ಚಡಚಣ: ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರು ಚಡಚಣ ತಹಶೀಲ್ದಾರ್ ಸುರೇಶ ಚವಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಬೆಳಗ್ಗೆ ತಹಶೀಲ್ದಾರ್ ಕಚೇರಿ ಆವರಣದಲಿ ಜಮಾಯಿಸಿದ ರೈತರು ಗಂಟೆಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ಗುರುನಾಥ ಬಗಲಿ, ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಣೆ ಮಾಡಬೇಕು. ಹಣದುಬ್ಬರ ದರಕ್ಕೆ ಅನುಗುಣವಾಗಿ ದರ ನಿಗದಿ ಮಾಡುವುದರೊಂದಿಗೆ ಮಂಡಿ ಒಲಗೆ ಹಾಗೂ ಘೋಷಿತ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸಿದರೆ ಶಿಕ್ಷಾರ್ಹ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ ಅವರು, ಈ ಬಗ್ಗೆ ರಾಜ್ಯದಾದ್ಯಾಂತ ಜಿಲ್ಲಾಧಿಕಾರಿಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅದಕ್ಕಾಗಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದರು.
ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಶರಣಪ್ಪ ಭೈರಗೊಂಡ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಗತಿಸಿದರೂ ಕೃಷಿ ಕ್ಷೇತ್ರ ದುಸ್ಥಿತಿಯಲ್ಲಿದೆ. ರೈತರು ಬೆವರು ಹರಿಸಿ ಬೆಳೆದ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವ ಸ್ವಾತಂತ್ರ್ಯ ಇಲ್ಲ. ಮಧ್ಯವರ್ತಿಗಳೇ ಬೆಲೆ ನಿಗದಿ ಮಾಡುತ್ತಿರುವುದರಿಂದ ರೈತರ ಸ್ಥಿತಿ ಮತ್ತಷ್ಟು ಹೀನಾಯವಾಗುತ್ತಿದೆ ಎಂದ ಅವರು, ಇದು ತಡೆಗಟ್ಟಬೇಕಿದ್ದರೆ ರೈತರ ಉತ್ಪಾದನೆಗಳಿಗೆ ಲಾಭದಾಯಕ ಬೆಲೆ ನಿಗದಿಯಾಗಬೇಕು ಎಂದರು.
ಸಂಘದ ತಾಲೂಕು ಕಾರ್ಯದರ್ಶಿ ಶಿಕಂದರ ಶೇಖ್, ಸಹ ಕಾರ್ಯದರ್ಶಿ ಬಂದೇನವಾಜ ಶೇಖ್ ಹಾಗೂ ರೈತ ಮುಖಂಡರು ಇದ್ದರು.