Advertisement
ಜಿಲ್ಲಾದ್ಯಂತ ಮುಂಗಾರಿನಲ್ಲಿ ಭತ್ತವನ್ನೇ ಪ್ರಧಾನ ಬೆಳೆಯಾಗಿ ಬೆಳೆಯಲಾಗುತ್ತದೆ. ಭತ್ತದ ಕೊಯ್ಲಿನ ಅನಂತರ ಹಿಂಗಾರು ಬೆಳೆಯಾಗಿ ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು, ಮುಸುಕಿನ ಜೋಳ ಹೀಗೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ಕುಂದಾಪುರ, ಉಡುಪಿ, ಕಾರ್ಕಳ ವ್ಯಾಪ್ತಿಯಲ್ಲಿ ಉದ್ದು ಬೆಳೆಯುವವರ ಸಂಖ್ಯೆ ಹೆಚ್ಚಿದೆ.
2021-22ರಲ್ಲಿ 3,350 ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಬೆಳೆಯುವ ಗುರಿ ಹೊಂದಿದ್ದು, 2,463 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. 30 ಹೆಕ್ಟೇರ್ ಪ್ರದೇಶವನ್ನು ಹುರುಳಿ ಬೆಳೆಯಲು ಗುರುತಿಸಿದ್ದು, 23 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. 75 ಹೆಕ್ಟೇರ್ ಗುರಿಯಲ್ಲಿ 71 ಹೆಕ್ಟೇರ್‌ನಲ್ಲಿ ಹೆಸರು, 235 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 152 ಹೆಕ್ಟೇರ್‌ನಲ್ಲಿ ಅಲಸಂದೆ ಬೆಳೆಯಾಗಿತ್ತು. ಒಟ್ಟು 3,690 ಹೆಕ್ಟೇರ್ ಗುರಿಯಲ್ಲಿ 2,709 ಹೆಕ್ಟೇರ್ ದ್ವಿದಳ ಧಾನ್ಯ ಬಿತ್ತನೆಯಾಗಿತ್ತು. 2 ಸಾವಿರ ಹೆಕ್ಟೇರ್ ಗುರಿಯಲ್ಲಿ 1,744 ಹೆಕ್ಟೇರ್‌ನಲ್ಲಿ ನೆಲಗಡಲೆ ಬೆಳೆಯಲಾಗಿತ್ತು. ವಿಶೇಷವೆಂಬಂತೆ 70 ಹೆಕ್ಟೇರ್ ಪೈಕಿ 58 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬೆಳೆಯಾಗಿತ್ತು. ಬಿತ್ತನೆ ಕುಸಿತ
ಮುಂಗಾರಿನ ಕೊಯ್ಲು ಮುಗಿಯುತ್ತಿದ್ದಂತೆ ದ್ವಿದಳ ಧಾನ್ಯ, ಎಣ್ಣೆಕಾಳುಗಳ ಬಿತ್ತನೆ ನಡೆಯುತ್ತಿದೆ. ಆದರೆ ಈ ವರ್ಷ 3,350 ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಬೆಳೆಯುವ ಗುರಿ ಹೊಂದಿದ್ದರೂ ಈವರೆಗೆ ಬಿತ್ತನೆ ಆಗಿರುವುದು ಕೇವಲ 925 ಹೆಕ್ಟೇರ್. ಹುರುಳಿ, ಹೆಸರು, ಅಲಸಂದೆ ಎಲ್ಲಿಯೂ ಬಿತ್ತನೆಯಾಗಿಲ್ಲ. 1,750 ಹೆಕ್ಟೇರ್‌ನಲ್ಲಿ ನೆಲಗಡಲೆ ಬಿತ್ತನೆ ಗುರಿ ಹೊಂದಿದ್ದರೂ ಈವರೆಗೆ 400 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.
Related Articles
ಮುಂಗಾರಿನಲ್ಲಿ ಬೆಳೆದ ಭತ್ತವನ್ನು ಸಂರಕ್ಷಿಸಿ, ದಾಸ್ತಾನು ಮಾಡುವುದೇ ಜಿಲ್ಲೆಯ ರೈತರಿಗೆ ಇತ್ತೀಚೆಗಿನ ವರ್ಷಗಳಲ್ಲಿ ಕಷ್ಟವಾಗುತ್ತಿದೆ. ಅಕಾಲಿಕ ಮಳೆ, ಕಾಡುಪ್ರಾಣಿ- ಪಕ್ಷಿಗಳ ಹಾವಳಿ ಮತ್ತು ದಾಸ್ತಾನಿಗೆ ಸರಿಯಾದ ಸ್ಥಳಾವಕಾಶ ಇಲ್ಲದ್ದರ ಸಹಿತ ಹಲವು ಸಮಸ್ಯೆಗಳು ಇವೆ. ಹಿಂದೆಲ್ಲ ಭತ್ತ ಕೊಯ್ಲು ಮುಗಿಯುತ್ತಿದ್ದಂತೆ ದ್ವಿದಳ ಧಾನ್ಯ, ನೆಲಗಡಲೆ ಇತ್ಯಾದಿ ಬಿತ್ತನೆ ಮಾಡುತ್ತಿದ್ದರು. ಈಗ ಹಿಂಗಾರು ಬಿತ್ತನೆಗೆ ರೈತರು ಆಸಕ್ತಿ ತೋರಿಸುತ್ತಿಲ್ಲ. ನಿರ್ವಹಣೆ, ಬೆಳೆದ ಬೆಳೆ ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಹಿಂಗಾರಿನಲ್ಲಿ ಮಳೆ ಬಂದರೆ ಬಿತ್ತನೆಗೆ ಆಗಿರುವ ಖರ್ಚು ಕೂಡ ದಕ್ಕುವುದಿಲ್ಲ. ಅಲ್ಲದೆ ಇದು ಲಾಭದಾಯಕವೂ ಅಲ್ಲ. ಹೀಗಾಗಿ ಹಿಂಗಾರಿನಲ್ಲಿ ಧಾನ್ಯಗಳ ಬಿತ್ತನೆ ಕುಸಿಯುತ್ತಿದೆ ಎಂದು ರೈತರೊಬ್ಬರು ಮಾಹಿತಿ ನೀಡಿದ್ದಾರೆ.
Advertisement
ಜಿಲ್ಲೆಯಲ್ಲಿ ಈಗಾಗಲೇ ಎಲ್‌ಬಿಜಿ -791 ತಳಿಯ 20.50 ಕ್ವಿಂಟಾಲ್ ಹಾಗೂ ಇತರ ತಳಿಗಳ ಸುಮಾರು 11.50 ಕ್ವಿಂಟಾಲ್ ಸೇರಿದಂತೆ ಒಟ್ಟು 32 ಕ್ವಿಂಟಾಲ್ ಉದ್ದಿನ ಬೀಜವನ್ನು ರೈತರಿಗೆ ಹಂಚಿಕೆ ಮಾಡಿದ್ದೇವೆ. ಹಾಗೆಯೇ ಕೋಟದಲ್ಲಿ 225, ಕುಂದಾಪುರದಲ್ಲಿ 130 ಹಾಗೂ ಬೈಂದೂರಿನಲ್ಲಿ 248 ಕ್ವಿಂಟಾಲ್ ನೆಲಗಡಲೆ ಬಿತ್ತನೆಯಾಗಲಿದೆ.-ಸತೀಶ್ ಬಿ. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ – ರಾಜು ಖಾರ್ವಿ ಕೊಡೇರಿ