೇಗೆ ಎಂಬ ಚಿಂತೆಯಲ್ಲಿ ರೈತರಿದ್ದಾರೆ.
ಈ ವರ್ಷ ಬೇಡಿಕೆ ಕಡಿಮೆ
ಈ ಹಿಂದೆ ಶುಂಠಿ ಬೆಳೆ ಕಟಾವಿಗೆ ಬರುವುದಕ್ಕೆ ಮುಂಚೆಯೇ ಕೇರಳ ಸಹಿತ ವಿವಿಧೆಡೆಯ ವ್ಯಾಪಾರಿಗಳು ಶುಂಠಿ ಖರೀದಿಗೆ ಮುಂದಾಗುತ್ತಿದ್ದರು. ಆದರೆ ಈ ವರ್ಷ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಶುಂಠಿ ಫಸಲನ್ನು ಸಾಗಾಟ ಮಾಡಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ನೊಂದ ರೈತರು ಅಳಲು ತೋಡಿಕೊಂಡಿದ್ದಾರೆ.