Advertisement

ಹಾಲು ಉತ್ಪಾದನೆಯ ಪ್ರಮಾಣದಲ್ಲಿ ಕುಸಿತ

09:09 AM Mar 05, 2020 | mahesh |

ಮಂಗಳೂರು: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳೂ ಸೇರಿದಂತೆ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಮತ್ತು ಖರೀದಿಯಲ್ಲಿ ಕುಸಿತ ಕಂಡುಬಂದಿದ್ದು, ಕೆಎಂಎಫ್‌ಗೆ ನಿರೀಕ್ಷಿತ ಪ್ರಮಾಣದ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಹಾಲು ಉತ್ಪಾದನೆಯ ಬೆಳವಣಿಗೆಯ ಗತಿ ಸತತವಾಗಿ ಇಳಿಕೆ ಕಂಡಿದೆ. ಪ್ರಸ್ತುತ ರಾಜ್ಯದಲ್ಲಿ ಹಾಲು ಸಂಗ್ರಹದಲ್ಲಿ ಒಟ್ಟಾರೆ ಶೇ.4ರಷ್ಟು ಋಣಾತ್ಮಕ ಪ್ರಗತಿ (ನೆಗೆಟಿವ್‌ ಗ್ರೋತ್‌) ದಾಖಲಾಗುತ್ತಿದೆ. ಇದು ಹೈನು ಉದ್ಯಮದಲ್ಲಿ ತೊಡಗಿಸಿಕೊಂಡವರ ಅನುಕೂಲ ಕರ ಬೆಳವಣಿಗೆಗೆ ಪೂರಕವಾಗಿಲ್ಲ.

Advertisement

ಹೀಗಾಗಿ ಒಟ್ಟಾರೆಯಾಗಿ ಹಾಲಿನ ಉತ್ಪಾದನೆ ಅಧಿಕವಾಗುತ್ತಿದ್ದರೂ ಒಕ್ಕೂಟಗಳು ಹಾಕಿಕೊಂಡ ನಿರೀಕ್ಷಿತ ಬೆಳವಣಿಗೆ ದರ ತಲುಪಲು ಸಾಧ್ಯವಾಗುತ್ತಿಲ್ಲ. ಅದರಲ್ಲಿಯೂ ಈ ಆರ್ಥಿಕ ವರ್ಷದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಉಡುಪಿ ಮತ್ತು ದ.ಕ. ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ದ‌.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವ್ಯಾಪ್ತಿಯಲ್ಲಿ ಈ ಬಾರಿ ಶೇ.6ರಷ್ಟು ಬೆಳವಣಿಗೆ ಗತಿ ನಿರೀಕ್ಷಿಸಲಾಗಿತ್ತು. ಆದರೆ ಆರ್ಥಿಕ ವರ್ಷದ ಅಂತ್ಯ ಸಮೀಪಿಸಿದರೂ ನಿರೀಕ್ಷಿತ ಗುರಿಯ ಶೇ.1ರಷ್ಟು ಮಾತ್ರ ತಲುಪಲು ಸಾಧ್ಯವಾಗಿದೆ.

ಸೀಸನ್‌ನಲ್ಲಿಯೂ ಕುಸಿತ
ಸಾಮಾನ್ಯವಾಗಿ ಸೆಪ್ಟಂಬರ್‌-ಡಿಸೆಂಬರ್‌ಅವಧಿ ದನಗಳು ಕರು ಹಾಕುವ ಸಮಯ. ಈ ಸಮಯದಲ್ಲಿ ದೇಸೀ ತಳಿ ದನಗಳು ಕೂಡ ಹೆಚ್ಚಿನ ಸಂಖ್ಯೆ ಯಲ್ಲಿ ಕರು ಹಾಕುತ್ತವೆ. ಹಾಗಾಗಿ ಹಾಲಿನ ಉತ್ಪಾದನೆ ಹೆಚ್ಚು. ಕಳೆದ ವರ್ಷ ಈ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 86 ಲಕ್ಷ ಲೀ. ಹಾಲು ಸಂಗ್ರಹವಾಗಿತ್ತು. ಆದರೆ ಈ ಬಾರಿ ಈ ಅವಧಿಯಲ್ಲೂ ಕುಸಿತ ವಾಗಿದ್ದು, 76 ಲಕ್ಷ ಲೀ.ಗಿಂತಲೂ ಕಡಿಮೆ ಸಂಗ್ರಹವಾಗಿದೆ.

ಕಾರಣವೇನು?
3 ವರ್ಷಗಳಿಂದ ರೈತರಿಗೆ ನೀಡುವ ಹಾಲಿನ ದರದಲ್ಲಿ ಏರಿಕೆ ಮಾಡದಿರುವುದು, ಈ ಬಾರಿ ಉಂಟಾದ ಪ್ರವಾಹ ಇತ್ಯಾದಿ ಕಾರಣಗಳಿವೆ. ಹೆಚ್ಚು ಹಾಲು ಉತ್ಪಾದಿಸುವ ಹೈನುಗಾರರು ನಿರಾಸಕ್ತಿ ತೋರಿಸಿರುವುದು ಪ್ರಮುಖ ಕಾರಣ ಎನ್ನಲಾಗಿದೆ.

ಗುಜರಾತ್‌ ಸೇರಿದಂತೆ ರಾಷ್ಟ್ರದ ಹಲವೆಡೆ ಹಾಲು ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಾಮಾನ್ಯವಾಗಿ 4 ವರ್ಷಗಳಿಗೊಮ್ಮೆ ಈ ರೀತಿಯ ಇಳಿಕೆ ಕಂಡುಬರುತ್ತದೆ. ಆದರೆ ಈ ವರ್ಷ ತುಂಬಾ ಇಳಿಕೆ ಕಂಡುಬಂದಿದೆ. ಮುಂದಿನ ವರ್ಷ ಏರಿಕೆಯಾಗದಿದ್ದರೆ ಹೆಚ್ಚಿನ ಗಮನಹರಿಸುವ ಅಗತ್ಯ ಉಂಟಾಗಲಿದೆ.
-ಡಾ| ಜಿ.ವಿ. ಹೆಗ್ಡೆ, ದ.ಕ. ಜಿಲ್ಲಾ ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕರು

Advertisement

ನಮ್ಮ ಒಕ್ಕೂಟ ವ್ಯಾಪ್ತಿಯಲ್ಲಿಯೂ ಹಾಲು ಉತ್ಪಾದನೆ ಬೆಳವಣಿಗೆ ದರ ನಿರೀಕ್ಷಿತ ಮಟ್ಟದ ಲ್ಲಿಲ್ಲ. ರೈತರಿಗೆ ಹಾಲಿನ ಬೆಲೆ ಹೆಚ್ಚಿಸುವುದು, ಪಶು ಆಹಾರದ ಬೆಲೆ ಇಳಿಸುವುದೇ ಮೊದಲಾದ ಉತ್ತೇಜನ ಕ್ರಮಗಳು ಅಗತ್ಯ. ನಮ್ಮ ಒಕ್ಕೂಟವು ಹಸಿರು ಹುಲ್ಲು ಬೆಳೆಸುವವರಿಗೆ ಸಬ್ಸಿಡಿ, ಕಡಿಮೆ ದರಕ್ಕೆ ಜೋಳದ ಕಡ್ಡಿಗಳ ಪೂರೈಕೆ ಮೊದಲಾದ ಕ್ರಮಗಳನ್ನು ಕೈಗೊಳ್ಳುತ್ತಿದೆ.
-ಕೆ. ರವಿರಾಜ್‌ ಹೆಗ್ಡೆ, ಅಧ್ಯಕ್ಷರು, ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next