Advertisement

“ಪಾರಂಪರಿಕ ಮೌಲ್ಯಗಳಿಗೆ ಅವನತಿ ಅಪಾಯ’

09:12 PM Apr 13, 2019 | Team Udayavani |

ಬೆಳ್ತಂಗಡಿ: ಪ್ರಸ್ತುತ ದಿನಗಳಲ್ಲಿ ನಮ್ಮ ಪಾರಂಪರಿಕ ಜೀವನ ಮೌಲ್ಯಗಳು ಅವನತಿಯ ಅಪಾಯದಲ್ಲಿದ್ದು, ಈ ನಿಟ್ಟಿನಲ್ಲಿ ತುಳುನಾಡಿನ ಜನಪದೀಯ ಪರಂಪರೆಯ ಅರಿವನ್ನು ಹೊಸ ಪೀಳಿಗೆಗೆ ದಾಟಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ಅನಿವಾರ್ಯವಾಗಿವೆ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಬಿ.ಪಿ. ಸಂಪತ್‌ಕುಮಾರ್‌ ಹೇಳಿದರು.

Advertisement

ಶನಿವಾರ ಉಜಿರೆ ಎಸ್‌ಡಿಎಂ ಸೆಕೆಂಡರಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಬೆಳ್ತಂಗಡಿ ತಾ| ಘಟಕ, ಉಜಿರೆ ಎಸ್‌ಡಿಎಂ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಸಂಧಿ-ಸಂಕಥನ ನೇಜಿ ಹಾಡುಗಳ ಕಲಿಕೆ ಶಿಬಿರದ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾನಾಡಿದರು.

ಬಹಳ ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿ ನಾಟಿ, ಕೊಯ್ಲು ಸಹಿತ ಹಲವು ಕೆಲಸ ಮಾಡುವ ಸಮಯದಲ್ಲಿ ಜಾನಪದ ಹಾಡು ಹಾಡುತ್ತಿದ್ದರು. ಆದರೆ ಇಂದಿನ ಯುವ ಪೀಳಿಗೆಗೆ ತುಳುನಾಡಿನ ಜಾನಪದದ ಸುಳಿವೇ ಇಲ್ಲದಂತಾಗಿದೆ. ಜಾನಪದ ಸಂಸ್ಕೃತಿಯು ದಿನ ಉರುಳಿದಂತೆ ನಶಿಸುತ್ತಿದೆ. ಇದರ ಸಿರಿವಂತಿಕೆ ಪರಿಚಯಿಸುವ ಅನಿವಾರ್ಯ ಉದ್ಭವಿಸಿದೆ. ಹೊಸ ಪೀಳಿಗೆ ಜನಪದೀಯ ಸಂಸ್ಕೃತಿ ಉಳಿಸಿಕೊಳ್ಳಬೇಕಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ರೇವತಿ ಮತ್ತು ಗುಲಾಬಿ ಬಜಿಲ ಅವರು ಕಲಿಕೆ ಶಿಬಿರಕ್ಕೆ ಚಾಲನೆ ನೀಡಿದರು. ಅನಂತರ ಕೆಲವು ತುಳು ಹಾಡುಗಳನ್ನು ಮಕ್ಕಳಿಗೆ ಕಲಿಸುವ ಮೂಲಕ ಅದರ ಅರ್ಥವನ್ನು ಸಂಕ್ಷಿಪ್ತವಾಗಿ ವಿವರಿಸಲಾಯಿತು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಕಸಾಪ ತಾ| ಅಧ್ಯಕ್ಷ ಡಾ| ಬಿ. ಯಶೋವರ್ಮ, ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ| ಟಿ.ಎನ್‌.ಕೇಶವ್‌, ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ಕಸಾಪ ತಾ| ಗೌರವ ಕಾರ್ಯದರ್ಶಿ ರಾಮಕೃಷ್ಣ ಬೆಳಾಲ್‌ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕ ಡಾ| ಎಂ.ಪಿ. ಶ್ರೀನಾಥ್‌ ವಂದಿಸಿದರು. ಪ್ರಾಧ್ಯಾಪಕ ಪ್ರೊ| ದಿವಾಕರ್‌ ಕೊಕ್ಕಡ ನಿರ್ವಹಿಸಿದರು.

Advertisement

ಜಾನಪದ ಶ್ರೀಮಂತಿಕೆ
ಯುವ ಜನತೆಗೆ ತುಳುನಾಡಿನ ಜಾನಪದ ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಮಹತ್ವ ತಿಳಿಯಬೇಕಿದೆ. ತಂತ್ರಜ್ಞಾನದ ಪ್ರಭಾವ ಹೆಚ್ಚಿದಂತೆ ಹೊಸ ಆವಿಷ್ಕಾರಗಳ ಕಡೆಗೆ ಕುತೂಹಲ ಹೆಚ್ಚುತ್ತಲೇ ಇದೆ. ಇದರ ನಡುವೆ ಜನಪದೀಯ ವಿಶೇಷತೆಯೆಡೆಗೆ ಗಮನ ಕಡಿಮೆಯಾಗುತ್ತಿದೆ. ಇಂಥ ಸಂದರ್ಭ ತುಳುನಾಡಿನ ಜಾನಪದ ಶ್ರೀಮಂತಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿರ್ವಹಿಸಬೇಕಿದೆ.
ಡಾ| ಸಂಪತ್‌ಕುಮಾರ್‌ ಉಜಿರೆ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು.

Advertisement

Udayavani is now on Telegram. Click here to join our channel and stay updated with the latest news.

Next