ಹಳಿಯಾಳ: ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹದ ಹಾನಿಗೆ ಒಳಗಾಗಿ 8 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, 7 ಲಕ್ಷಕ್ಕೂ ಹೆಚ್ಚು ಜನರು ಇದರಿಂದ ನಿರಾಶ್ರಿತರಾಗಿರುವುದರಿಂದ ಈ ಭೀಕರ ಪ್ರವಾಹವನ್ನು ಕೇಂದ್ರ ಸರ್ಕಾರ ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಆಗ್ರಹಿಸಿದ್ದಾರೆ.
ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನಗಳಲ್ಲೇ ಕಾಣದ ಭೀಕರ ಜಲಪ್ರವಾಹದಿಂದ 22 ಜಿಲ್ಲೆಗಳಲ್ಲಿ 52 ಸಾವಿರ ಕೋಟಿಯಷ್ಟು ಹಾನಿಯಾಗಿದೆ. 2.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿಯ ಕಬ್ಬು ಬೆಳೆ ನಾಶವಾಗಿದೆ. ಕಾರಣ ಈ ಬಗ್ಗೆ ರಾಜ್ಯದ ಎಲ್ಲ ಸಂಸದರು ಒಗ್ಗೂಡಿ ನಿಯೋಗದೊಂದಿಗೆ ಪ್ರಧಾನಮಂತ್ರಿ ಮೋದಿಯವರ ಬಳಿಗೆ ತೆರಳಿ ರಾಷ್ಟ್ರೀಯ ವಿಪತ್ತು ಘೊಷಣೆ ಹಕ್ಕೊತ್ತಾಯ ಮಂಡಿಸಲಿ ಎಂದು ಕರೆ ನೀಡಿದರು.
ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ನೆರೆ ಪರಿಹಾರಕ್ಕಾಗಿ ಹಣ ಬಿಡುಗಡೆಯಾಗಿಲ್ಲ. ರಾಜ್ಯದ ಸಂಸದರು ಪ್ರಧಾನಿ ಮೋದಿಯವರಲ್ಲಿ ನೆರೆ ಪರಿಹಾರಕ್ಕಾಗಿ ಆಗ್ರಹಿಸಲು ಹೆದರುತ್ತಿದ್ದಾರೆ. ಇವರು ಜನರ ಗುಲಾಮರಲ್ಲ ಹೊರತು ಮೋದಿಯ ಗುಲಾಮರಂತೆ ವರ್ತಿಸುತ್ತಿದ್ದಾರೆಂದು ಕಿಡಿಕಾರಿದರು.
ನೆರೆ ಸಂತ್ರಸ್ತರಿಗೆ ಸರಕಾರ ನೀಡುತ್ತಿರುವ ಪರಿಹಾರದ ಎನ್‌ಡಿಆರ್‌ಎಫ್‌ನ ಮಾನದಂಡ ಅವೈಜ್ಞಾನಿಕವಾಗಿದೆ. ಎಕರೆಗೆ 2500 ರೂ. ಮಳೆ ಆಶ್ರಯಕ್ಕೆ, 5,500 ರೂ. ನೀರಾವರಿ ಪ್ರದೇಶದ ಬೆಳೆಗಳಿಗೆ ನೀಡುವುದು ಭಿಕ್ಷಾ ರೂಪದ ಪರಿಹಾರವಾಗಿದೆ ಎಂದು ಕಿಡಿಕಾರಿದ ಅವರು, 10 ವರ್ಷಗಳಿಂದಲೂ ಎನ್‌ಡಿಆರ್‌ಎಫ್ ಮಾನದಂಡ ಬದಲಾಗಿಲ್ಲ. ಆದರೇ ಎಂಪಿಎಂಎಲ್ಎಗಳ ಸಂಬಳದ ಭತ್ಯೆ ತಿದ್ದುಪಡಿಯಾಗಿ ಬೇಗನೆ ಅನುಮೋದನೆ ಕೂಡ ಗೊಳ್ಳುತ್ತದೆ. ಆದರೆ ಬಡವರ ಕುರಿತು ಯಾವುದೇ ಮಸೂದೆ ಬೇಗನೆ ತಿದ್ದುಪಡಿಯಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಂತಕುಮಾರ, ಕೇಂದ್ರ ಸರ್ಕಾರ ಈ ಬಗ್ಗೆ ತಿದ್ದುಪಡಿ ಮಾಡಲು ತುರ್ತ ಕ್ರಮಕೈಗೊಳ್ಳಬೇಕೆಂದರು.
ರಾಜ್ಯ ಸರ್ಕಾರ ತಕ್ಷಣವೇ ನೆರೆ ಸಂತ್ರಸ್ತ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು. ಅಲ್ಲದೇ ಹೊಸದಾಗಿ ದೀರ್ಘಾವಧಿ ಬಡ್ಡಿ ರಹಿತ ಸಾಲ ನೀಡುವ ಯೋಜನೆ ತಕ್ಷಣ ಜಾರಿಗೆ ತರುವ ಮೂಲಕ ಸರ್ಕಾರ ರೈತರಿಗೆ ಬೆನ್ನೆಲುಬಾಗಿ ನಿಲ್ಲಬೇಕೆಂದು ಆಶಿಸಿದರು.
ನೆರೆ, ಬರ, ಅತಿವೃಷ್ಟಿಯಾದಾಗ ಬೆಳೆ ನಷ್ಟ ಕೊಡುವ ಬದಲು ಎಲ್ಲ ಬೆಳೆಗಳನ್ನು ಎಲ್ಲ ಪ್ರದೇಶಗಳಿಗೂ ಅನ್ವಯವಾಗುವಂತಹ ಪ್ರಧಾನಿ ಫಸಲ್ ವಿಮಾ ಯೋಜನೆ ಜಾರಿಗೆ ತರಬೇಕು ಎಂದರು.
ರಾಜ್ಯದ ಕೆಲವು ಭಾಗದಲ್ಲಿ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗುತ್ತಿದೆ. ಕಾಳ ಸಂತೆಯಲ್ಲಿ ಯೂರಿಯಾ ಗೊಬ್ಬರ ಮಾರಾಟವಾಗುತ್ತಿದೆ. ಆದ್ದರಿಂದ ತಕ್ಷಣವೇ ಕೇಂದ್ರದ ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ರಾಜ್ಯಕ್ಕೆ ಹೆಚ್ಚುವರಿಯಾಗಿ ಯೂರಿಯಾ ಪೂರೈಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಎಂ.ವಿ. ಘಾಡಿ, ಸುರೇಶ ಎಂ. ಪಾಟೀಲ್, ತಾಲೂಕು ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ, ರಾಜ್ಯ ಸಂಟನಾ ಕಾರ್ಯದರ್ಶಿ ಅತ್ತಹಾಳು ದೇವರಾಜ, ರಾಜ್ಯ ಮುಖಂಡರಾದ ಲಕ್ಷ ್ಮಣ ಪಾಟೀಲ್, ವಿ.ಕೆ. ಬೊಬಾಟಿ, ತಾಲೂಕು ಅಧ್ಯಕ್ಷ ಶಂಕರ ಕಾಜ್‌ಗಾರ, ಶ್ರೀಕಾಂತ್ ಪಾಟೀಲ್, ಮಂಜು ಬಡಡೊಳಕರ್ ಇದ್ದರು.