Advertisement

ಪ್ರಧಾನಿ ಮೋದಿಯಿಂದ ಐತಿಹಾಸಿಕ ಪ್ಯಾಕೇಜ್‌ ಘೋಷಣೆ

07:26 AM May 15, 2020 | Suhan S |

ಹುಬ್ಬಳ್ಳಿ: ಕೋವಿಡ್ ವೈರಸ್‌ನಿಂದ ಇಡೀ ವಿಶ್ವವೇ ನಲುಗಿ ಮುಂದೇನು ಎಂದು ಬಲಿಷ್ಠ ರಾಷ್ಟ್ರಗಳೇ ಕೈಚಲ್ಲಿ ಕುಳಿತಿರುವ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಐತಿಹಾಸಿಕ ಪ್ಯಾಕೇಜ್‌ ಘೋಷಣೆ ಮಾಡಿರುವುದು ಇಡೀ ಜಗತ್ತೇ ಹೆಮ್ಮೆ ಪಡುವಂತಹ ವಿಷಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಪ್ರಧಾನಮಂತ್ರಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂ.ಗಳ ಘೋಷಣೆ ಎಲ್ಲರನ್ನು ಅಚ್ಚರಿಗೊಳಿಸಿದೆ. ದೇಶದ ಆರ್ಥಿಕ ಬಲವನ್ನು ಪಾತಾಳಕ್ಕೆ ನೂಕಿ ಎದ್ದೇಳದಂತಹ ಪರಿಸ್ಥಿತಿ ನಿರ್ಮಾಣವಾಗಬಹುದೆಂಬ ಹಲವಾರು ಅರ್ಥಶಾಸ್ತ್ರಜ್ಞರ ಭಯ ನಿವಾರಿಸಿ ಮುಂಬರುವ ದಿನಗಳಲ್ಲಿ ಹಿಂದಿಗಿಂತಲೂ ಪ್ರಬಲವಾಗಿ ಆರ್ಥಿಕ ಪ್ರಗತಿಯತ್ತ ದಾಪುಗಾಲು ಹಾಕಿ 21ನೇ ಶತಮಾನವನ್ನು ಭಾರತದ ಶತಮಾನವನ್ನಾಗಿ ಮಾಡಲಿದೆ ಎಂಬ ಮೋದಿಯವರ ಧ್ಯೇಯವಾಕ್ಯ ದೇಶದಾದ್ಯಂತ ಉದ್ದಿಮೆ ಹಾಗೂ ವ್ಯಾಪಾರಸ್ಥರಲ್ಲಿ ಹೊಸ ಸಂಚಲನ ಮೂಡಿಸಿದೆ. “ಅನಿವಾರ್ಯತೆ ಆವಿಷ್ಕಾರದ ತಾಯಿ ‘ (Necessity is the mother of invention ) ಎಂದು ಹೇಳುವಂತೆ ಅತ್ಯಂತ ಭೀಕರ ವಿಷಮ ಪರಿಸ್ಥಿತಿಯನ್ನೇ ಅನುಕೂಲ ಸ್ಥಿತಿಯನ್ನಾಗಿ ಪರಿವರ್ತಿಸಬಲ್ಲ ಈ ವಿಶೇಷ ಆರ್ಥಿಕ ಪ್ಯಾಕೇಜ್‌ ಮೋದಿಯವರಂತಹ ದಿಟ್ಟ ನಾಯಕರಿಂದ ಮಾತ್ರ ಸಾಧ್ಯ.

ದೇಶದ ಇತಿಹಾಸದಲ್ಲಿಯೇ ಇದೊಂದು ದಾಖಲೆಯ ಪ್ಯಾಕೇಜ್‌ ಆಗಿದೆ. ಮೋದಿ ಅವರು ಘೋಷಿಸಿದ ಪ್ಯಾಕೇಜ್‌ ಆಧಾರದ ಮೇಲೆ ಕೇಂದ್ರ ಅರ್ಥಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ ವಲಯವಾರು ಹಣಕಾಸು ಹಂಚಿಕೆ ದೇಶದ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆದಾರರಿಗೆ ಹೊಸ ಆಶಾಕಿರಣ ಮೂಡಿಸಿದೆ. ಆದಾಯ ತೆರಿಗೆ ಪಾವತಿದಾರರಿಗೆ ಟಿಡಿಎಸ್‌ನಲ್ಲಿ ಶೇ. 25ರಷ್ಟು ವಿನಾಯಿತಿ, ಈಗಾಗಲೇ ಪಾವತಿ ಮಾಡಿದವರಿಗೆ ಕರ ಮರುಪಾವತಿ, ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳ ಕಾರ್ಮಿಕರ ಆರು ತಿಂಗಳ ಪಿಎಫ್‌ ವಂತಿಕೆಯನ್ನು ಸರ್ಕಾರವೇ ಭರಿಸುವಂತೆ ನೀಡಿದ ಆದೇಶ ದೇಶದ 72 ಲಕ್ಷ ಕಾರ್ಮಿಕರಿಗೆ ಅನುಕೂಲವಾಗಲಿದೆ. ಸಣ್ಣ ಉದ್ದಿಮೆಗಳಿಗೆ 3 ಲಕ್ಷ ಕೋಟಿ ಅನುದಾನ, ಅತೀ ಸಣ್ಣ ಉದ್ದಿಮೆಗಳಿಗೆ ಅಡಮಾನವಿಲ್ಲದ ಸಾಲ, 200 ಕೋಟಿ ರೂ. ವರೆಗಿನ ಕಾಮಗಾರಿಗಳಿಗೆ ಜಾಗತಿಕ ಟೆಂಡರ್‌ ನಿಷೇಧ, ಕಾರ್ಮಿಕರಿಗೆ ಇಪಿಎಫ್‌ ಮೂಲಕ 2,500 ರೂ. ನೆರವಿನಂತಹ ಕ್ರಮಗಳು ಹಾಗೂ ಸ್ವಾವಲಂಬಿತ ದೇಶ ಆಧಾರಿತ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್‌ ಭಾಗವಾಗಿ ಸಚಿವೆ ನಿರ್ಮಲಾ ಸೀತಾರಾಮನ್‌ ಹಲವಾರು ರೈತ ಹಾಗೂ ಕಾರ್ಮಿಕ ಪರ ಆರ್ಥಿಕ ಸುಧಾರಣೆಗೆ ಕ್ರಮ ಘೋಷಿಸಿದ್ದಾರೆ.

ಇದರನ್ವಯ ಈಗಾಗಲೇ ರೈತರು ಪಡೆದ 4 ಲಕ್ಷ ಕೋಟಿ ರೂ. ಕೃಷಿ ಸಾಲದ ಮೇಲಿನ ಬಡ್ಡಿ ವಿನಾಯಿತಿಯನ್ನು ಮೇ 31ರ ವರೆಗೆ ವಿಸ್ತರಿಸಲು 30,000 ಕೋಟಿ ರೂ., ಬಾಂಡ್‌ ಸಾಲ ಮತ್ತು 2.5 ಲಕ್ಷ ಕೋಟಿ ರಿಯಾಯ್ತಿ ದರದಲ್ಲಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಸಾಲ, ಅಂತಾರಾಜ್ಯ ವಲಸೆ ಬಂದ ಕೃಷಿ ಕಾರ್ಮಿಕರಿಗೆ ಅವರು ವಲಸೆ ಬಂದ ಸ್ಥಳದಲ್ಲಿ ನರೇಗಾ ಉದ್ಯೋಗ ಲಭ್ಯತೆ, ಕಾರ್ಮಿಕರ ಕೆಲಸಕ್ಕಾಗಿ ಅಭೂತಪೂರ್ವ ಸುಧಾರಣಾ ಕ್ರಮ, ಕಾರ್ಮಿಕರ ವೇತನದಲ್ಲಿನ ತಾರತಮ್ಯ ನಿವಾರಣೆ, ಕಾರ್ಮಿಕರ ಕೆಲಸ ಕಾರ್ಯಗಳ ಸ್ಥಿತಿಗತಿಗಳಲ್ಲಿ ಸುಧಾರಣೆ, ಕಾರ್ಮಿಕ ರಾಜ್ಯ ವಿಮಾ ವ್ಯವಸ್ಥೆಯಲ್ಲಿ ದೇಶಾದ್ಯಂತ ಒಂದೇ ವ್ಯವಸ್ಥೆ, ಅಂತಾರಾಜ್ಯ ವಲಸೆ ಕಾರ್ಮಿಕರ ಕೆಲಸಕ್ಕೆ 10 ಕೋಟಿ ರೂ. ಯೋಜನೆ, ವಲಸೆ ಕಾರ್ಮಿಕರಿಗೆ ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆ ಯೋಜನೆ, “ಒನ್‌ ನೇಶನ್‌-ಒನ್‌ ರೇಶನ್‌’ ವಿತರಣೆ ವ್ಯವಸ್ಥೆ ಇನ್ನಿತರರಘೋಷಣೆಗಳನ್ನು ಮಾಡಿದ್ದಾರೆ. ಪ್ರಧಾನಿ ಆಶಯದಂತೆ ದೇಶವನ್ನು ಹೊರದೇಶಗಳ ಮೇಲಿನ ಅವಲಂಬನೆ ತಪ್ಪಿಸಿ ಒಂದು ಸಂಪೂರ್ಣ ಸ್ವಾವಲಂಬಿ ರಾಷ್ಟ್ರವನ್ನಾಗಿ

ಪರಿವರ್ತಿಸುವ ಹಾಗೂ (Local should be vocal) ಎಂಬ ರಾಷ್ಟ್ರ ಕಲ್ಪನೆಯ ರಚನಾತ್ಮಕ ಕ್ರಮಗಳಾಗಿವೆ. 1918ರಲ್ಲಿ ಇಡೀ ವಿಶ್ವವನ್ನೇ ವಿನಾಶದತ್ತ ನೂಕುವಂತಹ ಸ್ಪಾನಿಶ್‌ ಫ್ಲ್ಯೂ ಮಹಾಮಾರಿ ಲಕ್ಷಾಂತರ ಜನರ ಆಹುತಿ ಪಡೆದ ಸಂದರ್ಭ ಒದಗಿದಾಗ ಅಮೆರಿಕಾದ ಆಗಿನ ಅಧ್ಯಕ್ಷ ವುಡ್‌ರೋ ವಿಲ್ಸನ್‌ ಕೈಗೊಂಡ ಅಭೂತಪೂರ್ವ ಆರ್ಥಿಕ ಕ್ರಮಗಳಿಂದ ಮೈ ಕೊಡವಿಕೊಂಡು ಎದ್ದಿತ್ತು ಅಮೆರಿಕಾ. ಕ್ರಮೇಣ ವಿಶ್ವದ ದೊಡ್ಡಣ್ಣನೇ ಆಯಿತು. ನಮ್ಮ ಪ್ರಧಾನಿ ಕೈಗೊಂಡ ಕ್ರಮದಿಂದ ಭಾರತ ದೊಡ್ಡಣ್ಣನಾಗದೆ, ವಿಶ್ವದ ಅಣ್ಣನಾಗಿ ವಿಶ್ವಾಸಗಳಿಸುವುದರಲ್ಲಿ ಸಂದೇಹವೇ ಇಲ್ಲವೆಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next