Advertisement

ಬಜೆಟ್‌ನಲ್ಲಿ ಕೆರೆ ತುಂಬಿಸುವ ಯೋಜನೆ ಘೋಷಿಸಿ

02:06 PM Feb 01, 2018 | |

ಜಗಳೂರು: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ. 16 ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಜಗಳೂರು ಭಾಗದ 46 ಕೆರೆ ತುಂಬಿಸುವ ಯೋಜನೆ ಘೋಷಣೆ ಮಾಡಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ| ಶಿವಮೂರ್ತಿ
ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.

Advertisement

ಜಗಳೂರು ಪಟ್ಟಣದಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂತಿಮ ದಿನ ಸದ್ಧರ್ಮ ಸಿಂಹಾಸನಾರೋಹಣಗೈದು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜಗಳೂರು ಭಾಗದ ಕೆರೆಗಳ ಜೊತೆಗೆ ಹರಿಹರದಿಂದ ಸಿರಿಗೆರೆಯವರೆಗೆ ಇನ್ನೊಂದು 33 ಕೆರೆಗಳ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿಗಳು ಹಣವನ್ನು ಬಜೆಟ್‌ನಲ್ಲಿ ಮೀಸಲಿಡಲಿ. ಮುಖ್ಯಮಂತ್ರಿಗಳು ಎರಡು ಬೇಡಿಕೆ ಈಡೇರಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿಗಳು ಎರಡು ಬೇಡಿಕೆ ಈಡೇರಿಸುವ ಮೂಲಕ ಜಗಳೂರು ಭಾಗದ ಜನರಿಗೆ ಖುಷಿ ಕೊಡುವರು ಎಂಬ ವಿಶ್ವಾಸ ತಮಗಿದೆ ಎಂದರು.

ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಾಗ ಕೆಲ ಸಭಿಕರು ಜೋರಾಗಿ ಕೂಗಿದ್ದನ್ನು ಪ್ರಸ್ತಾಪಿಸಿದ ಶ್ರೀಗಳು, ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಎಂದೆಂದಿಗೂ ಈ ರೀತಿಯ ವರ್ತನೆ ಸಭಿಕರಿಂದ ನಡೆದಿರಲೇ ಇಲ್ಲ. ಹುಣ್ಣಿಮೆ ಮಹೋತ್ಸವ ಧರ್ಮ ಸಭೆಯೇ
ಹೊರತು ರಾಜಕೀಯ ಸಭೆಯಲ್ಲ. ಸರ್ವ ಜನಾಂಗ, ಧರ್ಮದವರು ಈ ಸಭೆಯಲ್ಲಿ ಭಾಗವಹಿಸುತ್ತಾರೆ. ಕೆಲ ಸಭಿಕರ ವರ್ತನೆಯಿಂದ ತಮ್ಮ ಮನಸಿಗೆ ತುಂಬಾ ನೋವುಂಟಾಗಿದೆ. ಇಂತಹ ಅನಾಗರಿಕ ವರ್ತನೆ ಮುಂದೆಂದಿಗೂ ತೋರಬಾರದು ಎಂದು ಎಚ್ಚರಿಸಿದರು.

ಜಗಳೂರಿನ ಹುಣ್ಣಿಮೆ ಮಹೋತ್ಸವ 8 ದಿನಗಳ ಕಾಲ ಬಹಳ ಚೆನ್ನಾಗಿಯೇ ನಡೆದಿತ್ತು. ಪ್ರತಿ ದಿನವೂ ಒಳ್ಳೆಯ ಮಾತುಗಳನ್ನು ಆಲಿಸಲಾಗಿತ್ತು. ಆದರೆ, 9ನೇ ದಿನ ನಾಡಿನ ಮುಖ್ಯಮಂತ್ರಿಗಳು ಮಾತನಾಡುವಾಗ ತೋರಿದ ವರ್ತನೆ ಸರಿಯಲ್ಲ. ಎನಿಸು ಕಾಲ
ಕಲ್ಲು ನೀರೊಳಗಿದ್ದರೂ ನೆನೆದು ಮೃದುವಾಗಬಲ್ಲುದೇ ಅಯ್ಯ… ಎನ್ನುವಂತೆ ನೀವು ಎಂಟು ದಿನ ಒಳ್ಳೆಯ ವಿಚಾರ ಕೇಳಿಯೂ ಮೃದುವಾಗಲಿಲ್ಲ ಎನ್ನುವುದಕ್ಕೆ ಇಂದಿನ ಘಟನೆಯೇ ಸಾಕ್ಷಿ. ಇದು ನಮ್ಮ ಮನಸ್ಸಿಗೆ ತುಂಬ ನೋವುಂಟಾಗುವಂತೆ ಮಾಡಿದೆ.
ತಾವು ಎಂದೆಂದಿಗೂ ಈ ಘಟನೆಯನ್ನು ಮರೆಯುವುದೇ ಇಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಮಾತನಾಡುವಾಗ ಕೂಗುವ ಇಂಥ ದುರ್ವರ್ತನೆ ಹಿಂದಿನ ಯಾವ ತರಳಬಾಳು ಹುಣ್ಣಿಮೆಯಲ್ಲಿಯೂ ಆಗಿರಲಿಲ್ಲ. ಎಷ್ಟೆಲ್ಲ
ನೀವು ಕೂಗಾಡಿದರೂ ನಮ್ಮ ಮೇಲಿನ ಗೌರವಕ್ಕಾಗಿ ಮುಖ್ಯಮಂತ್ರಿಗಳು ಒಂದಿಷ್ಟು ವಿಚಲಿತರಾಗದೆ ತಾವು ಹೇಳಬೇಕೆನ್ನುವ
ಮಾತುಗಳನ್ನು ಹೇಳಿದ್ದಾರೆ. ರಾಜಕೀಯ ಬರುತ್ತೆ ಹೋಗುತ್ತೆ. ಅದನ್ನೇ ದೊಡ್ಡದು ಮಾಡಬಾರದು ಎಂದು ತಾಕೀತು ಮಾಡಬಾರದು ಎಂದರು.

ಬೆಳೆ ಪರಿಹಾರದ ಹಣ ಪ್ರತಿಯೊಬ್ಬ ರೈತರ ಖಾತೆಗೆ ನೇರವಾಗಿ ಬಂದಿರುವುದು ಸರಕಾರದಿಂದಲೇ ಹೊರತು ನಮ್ಮಿಂದಲ್ಲ. 
ರಾಜಕಾರಣಿಗಳು ಮತ್ತು ಅಧಿಕಾರಿಗಳು ನಮ್ಮ ಮಾತಗಳನ್ನು ಕೇಳಬೇಕು ಎಂದೇನೂ ಇಲ್ಲ. ಆದರೂ, ನಮ್ಮ ಮೇಲಿರುವ ಗೌರವ, ಜನಗಳ ಮೇಲಿರುವ ಕಾಳಜಿಗಾಗಿ ನಾವು ಹೇಳಿದ್ದನ್ನು ಕೇಳಿಸಿಕೊಂಡು ಜಾರಿಗೆ ತಂದಿದ್ದಾರೆ. ಅಂತಹವರಿಗೆ ಅಪಮಾನ
ಆಗುವಂತೆ ವರ್ತನೆ ಮಾಡಿದ್ದು ನಮಗೆ ತುಂಬಾ ನೋವುಂಟು ಮಾಡಿದೆ. ಪ್ರಜ್ಞಾವಂತರಾದ ನೀವು ಈ ರೀತಿ ವಿಲಕ್ಷಣವಾಗಿ ವರ್ತಿಸಬಾರದು. ನೀವೇ ನಾಚಿಕೆಪಟ್ಟುಕೊಳ್ಳಬೇಕು. ಪಶ್ಚಾತ್ತಾಪ ಪಡಬೇಕು ಎಂದರು.

Advertisement

ನಿಜವಾದ ಭಾರತ ರತ್ನ ಎಂದರೆ ಭಾರತಕ್ಕೆ ಅನ್ನ ಕೊಡುವ ರೈತ. ರೈತರಿಗೆ ನೀರು ಕೊಟ್ಟು ಬಂಗಾರದ ಬೆಳೆ ತೆಗೆಯಲು 
ನೆರವಾದರೆ ಅದಕ್ಕಿಂತ ಭಾರತ ರತ್ನ ಬೇರಿಲ್ಲ. ಸರ್ಕಾರದಿಂದ ಇಷ್ಟೆಲ್ಲ ಉಪಕಾರ ಪಡೆದು ನೀವು ಹೀಗೆ ವರ್ತಿಸುವುದು ಸರಿಯಲ್ಲ.
ಹಿರಿಯ ಗುರುಗಳಾದ ಶಿವಕುಮಾರ ಸ್ವಾಮೀಜಿ ತಮ್ಮ ಆತ್ಮನಿವೇದನೆಯಲ್ಲಿ ಗುರುವಿಗಂಜಿ ಶಿಷ್ಯ… ಶಿಷ್ಯರಿಗಂಜಿ ಗುರು
ನಡೆಯಬೇಕು… ಎಂಬ ಅಪೇಕ್ಷೆ ಪಟ್ಟಿದ್ದರು. ಅದರಂತೆ ಇಂದು “ಪ್ರಭು(ಸರಕಾರ) ವಿಗಂಜಿ ಪ್ರಜೆಗಳು, ಪ್ರಜೆಗಳಿಗೆ ಅಂಜಿ ಪ್ರಭುಗಳು ನಡೆದುಕೊಳ್ಳಬೇಕು ಎಂದರು.

ಚಂದ್ರೋದಯಕ್ಕೆ ಅಂಬುದಿ ಹೆಚ್ಚುವುದಯ್ಯ, ಚಂದ್ರ ಕುಂದೆ ಕುಂದುವುದಯ್ನಾ… ಎನ್ನುವ ಬಸವಣ್ಣವರ ವಚನದಂತೆ ಚಂದ್ರನಿಗೂ
ಸಮುದ್ರಕ್ಕೂ ಆಕರ್ಷಣೆಯಿದೆ ಇನ್ನುವ ವಿಶ್ಲೇಷಣೆ ವಿಜ್ಞಾನದಲ್ಲಿದೆ. ಮನೋವಿಜ್ಞಾನದ ದೃಷ್ಟಿಯಿಂದ ಬಸವಣ್ಣ ಮುಂದುವರಿಸಿ ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಅಂಬುದಿ ಬೊಬ್ಬಿಟ್ಟಿತ್ತೇ… ಅಂಬುದಿಯ ಮುನಿ ಆಪೋಷವನ್ನು ಕೈಗೊಳ್ಳುವಲ್ಲಿ ಚಂದ್ರಮನಡ್ಡ ಬಂದನೇ… ಆರಿಗಾರೂ ಇಲ್ಲ… ಕೆಟ್ಟವಂಗೆ ಕಳೆಯಿಲ್ಲ ನಿನೇ ಜಗದ ನಂಟ… ಎಂದು ಹೇಳಿರುವುದರ ಹಿಂದೆ ನಮ್ಮ ನಮ್ಮ
ಕರ್ತವ್ಯ ಪ್ರಜ್ಞೆ ನಮ್ಮನ್ನು ಕಾಪಾಡುತ್ತದೆ. ಇಂದು ಕೌಟುಂಬಿಕ ಸಂಬಂಧಗಳು ವ್ಯವಹಾರಿಕವಾಗಿವೆ. ಮಕ್ಕಳ ಮುಂದೆ ಗಂಡ-ಹೆಂಡತಿ ಜಗಳವಾಡಬಾರದು. ಅದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗದಂತೆ ಪೋಷಕರು ಎಚ್ಚರವಹಿಸಬೇಕು ಎಂದು ತಿಳಿಸಿದರು.

ಹಳೇಬೀಡಿನಲ್ಲಿ ಮುಂದಿನ ಹುಣ್ಣಿಮೆ
ಮುಂದಿನ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವ ಹಳೆಬೀಡಿನಲ್ಲಿ ನಡೆಯುತ್ತದೆ ಎಂದು ಡಾ| ಶಿವಮೂರ್ತಿ ಶಿವಾಚಾರ್ಯ
ಸ್ವಾಮೀಜಿ ಘೋಷಿಸಿದರು. ಹಿರಿಯ ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕಾಲದಲ್ಲಿ ಜಗಳೂರು ಪಟ್ಟಣದಲ್ಲಿ ನಡೆದ ನಂತರ ತರಳಬಾಳು ಹುಣ್ಣಿಮೆ ನಡೆದ ಪ್ರದೇಶವೇ ಹಳೆಬೀಡು. ಈಗ ಅಲ್ಲಿ ಎರಡನೆಯ ಬಾರಿಗೆ ತರಳಬಾಳು ಹುಣ್ಣಿಮೆ
ಮಹೋತ್ಸವ ನಡೆಯುವುದು ಎಂದು ಶ್ರೀಗಳು ತಿಳಿಸಿದರು. 

ಮಠಕ್ಕೆ ಬಂದು ಬಿಡಿ
ಜಗಳೂರಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವ ಚೆನ್ನಾಗಿ ನಡೆದಿದೆ. ಸಮಿತಿಯವರು ತುಂಬಾ ಅಚ್ಚುಕಟ್ಟು, ವ್ಯವಸ್ಥಿತವಾಗಿ ಕೆಲಸ ಮಾಡಿದ್ದಾರೆ. ಹಾಲಿ ಶಾಸಕ ಎಚ್‌.ಪಿ. ರಾಜೇಶ್‌, ಮಾಜಿ ಶಾಸಕ ಎಸ್‌.ವಿ. ರಾಮಚಂದ್ರಪ್ಪ ಇಬ್ಬರು ಬಹಳ ಸಹಕಾರದಿಂದ ಕೆಲಸ ಮಾಡಿದ್ದಾರೆ. ನೀವಿಬ್ಬರು(ಎಚ್‌.ಪಿ. ರಾಜೇಶ್‌, ಎಸ್‌.ವಿ. ರಾಮಚಂದ್ರ) ಚುನಾವಣೆ ಸಂದರ್ಭದಲ್ಲಿ ಸಿರಿಗೆರೆ ಮಠಕ್ಕೆ ಬಂದು ಅಲ್ಲಿಯೇ ಇರಿ. ಈ ಭಾಗದ ಜನರು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ… ಎನ್ನುವ ಮೂಲಕ ಮತ್ತೂಮ್ಮೆ ಕೆಲ
ಸಭಿಕರ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಶ್ರೀಗಳು ಎಚ್‌.ಪಿ. ರಾಜೇಶ್‌, ಎಸ್‌.ವಿ. ರಾಮಚಂದ್ರ ಇಬ್ಬರಿಗೆ ಪರಸ್ಪರ ಹಾರ
ಹಾಕಿಸಿ, ಹಸ್ತಲಾಘವ ಮಾಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next