ಬೆಂಗಳೂರು: ಲೋಕಸಭಾ ಚುನಾವಣೆಯು ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹದ ಮೇಲೆ ಪರಿಣಾಮ ಬೀರಿದ್ದು, ಕಳೆದ ಬಾರಿಯ ಆಸ್ತಿ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ 278 ಕೋಟಿ ರೂ. ಕಡಿಮೆಯಾಗಿರುವುದು ಕಂಡುಬಂದಿದೆ.
2019-20ನೇ ಸಾಲಿನ ಆರ್ಥಿಕ ವರ್ಷ ಆರಂಭವಾಗಿ 25 ದಿನಗಳು ಕಳೆದಿವೆ. ಆದರೆ, ಆಸ್ತಿ ಮಾಲೀಕರು ಮಾತ್ರ ತೆರಿಗೆ ಪಾವತಿಸಲು ನಿರುತ್ಸಾಹ ತೋರಿದ್ದಾರೆ. ಅದರಂತೆ ಈವರೆಗೆ ಕೇವಲ 400 ಕೋಟಿ ರೂ. ಸಂಗ್ರಹವಾಗಿದೆ. ಆಸ್ತಿ ತೆರಿಗೆ ಸಂಗ್ರಹದ ಗುರಿಯನ್ನು ಈ ಬಾರಿಯೂ ಸಾಧಿಸುವುದು ಅನುಮಾನವಾಗಿದೆ.
ಆರ್ಥಿಕ ವರ್ಷ ಮೊದಲ ತಿಂಗಳು ತೆರಿಗೆ ಪಾವತಿಸುವ ಮಾಲೀಕರಿಗೆ ಆಸ್ತಿ ತೆರಿಗೆಯ ಮೇಲೆ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಹೆಚ್ಚಿನ ಮಾಲೀಕರು ತೆರಿಗೆ ಪಾವತಿಸುವುದು ವಾಡಿಕೆ. ಆದರೆ, ಈ ಬಾರಿ ಲೋಕಸಭಾ ಚುನಾವಣೆ ಬಂದ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ.
ಕಳೆದ ವರ್ಷ ಏಪ್ರಿಲ್ 24ರ ವೇಳೆಗೆ 678 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ ಚುನಾವಣೆಯ ಜತೆಗೆ ಸಾಲುಸಾಲು ರಜೆಗಳಿದ್ದ ಪರಿಣಾಮ ತೆರಿಗೆ ಸಂಗ್ರಹ ಪ್ರಮಾಣ ಕಡಿಮೆಯಾಗಿದ್ದು, ರಿಯಾಯಿತಿ ಸಹಿತ ತೆರಿಗೆ ಪಾವತಿಸಲು ಆರು ದಿನ ಮಾತ್ರ ಬಾಕಿಯಿರುವುದರಿಂದ 200 ರಿಂದ 300 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2,500 ಕೋಟಿ ರೂ. ಸಂಗ್ರಹ: ಕಳೆದ 2018-18 ರಲ್ಲಿ 3,100 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ಪಾಲಿಕೆ ಹೊಂದಿತ್ತಾದರೂ, ಕೇವಲ 2,550 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಆ ಪೈಕಿ 2018ರ ಏಪ್ರಿಲ್ ತಿಂಗಳಲ್ಲೇ 970 ಕೋಟಿ ರು. ತೆರಿಗೆ ಸಂಗ್ರಹವಾಗಿತ್ತು. ಆದರೆ, ಈ ಬಾರಿ 3,500 ಕೋಟಿ ರೂ. ತೆರಿಗೆ ಸಂಗ್ರಹ ಗುರಿಯಿದ್ದರೂ, ಈವರೆಗೆ 400 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ.
ಏಪ್ರಿಲ್ ನಂತರ ರಿಯಾಯಿತಿ ಇಲ್ಲ: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಆಸ್ತಿ ತೆರಿಗೆ ರಿಯಾಯಿತಿ ಅವಧಿ ಯಾವುದೇ ಕಾರಣಕ್ಕೂ ಮುಂದುವರಿಯುವುದಿಲ್ಲವೆಂದು ಕಂದಾಯ ವಿಭಾಗದ ಜಂಟಿ ಆಯುಕ್ತರು ತಿಳಿಸಿದ್ದಾರೆ.
ಲೋಕಸಭಾ ಚುನಾವಣಾ ನೀತಿ ಸಂಹಿತೆ ಮೇ ತಿಂಗಳ ಅಂತ್ಯದವರೆಗೆ ಜಾರಿಯಲ್ಲಿರುವ ಕಾರಣ ಶೇ.5ರಷ್ಟು ತೆರಿಗೆ ವಿನಾಯಿತಿ ಅವಧಿ ವಿಸ್ತರಣೆ ಮಾಡಲಾಗುವುದಿಲ್ಲ. ಪಾಲಿಕೆ ಮಾಸಿಕ ಸಭೆ ನಡೆಸಿದರೂ ಯಾವುದೇ ರೀತಿಯ ನಿರ್ಧಾರ ಕೈಗೊಳ್ಳಲು ಅಧಿಕಾರವಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ರಿಯಾಯಿತಿ ಅವಧಿ ಮುಂದುವರಿಯುವುದಿಲ್ಲ ಎಂದಿದ್ದಾರೆ.