Advertisement

ಕರ್ನಾಟಕವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ

09:10 PM Aug 19, 2019 | Lakshmi GovindaRaj |

ಮೈಸೂರು: ನೆರೆ ಹಾವಳಿ ಮತ್ತು ಮಳೆಯಿಂದ ರಾಜ್ಯದಲ್ಲಿ ಭಾರೀ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ. ರೈತ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಪ್ರಾಕೃತಿಕ ವಿಕೋಪದಲ್ಲಿ ಸಾವು-ನೋವು ಸಂಭವಿಸಿ, ಮನೆಗಳನ್ನು ಕಳೆದುಕೊಂಡು, ಜಮೀನುಗಳು ಮುಳುಗಡೆಯಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ನದಿಗಳ ಪ್ರವಾಹ ಮತ್ತು ಭಾರೀ ಮಳೆಯಿಂದಾಗಿ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ರಾಜ್ಯ ಸರ್ಕಾರ ತಾತ್ಕಾಲಿಕ ಪರಿಹಾರ ಮಾತ್ರ ನೀಡಿದ್ದು, ಈವರೆಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂದು ದೂರಿದರು.

ಶಾಶ್ವತ ಪರಿಹಾರ: ಕಳೆದ ವರ್ಷ ಕೂಡ ಇಂಥದ್ದೇ ಪರಿಸ್ಥಿತಿ ಉಂಟಾಗಿ ತೊಂದರೆಗೊಳಗಾದ ಜನರಿಗೆ ಈವರೆಗೂ ಶಾಶ್ವತ ಪರಿಹಾರ ದೊರಕದಿರುವುದರಿಂದ ಅವರ ಬದುಕು ಸುಧಾರಣೆಯಾಗಿಲ್ಲ. ನೆರೆ ಹಾವಳಿ ಜೊತೆಗೆ ರಾಜ್ಯದ 140 ತಾಲೂಕುಗಳು ಬರಪೀಡಿತವಾಗಿದ್ದು, ಬರಗಾಲದಿಂದ ಅಲ್ಲಿನ ಜನ-ಜಾನುವಾರುಗಳ ಬದುಕು ದುರ್ಬರವಾಗಿದೆ. ಒಂದೆಡೆ ಬರ ಮತ್ತೂಂದೆಡೆ ನೆರೆ ಹಾವಳಿ ಕರ್ನಾಟಕವನ್ನು ಬಾಧಿಸುತ್ತಿದ್ದರೂ ಕೇಂದ್ರ ಸರ್ಕಾರ ನೆರವಿಗೆ ಬಾರದೆ ರಾಜ್ಯದ ಹಿತ ಕಾಪಾಡುವಲ್ಲಿ ವಿಫ‌ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಲತಾಯಿ ಧೋರಣೆ: ಕೇಂದ್ರದ ಬಿಜೆಪಿ ಸರ್ಕಾರ, ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಕರ್ನಾಟಕ ರಾಜ್ಯದಲ್ಲಿ ಉಂಟಾಗಿರುವ ಸಂಕಷ್ಟ ಪರಿಸ್ಥಿತಿ ಎದುರಿಸಲು ನೆರವಿಗೆ ಬರಬೇಕು. ರಾಜ್ಯಕ್ಕೆ ಆಗಿರುವ ನಷ್ಟ ಭರಿಸಲು ಹಾಗೂ ಮುಂಬರುವ ಸಮಸ್ಯೆಗಳನ್ನು ಎದುರಿಸಲು ಅಗತ್ಯ ಸಂಪನ್ಮೂಲದ ನೆರವನ್ನು ಕರ್ನಾಟಕ ಸರ್ಕಾರಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.

ವೈಜ್ಞಾನಿಕ ಪರಿಹಾರ ನೀಡಿ: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೈಜ್ಞಾನಿಕ ಸಮೀಕ್ಷೆ ನಡೆಸಿ ಮನೆ, ಕೃಷಿ ಭೂಮಿ, ಬೆಳೆ ಕಳೆದುಕೊಂಡವರಿಗೆ, ಜನ-ಜಾನುವಾರಗಳನ್ನು ಕಳೆದುಕೊಂಡ ಕುಟುಂಬಗಳಿಗೆ ವೈಜ್ಞಾನಿಕ ಪರಿಹಾರ ಘೋಷಿಸುವ ಮೂಲಕ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ನೆರವಾಗಬೇಕಿದೆ ಎಂದರು.

Advertisement

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಅಶ್ವತ್ಥನಾರಾಯಣ ರಾಜೇ ಅರಸ್‌, ಲೋಕೇಶ್‌ ರಾಜೇ ಅರಸ್‌, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್‌, ಗುರುಲಿಂಗೇಗೌಡ, ಬನ್ನೂರು ಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರವಾಹ ಸಂತ್ರಸ್ತ ರೈತರಿಗೆ ತಲಾ 10 ಲಕ್ಷ ರೂ. ನೀಡಿ: ಮೈಸೂರು ಜಿಲ್ಲೆಯಲ್ಲಿ ಕಬಿನಿ ಮತ್ತು ಕೆಆರ್‌ಎಸ್‌ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ್ದರಿಂದ ಸಂತ್ರಸ್ತರಾದವರಿಗೆ ಕಾವೇರಿ, ಕಬಿನಿ, ಹೇಮಾವತಿ, ಲಕ್ಷ್ಮಣತೀರ್ಥ, ತಾರಕ ಹಾಗೂ ನುಗು ನದಿಗಳ ಪ್ರವಾಹದಿಂದ ಉಂಟಾಗಿರುವ ಬೆಳೆ ಮತ್ತು ಭೂಮಿ ನಷ್ಟವನ್ನು ಭರಿಸುವ ಜೊತೆಗೆ ಪುನರ್‌ ಅಭಿವೃದ್ಧಿಪಡಿಸಿಕೊಡಬೇಕು.

ಪ್ರಾಣ ಹಾನಿಯಾಗಿರುವ ರೈತ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಿ, ಕುಟುಂಬದವರಿಗೆ ಸರ್ಕಾರಿ ಕೆಲಸ ನೀಡಬೇಕು. ಪ್ರವಾಹ ಮತ್ತು ಮಳೆಯಿಂದ ಮಳೆ ಕಳೆದುಕೊಂಡು ಸಂತ್ರಸ್ತರಾಗಿರುವ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು 10 ಲಕ್ಷ ರೂ. ನೀಡಬೇಕು. ಭಾಗಶಃ ಹಾನಿಗೀಡಾಗಿರುವ ಮನೆಗಳ ದುರಸ್ತಿಗೂ ನೆರವು ನೀಡಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next