ಗುಳೇದಗುಡ್ಡ: ಪ್ರವಾಹದಿಂದ ಉತ್ತರ ಕರ್ನಾಟಕದಲ್ಲಿ ಊಹಿಸಲು ಸಾಧ್ಯವಾಗಷ್ಟು ನಷ್ಟ ಸಂಭವಿಸಿದೆ. ರೈತರು ಪ್ರವಾಹದಿಂದ ಕಂಗಾಲಾಗಿದ್ದಾರೆ. ಸಾಕಷ್ಟು ಸಾವು ನೋವು ಸಂಭವಿಸಿದೆ. ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖೀಲ್ ಕುಮಾರಸ್ವಾಮಿ ಒತ್ತಾಯಿಸಿದರು.
ತಾಲೂಕಿನ ಬಿ.ಎನ್.ಜಾಲಿಹಾಳ, ಬಾಚನಗುಡ್ಡ, ಪಟ್ಟದಕಲ್ಲ ಗ್ರಾಮಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದ ನಂತರ ಮಾತನಾಡಿದ ಅವರು, ಮನೆ, ಹೊಲಗಳಲ್ಲಿ ನೀರು ನುಗ್ಗಿ ಸಾವಿರಾರು ಕೋಟಿ ರೂ. ನಷ್ಟವಾಗಿದೆ ಎಂದರು.
ಜೆಡಿಎಸ್ ಯುವ ಘಟಕದಿಂದ ಸುಮಾರು 5 ಟ್ರಕ್‌ಗಳಲ್ಲಿ ವಿವಿಧ ಸಾಮಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ಸಂತ್ರಸ್ತರ ನೆರವಿಗೆ ಬರಬೇಕು. ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಕಾರ್ಯಕರ್ತರು ಉತ್ತರ ಕನಾಟಕದ ಜತೆಗಿದ್ದೇವೆ. ಸಂತ್ರಸ್ತರ ನೋವಿಗೆ ಸದಾ ಸ್ಪಂದಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ, ಶರಣಗೌಡ ಕಂದಕೂರ, ಚಂದ್ರಕಾಂತ ಶೇಖಾ, ಮಹೇಶ ಬಿಜಾಪುರ, ಅನ್ವರಖಾನ ಪಠಾಣ, ಟಿ.ಎಸ್. ಬೆನಕಟ್ಟಿ, ಉಮೇಶ ಹುನಗುಂದ, ಸಂತೋಷ ನಾಯನೇಗಲಿ, ರಾಘು ಬಳಿಗೇರ, ಸಚಿನ ರಾಂಪುರ ಇದ್ದರು.
ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ನೀಡಿ: ನಿಖೀಲ್
ನೆರೆಪೀಡಿತ ಕಿತ್ತಲಿ ಗ್ರಾಮಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್ ಕುಮಾರಸ್ವಾಮಿ ಭೇಟಿ ಸಂತ್ರಸ್ತರ ಸಮಸ್ಯೆ ಆಲಿಸಿದರು. ಗ್ರಾಮದೊಳಗೆ ಹೋಗಿ ಗ್ರಾಮಸ್ಥರನ್ನು ಮಾತನಾಡಿಸಿ, ಪ್ರವಾಹಕ್ಕೆ ಕುಸಿದು ಬಿದ್ದ ಮನೆಗಳನ್ನು ವೀಕ್ಷಿಸಿದರು. ಕಾಲು ಜಾರಿ ಬೀಳುತ್ತಿದ್ದರೂ ಅದನ್ನು ಲೆಕ್ಕಿಸದೇ ಬರಿಗಾಲಲ್ಲಿ ವೀಕ್ಷಣೆ ಮಾಡಿದರಲ್ಲದೇ, ಗ್ರಾಮದ ಹೊರಗೆ ಜೀವನ ದೂಡುತ್ತಿರುವ ಸಂತ್ರಸ್ತರ ಟೆಂಟ್‌ಗಳಿಗೆ ಭೇಟಿ ನೀಡಿ ಜನರ ನೋವಿಗೆ ಸ್ಪಂದಿಸಿದರು.
ಕಣ್ಣಿರು ಒರೆಸಿದ ನಿಖೀಲ್: ನಿಖೀಲ್ ಕುಮಾರಸ್ವಾಮಿ 1 ಗಂಟೆಗೂ ಹೆಚ್ಚು ಕಾಲ ಗ್ರಾಮದಲ್ಲಿ ಸಂಚರಿಸಿ ಸಮಸ್ಯೆ ಆಲಿಸಿದರು. ಬಳಿಕ ಮಾತನಾಡಿದ ಅವರು, ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಿ ಕೈಲಾದಷ್ಟು ಸಹಾಯ ಮಾಡುವ ಉದ್ದೇಶದಿಂದ ನನ್ನ ತಂದೆಯ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ ಎಂದರು. ನಾನು ಯಾರನ್ನು ಟೀಕಿಸುವುದಿಲ್ಲ. ಇಂತ ಪರಿಸ್ಥಿತಿಯಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಕೇಂದ್ರ-ರಾಜ್ಯ ಸರ್ಕಾರ ಪಕ್ಷಭೇದ ಮರೆತು ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು. ಪಕ್ಷದ ಮುಖಂಡ ಹನಮಂತ ಮಾವಿನಮರದ, ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ, ಶರಣಗೌಡ ಕಂದಕೂರ, ಮಹೇಶ ಬಿಜಾಪುರ, ಟಿ.ಎಸ್. ಬೆನಕಟ್ಟಿ, ರಾಘು ಬಳಿಗೇರ, ನಾಗರಾಜ ಮುದಿಯಪ್ಪನವರ, ಅನ್ವರಖಾನ್ ಪಠಾಣ, ಸಂತೋಷ ನಾಯನೇಗಲಿ ಇದ್ದರು.