ಮಂಗಳೂರು: ಕೇಂದ್ರ ಸರಕಾರದ ಸರ್ವಾಧಿಕಾರ ಧೋರಣೆಯಿಂದಾಗಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಸಂಸತ್ತಿನಿಂದ 146 ಸಂಸದರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಶುಕ್ರವಾರ ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಮಿನಿ ಸೌಧದ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಂಸತ್ತಿನಲ್ಲಿ ನಡೆದ ದಾಂಧಲೆಗೆ ಭದ್ರತಾ ವೈಫಲ್ಯ ಕಾರಣವಾಗಿದ್ದು ಅದಕ್ಕೆ ಗೃಹ ಸಚಿವರು ಸ್ಪಷ್ಟೀಕರಣ ನೀಡಬೇಕೆಂದು ಕೇಳಿದ್ದಕ್ಕೆ ಸಂಸದರನ್ನು ಅಮಾನತು ಮಾಡಲಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಯಾವುದನ್ನೂ ಪ್ರಶ್ನಿಸಲು ಅವಕಾಶವಿಲ್ಲ. ತನಿಖಾ ಸಂಸ್ಥೆಗಳನ್ನು ಬಳಸಿ ವಿಪಕ್ಷಗಳ ನಾಯಕರಿಗೆ ಕಿರುಕುಳ ನೀಡಲಾಗುತ್ತಿದೆ. ವಿಪಕ್ಷಗಳ ಆಡಳಿತ ಇರುವಲ್ಲಿ ರಾಜ್ಯಪಾಲರನ್ನು ಬಳಸಿಕೊಂಡು ತೊಂದರೆ ನೀಡಲಾಗುತ್ತಿದೆ. ದೇಶದ ಪ್ರಜಾಪ್ರಭುತ್ವ, ಜಾತ್ಯಾತೀತ, ಸಮಾಜವಾದದ ವ್ಯವಸ್ಥೆ, ಸಂಸ್ಕೃತಿಯನ್ನು ನಾಶ ಪಡಿಸಲಾಗುತ್ತಿದೆ.
ಮೂಲಭೂತ ಹಕ್ಕುಗಳು ದಿನೇ ದಿನೇ ಕ್ಷೀಣಿಸುತ್ತಿದೆ. ಮಾಧ್ಯಮಗಳು ಕೂಡ ಪ್ರಶ್ನೆ ಮಾಡಲಾಗದಂತಹ ಸ್ಥಿತಿ ಇದೆ. ಪ್ರಧಾನಿ ಮೂರನೆ ಬಾರಿ ಪ್ರಧಾನಿಯಾದರೆ ಸಂವಿಧಾನ ಕೂಡ ಉಳಿಯುವುದಿಲ್ಲ. ಯಾವ ಸಂಸ್ಥೆಯು ಇರುವುದಿಲ್ಲ. ಮೋದಿಯವರನ್ನು ಪೂಜೆ ಮಾಡಿ ಕುಳಿತುಕೊಳ್ಳುವ ಸ್ಥಿತಿ ಬರಲಿದೆ. ಸರ್ವಾಧಿಕಾರ ಧೋರಣೆ ವಿರುದ್ದ ಹೋರಾಟ ಮುಂದಿವರೆಸಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಮಾಜಿ ಸಚಿವ ರಮಾನಾಥ ರೈ, ಪಕ್ಷದ ಪ್ರಮುಖರಾದ ಮಮತಾ ಗಟ್ಟಿ, ಅಭಯ ಚಂದ್ರ ಜೈನ್ , ಶಶಿಧರ ಹೆಗ್ಡೆ ಮೊದಲಾದವರು ಪಾಲ್ಗೊಂಡಿದ್ದರು.